More

    ಸಂಕಷ್ಟದಲ್ಲಿದ್ದ ಮಹಿಳೆಗೊಂದು ಮನೆ

    ಗಣೇಶ್ ಮಾವಂಜಿ ಸುಳ್ಯ

    ಆಶ್ರಯ ಯೋಜನೆಯಲ್ಲಿ ಸಿಕ್ಕಿದ ಮನೆಯಲ್ಲಿ ನಾಗದೋಷದ ಭಯದಿಂದ ವಾಸ್ತವ್ಯ ಹೂಡುವುದು ಕಷ್ಟವಾಗಿ ಅದನ್ನು ತೊರೆದು ಮನೆ ಇದ್ದೂ ಇಲ್ಲದಂತಾಗಿದ್ದ ದಲಿತ ಕುಟುಂಬಕ್ಕೆ ಯುವಕರು ಸೇರಿ ಮನೆ ನಿರ್ಮಾಣ ಮಾಡುತ್ತಿದ್ದಾರೆ.

    ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮೈಲೆಟ್ಟಿಪಾರೆಯ ಗೌರಿ ಎಂಬುವರಿಗೆ ಆಶ್ರಯ ಯೋಜನೆಯಲ್ಲಿ ಸಿಕ್ಕಿದ ಮನೆಯಲ್ಲಿ ವಾಸ್ತವ್ಯ ಹೂಡಿದ ಬಳಿಕ ಮನೆಯವರ ಆರೋಗ್ಯದಲ್ಲಿ ಏರುಪೇರಾಗಲು ಆರಂಭವಾಯಿತು. ಗೌರಿಯ ಪತಿ ಬಿಯಾಳು ನರಸಂಬಂಧಿ ಕಾಯಿಲೆಯಿಂದ ಕೆಲಸ ಮಾಡಲಾಗುತ್ತಿಲ್ಲ. ಈ ದಂಪತಿಗೆ ನಾಲ್ವರು ಹೆಣ್ಮಕ್ಕಳಿದ್ದು, ಮೂವರಿಗೆ ಮದುವೆಯಾಗಿದೆ. ಗೌರಿಯವರ ದುಡಿಮೆಯಿಂದಲೇ ಸಂಸಾರದ ಜೀವನ ನಿರ್ವಹಣೆ ಆಗಬೇಕಿದೆ.

    ಆಶ್ರಯ ಯೋಜನೆಯ ಮನೆ ಗೃಹಪ್ರವೇಶ ಬಳಿಕ ಮನೆಯೊಳಗೆ ಆಗಾಗ ನಾಗ ಸಂಚಾರವಾಗುತ್ತಿದ್ದುದರಿಂದ ಆ ಮನೆಯಲ್ಲಿ ಉಳಿದುಕೊಳ್ಳಲು ಭಯ ಉಂಟಾಯಿತು. ಹೆಣ್ಮಕ್ಕಳ ಮುಟ್ಟಿನ ಸಂದರ್ಭ ನಾಗರ ಹೆಚ್ಚಾಗಿ ಕಂಡುಬರುತ್ತಿದ್ದು ಆ ಸಂದರ್ಭ ಎಲ್ಲಿ ಅಶುದ್ಧವಾಗಿಬಿಡುವುದೋ ಎಂಬ ಹೆದರಿಕೆಯಿಂದ ಮನೆಯವರು ಸಂಬಂಧಿಕರ ಮನೆಯಲೇ ಉಳಿದುಕೊಳ್ಳುವಂತಾಯಿತು.

    ನಾಗರಹಾವು ಆಗಾಗ ಮನೆಯೊಳಗೆ ಕಾಣಿಸಿಕೊಳ್ಳತೊಡಗಿದಾಗ ಮನೆಯವರು ಜ್ಯೋತಿಷ್ಯದ ಮೊರೆ ಹೋದಾಗ ನಾಗದೋಷದ ಉಲ್ಲೇಖ ಬರತೊಡಗಿತು. ಇದರಿಂದ ಹೆದರಿದ ಅವರು ಮನೆಯನ್ನೇ ಬಿಡುವ ನಿರ್ಧಾರಕ್ಕೇ ಬಂದರು. ಒಮ್ಮೆ ಆಶ್ರಯ ಯೋಜನೆಯ ಮನೆ ಸಿಕ್ಕಿದರೆ ಮುಂದೆ 15 ವರ್ಷ ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ನಾಗದೋಷವಿದ್ದರೆ ಅದಕ್ಕೆ ಮುಕ್ತಿ ಮಾಡಿ ಮತ್ತೆ ಮನೆಗೆ ಸೇರಿಸುವ ಊರ ಜನರ ಮಾತಿಗೆ ಮನ್ನಣೆ ಕೊಡಲು ಒಮ್ಮೆ ಮನಸ್ಸು ಒಪ್ಪಿದರೂ ನಾಗರಹಾವಿನ ಭಯದಿಂದ ತನಗೆ ನಾಲ್ಕು ಕಂಬ ಊರಿ ನಿರ್ಮಿಸುವ ಜೋಪಡಿಯಾದರೂ ಆದೀತು, ಆ ಮನೆ ಬೇಡ ಎಂದುಬಿಟ್ಟರು ಗೌರಿ.

    ಯುವಕರಿಂದ ಶ್ರಮದಾನ: ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಯಸಿದ ಊರ ಹಿಂದು ಸಂಘಟನೆ ಪ್ರಮುಖ ಶಿವಪ್ರಸಾದ್ ಉಗ್ರಾಣಿಮನೆ, ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ ಬಳಿ ಚರ್ಚಿಸಿದರು. ಜಾಗರಣ ವೇದಿಕೆ ಹಿರಿಯ ಸದಸ್ಯ ಲಕ್ಷ್ಮಣ ಉಗ್ರಾಣಿಮನೆ, ಮಂಡೆಕೋಲು ಘಟಕ ಅಧ್ಯಕ್ಷ ಅಶ್ವಥ್ ಕಣೆಮರಡ್ಕ ಮೊದಲಾದವರು ಬೆಂಬಲ ವ್ಯಕ್ತಪಡಿಸಿದಾಗ ಗೌರಿಗೊಂದು ಮನೆ ಕಟ್ಟಿಕೊಡುವ ನಿರ್ಧಾರ ಸಂಘಟನೆಯಲ್ಲಿ ಗಟ್ಟಿಯಾಯಿತು. ಹಿಂದು ಜಾಗರಣ ವೇದಿಕೆ ಮಂಡೆಕೋಲು ಘಟಕದೊಂದಿಗೆ, ಸಂಘ ಪರಿವಾರದ ಇತರ ಸಂಘಟನೆಗಳೂ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರೂ ಜತೆಯಾಗಿ ವಾರದಲ್ಲಿ ಎರಡು ದಿನ ಶ್ರಮದಾನದ ಮೂಲಕವೇ ಮನೆ ನಿರ್ಮಾಣಕ್ಕೆ ಮುಂದಾದರು. ಕೆಲವು ದಾನಿಗಳು ಮರಳು, ಜಲ್ಲಿ, ಕಬ್ಬಿಣ ಪೂರೈಸಿದರು. ಪರಿಣಾಮ ಈ ಚಿಕ್ಕ ಸಂಸಾರಕ್ಕೊಂದು ಚೊಕ್ಕ ಮನೆ ಸಿದ್ಧವಾಗತೊಡಗಿದೆ. ಸೂರಿದ್ದೂ ಇಲ್ಲದಂತಾದ ಪರಿಸಿತ್ಥಿ ಬಗ್ಗೆ ಮರುಗುತ್ತಿದ್ದ ಈ ಮನೆಯವರ ಮುಖದಲ್ಲೀಗ ಮಂದಹಾಸ ಮೂಡತೊಡಗಿದೆ.

    ಸಂಘಟನೆ ಯುವಕರು ಸ್ಥಿತಿವಂತರಲ್ಲ. ಆದರೆ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ದೊಡ್ಡ ಮನಸ್ಸು ಇದ್ದುದರಿಂದ ಶನಿವಾರ, ಭಾನುವಾರ ಬಿಡುವು ಮಾಡಿಕೊಂಡು ಶ್ರಮದಾನ ಮಾಡಿ ಗೌರಿ ಕುಟುಂಬಕ್ಕೆ ಮನೆಯೊಂದು ಎದ್ದು ನಿಂತಿದೆ. ಇನ್ನಾದರೂ ಈ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುವಂತಾದರೆ ನಮ್ಮ ಪ್ರಯತ್ನ ಸಾರ್ಥಕ.
    -ಮಹೇಶ್ ಉಗ್ರಾಣಿಮನೆ
    ಅಧ್ಯಕ್ಷರು, ಹಿಂದು ಜಾಗರಣ ವೇದಿಕೆ, ಸುಳ್ಯ ತಾಲೂಕು

    ಇದ್ದ ಮನೆಯಲ್ಲಿ ಸಮಸ್ಯೆ ಉದ್ಭವಿಸಿದಾಗ ಬೇರೆ ಮನೆಯಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಯಿತು. ಆದರೆ, ಮನೆ ಇದ್ದೂ ಇಲ್ಲದಂತಾಯಿತಲ್ಲ ಎಂಬ ಕೊರಗು ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಸಂಘಟನೆಯ ಯುವಕರ ಶ್ರಮದಾನದ ಮೂಲಕ ನಮಗೆ ಮನೆ ನಿರ್ಮಾಣವಾದದ್ದು ನೋಡಿದರೆ ಕನಸೋ, ನನಸೋ ನಂಬಲಾಗುತ್ತಿಲ್ಲ.
    -ಗೌರಿ ಮೈಲೆಟ್ಟಿಪಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts