More

    233 ಮಂದಿಯನ್ನು ಬಲಿಪಡೆದ ಒಡಿಶಾ ರೈಲು ದುರಂತ ಹೇಗಾಯ್ತು? ಘಟನೆಗೆ ಕಾರಣ ಏನು? ಇಲ್ಲಿದೆ ಮಾಹಿತಿ…

    ನವದೆಹಲಿ: ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 233 ಮಂದಿ ಮೃತಪಟ್ಟು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ವಾಂತತ್ರ್ಯ ಭಾರತದ ನಂತರ ಸಂಭವಿಸಿದ ಅತ್ಯಂತ ಮಾರಾಣಾಂತಿಕ ಅಪಘಾತಗಳಲ್ಲಿ ಒಡಿಶಾ ರೈಲು ದುರಂತ ಕೂಡ ಒಂದಾಗಿದೆ. ಈ ದುರಂತಕ್ಕೆ ಕಾರಣವೇನು? ಮತ್ತು ಅಪಘಾತ ಹೇಗೆ ಸಂಭವಿಸಿತು ಎಂಬುದರ ಮಾಹಿತಿ ಇಲ್ಲಿದೆ.

    * ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಈ ದುರಂತ ಸಂಭವಿಸಿತು. ಘಟನಾ ಸ್ಥಳದಲ್ಲಿ 3 ರೈಲು ಮಾರ್ಗಗಳಿದ್ದವು.

    * ಪಶ್ಚಿಮ ಬಂಗಾಳದ ಹೌರಾ ನಗರದ ಶಾಲಿಮಾರ್ ರೈಲು ನಿಲ್ದಾಣದಿಂದ ತಮಿಳುನಾಡಿನ ಚೆನ್ನೈಗೆ ಮೇನ್ ಲೈನ್​ನಲ್ಲಿ ಶುಕ್ರವಾರ (ಜೂ. 2) ಸಂಜೆ 7.30ಕ್ಕೆ 12841 ನಂಬರ್​ನ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು ಹೊರಟಿತ್ತು. ಈ ವೇಳೆ ಒಡಿಶಾದ ಬಹನಗಾ ಬಜಾರ್ ಸ್ಟೇಷನ್ ಬಳಿ ಹಳಿ ತಪ್ಪಿದೆ.

    ಇದನ್ನೂ ಓದಿ: ಒಡಿಶಾ ರೈಲು ದುರಂತ; ಸಂತ್ರಸ್ತರ ಸಂಬಂಧಿಕರಿಗಾಗಿ ಇಲ್ಲಿವೆ ಸಹಾಯವಾಣಿ ಸಂಖ್ಯೆಗಳು

    * ಹಳಿ ತಪ್ಪಿದ ಕೋರಮಂಡಲ್​ ಎಕ್ಸ್​ಪ್ರೆಸ್​ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಮೊದಲು ಡಿಕ್ಕಿ ಹೊಡೆಯಿತು. ಇದರಿಂದ ಕೋರಮಂಡಲ್ ಎಕ್ಸ್‌ಪ್ರೆಸ್​ನ 12 ಬೋಗಿಗಳು ಹಳಿ ತಪ್ಪಿ, ಮೂರನೇ ರೈಲು ಮಾರ್ಗದ ಮೇಲೆ ಬಿದ್ದವು.

    * ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರಿನ ಯಶವಂತಪುರ- ಹೌರ ಎಕ್ಸ್‌ಪ್ರೆಸ್‌ ( ರೈಲು ನಂಬರ್​ 12864) ಬರುತ್ತಿತ್ತು. ಈ ರೈಲು ಬೆಂಗಳೂರಿನ ಬೈಯಪ್ಪನಹಳ್ಳಿಯ SMVT ರೈಲು ನಿಲ್ದಾಣದಿಂದ ಹೊರಟಿತ್ತು.

    * ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಆಗಮಿಸಿದ ಬೆಂಗಳೂರು- ಹೌರಾ ಎಕ್ಸ್‌ಪ್ರೆಸ್‌, ಹಳಿ ತಪ್ಪಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೆಂಗಳೂರು- ಹೌರಾ ಎಕ್ಸ್‌ಪ್ರೆಸ್​ನ ನಾಲ್ಕು ಬೋಗಿಗಳು ಸಹ ಹಳಿ ತಪ್ಪಿವೆ. ಇದರಿಂದಾಗಿ ಭೀಕರ ಅಪಘಾತ ಸಂಭವಿಸಿದ್ದು, ಈವರೆಗೆ 233 ಮಂದಿ ಅಸುನೀಗಿದ್ದಾರೆ.

    ರಕ್ಷಣಾ ಕಾರ್ಯ ಬಿರುಸು

    ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​)ಯ 3 ಘಟಕ, ಒಡಿಶಾದ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್​ಎಫ್​)ಯ 4 ಘಟಕ, 15ಕ್ಕೂ ಹೆಚ್ಚು ಅಗ್ನಿಶಾಮಕ ತಂಡ, 30ಕ್ಕೂ ಹೆಚ್ಚು ವೈದ್ಯರು, 200ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಮತ್ತು 60ಕ್ಕೂ ಹೆಚ್ಚು ಆಂಬ್ಯುಲೆನ್ಸ್​ಗಳು ಸ್ಥಳದಲ್ಲಿ ಬೀಡುಬಿಟ್ಟಿರುವುದಾಗಿ ಒಡಿಶಾ ಸರ್ಕಾರದ ಮುಖ್ಯಕಾರ್ಯದರ್ಶಿ ಪ್ರದೀಪ್​ ಜೆನಾ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

    ಪರಿಹಾರ ಘೋಷಣೆ

    ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ್ದಾರೆ.

    ಇದನ್ನೂ ಓದಿ: 51 ಡಿವೈಎಸ್​ಪಿಗಳ ವರ್ಗಾವಣೆ; ಇಲ್ಲಿದೆ ಪೂರ್ಣ ಪಟ್ಟಿ…

    ಪ್ರಧಾನಿ ಸಂತಾಪ

    ರೈಲು ದುರಂತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸಂತಾಪ ವ್ಯಕ್ತಪಡಿಸಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಿಂದ ಆಘಾತಕ್ಕೆ ಒಳಗಾಗಿದ್ದೇನೆ ಮತ್ತು ತೀವ್ರವಾಗಿ ನೊಂದಿದ್ದೇನೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

    ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts