More

    ಹೋಟೆಲ್ ವಹಿವಾಟು ನಿಧಾನ ಚೇತರಿಕೆ

    ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಂದರ್ಭ ಬಂದ್ ಆಗಿದ್ದ ಹೋಟೆಲ್‌ಗಳು ಮರು ವಹಿವಾಟು ಆರಂಭಿಸಿ ಎರಡೂವರೆ ತಿಂಗಳು ಕಳೆದರೂ ನಿರೀಕ್ಷಿತ ಚೇತರಿಕೆ ಕಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಜಾರಿಯಾದ ಬಳಿಕ ಉದ್ಯಮ ಹಳಿಯತ್ತ ಹೊರಳುವ ನಿರೀಕ್ಷೆಗಳಿವೆ.
    ಉಭಯ ಜಿಲ್ಲೆಗಳಲ್ಲಿ ಇನ್ನೂ ಶೇ.25ರಷ್ಟು ಹೋಟೆಲ್‌ಗಳು ನಾನಾ ಸಮಸ್ಯೆಗಳಿಂದಾಗಿ ಬಾಗಿಲು ತೆರೆದಿಲ್ಲ. ನಗರದ ನಡುವೆ ಉತ್ತಮ ವ್ಯಾಪಾರ ನಡೆಯುತ್ತಿದ್ದ ಹೋಟೆಲ್‌ಗಳೂ ಆರಂಭವಾಗಿಲ್ಲ. ಇಲ್ಲಿ ಹೆಚ್ಚಾಗಿ ಕೆಲಸಕ್ಕಿದ್ದ ಉತ್ತರ ಕರ್ನಾಟಕದ ಕಾರ್ಮಿಕರು ಊರಿಗೆ ಹೋದವರು ವಾಪಸ್ ಬಂದಿಲ್ಲ. ಹೋಟೆಲ್‌ಗಳಲ್ಲಿ ಕೆಲಸಕ್ಕಿದ್ದ ಸ್ಥಳೀಯರೂ ಕೆಲವರು ಮರಳಿಲ್ಲ. ಕಾರ್ಮಿಕರ ಕೊರತೆಯೇ ಮುಖ್ಯ ಸಮಸ್ಯೆಯಾಗಿದೆ.

    ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ದೇವಸ್ಥಾನಗಳ ಭೇಟಿಗೆ ಅವಕಾಶ ಸಿಕ್ಕಿದ ನಂತರ ಗ್ರಾಹಕರ ಸಂಖ್ಯೆ ಸ್ವಲ್ಪ ಹೆಚ್ಚಳವಾಗಿದೆ. ಶಾಲಾ-ಕಾಲೇಜು, ಸಿನಿಮಾ ಮಂದಿರಗಳು ಪ್ರಾರಂಭವಾದರೆ ಉದ್ಯಮ ಚೇತರಿಕೆ ಕಾಣಲಿದೆ ಎನ್ನುತ್ತಾರೆ ಉಡುಪಿಯ ಡಯಾನಾ ಹೋಟೆಲ್ ಮಾಲೀಕ ಎಂ. ವಿಠಲ ಪೈ.

    ಜನರು ಮನೆ ಆಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. ನಿತ್ಯ ಹೋಟೆಲ್‌ಗಳಲ್ಲಿ ಊಟ ಮಾಡುತ್ತಿದ್ದ ವಿವಿಧ ಬ್ಯಾಂಕ್, ಕಚೇರಿ ಸಿಬ್ಬಂದಿಯೂ ಊಟ, ತಿಂಡಿಗೆ ಬರುವುದು ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ಹೋಟೆಲ್‌ಗಳಲ್ಲಿ ಶೇ.50ರಷ್ಟು ಮಾತ್ರ ವ್ಯವಹಾರ ನಡೆಯುತ್ತಿದೆ. ಉತ್ತಮ ದಿನಗಳ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಶ್ ಭಟ್.

    ಬಾರ್‌ಗಳಿಗೆ ಗ್ರಾಹಕರ ಕೊರತೆ: ಹಿಂದೆಲ್ಲ ತಡರಾತ್ರಿವರೆಗೆ ಗಿಜಿಗುಡುತ್ತಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಈಗ 9 ಗಂಟೆಯಾಗುತ್ತಿದ್ದಂತೆ ಖಾಲಿ ಖಾಲಿ. ಬಾರ್‌ಗಳಿಗೆ ಬರುವವರ ಸಂಖ್ಯೆ ಶೇ.50ರಷ್ಟು ಕುಸಿತವಾಗಿದೆ. ವಾರಾಂತ್ಯಗಳಲ್ಲೂ ಬಾರ್, ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ.
    ಲಾಕ್‌ಡೌನ್ ಮೊದಲು ದಿನಕ್ಕೆ 35-40 ಸಾವಿರ ರೂ, ವಾರಾಂತ್ಯಗಳಲ್ಲಿ 50-60 ಸಾವಿರ ರೂ. ವ್ಯಾಪಾರವಿತ್ತು. ಲಾಕ್‌ಡೌನ್ ಬಳಿಕ ಪಾರ್ಸೆಲ್ ಮಾತ್ರ ಅವಕಾಶ ಇದ್ದಾಗ 8ರಿಂದ 10 ಸಾವಿರ ರೂ. ವ್ಯಾಪಾರವಿತ್ತು. ಪ್ರಸ್ತುತ 15-20 ಸಾವಿರ ರೂ. ವ್ಯಾಪಾರವಾಗುತ್ತಿದೆ. ಇದರಲ್ಲಿ ನಿರ್ವಹಣೆ, ತೆರಿಗೆ ವೆಚ್ಚ ಕಳೆದರೆ ಏನೂ ಉಳಿಯುವುದಿಲ್ಲ. ಕ್ರಮೇಣ ವ್ಯಾಪಾರ ಚೇತರಿಕೆಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಂಗಳೂರಿನ ಬಾರ್ ಮಾಲೀಕ ನವೀನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಗ್ರಾಹಕರ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ. ರಾತ್ರಿ 8-9 ಗಂಟೆ ವೇಳೆಗೆ ಯಾರೂ ಇರುವುದಿಲ್ಲ. ವ್ಯಾಪಾರ ಕಡಿಮೆಯಾಗಿರುವುದರಿಂದ ಸಿಬ್ಬಂದಿ ಕಡಿಮೆ ಮಾಡಿದ್ದೇವೆ. ಮದ್ಯ ಪಾರ್ಸೆಲ್ ಕೊಂಡು ಹೋಗುವವರ ಸಂಖ್ಯೆ ಇಳಿಕೆಯಾಗಿದೆ ಎಂದು ಕಾವೂರಿನ ಬಾರ್ ಮ್ಯಾನೇಜರ್ ಶಂಕರ್ ಹೇಳುತ್ತಾರೆ.

    ಕಾರಣ ಹಲವು:ಹೋಟೆಲ್/ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳತ್ತ ಹೋಗುವ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಮಂದಿಗೆ ಉದ್ಯೋಗವಿಲ್ಲ. ಉದ್ಯೋಗ ಇದ್ದವರಿಗೆ ವೇತನ ಕಡಿತ. ಉತ್ತರ ಭಾರತ, ಉತ್ತರ ಕರ್ನಾಟಕದ ಕಾರ್ಮಿಕರು ಊರಿಗೆ ಹೋದವರು ಹೆಚ್ಚಿನ ಮಂದಿ ಹಿಂತಿರುಗಿಲ್ಲ. ಕೈಯ್ಯಲ್ಲಿ ಹಣ ಚಲಾವಣೆ ಕಡಿಮೆಯಾಗಿರುವುದರಿಂದ ಹೋಟೆಲ್/ ಬಾರ್‌ಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಆಗ ಸ್ನೇಹಿತರೊಂದಿಗೆ ಬಾರ್‌ಗಳಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು, ಈಗ ಹೋಲ್‌ಸೇಲ್ ವೈನ್‌ಶಾಪ್‌ಗಳಿಂದ ಎಂಆರ್‌ಪಿ ದರದಲ್ಲಿ ಮದ್ಯ ಖರೀದಿಸಿ ಮನೆ ಅಥವಾ ಬೇರೆಲ್ಲೋ ಕುಳಿತು ಸೇವಿಸುತ್ತಾರೆ ಎಂದು ಮಾಲೀಕರು ಹೇಳುತ್ತಾರೆ.

    ಹೋಟೆಲ್‌ಗಳು ಬಾಗಿಲು ತೆರೆದರೆ ವಿದ್ಯುತ್, ನೀರು, ಗ್ಯಾಸ್, ಕಟ್ಟಡ ಬಾಡಿಗೆ, ಕಾರ್ಮಿಕರ ವೇತನ ಪಾವತಿಸಬೇಕು. ಅದಕ್ಕೆ ಬೇಕಾದಷ್ಟು ವ್ಯಾಪಾರ ಆಗದಿದ್ದರೆ ನಷ್ಟವಾಗುತ್ತದೆ. ಆದ್ದರಿಂದ ಕೆಲವೊಂದು ಹೋಟೆಲ್‌ಗಳು ಇನ್ನೂ ಪುನರಾರಂಭಗೊಂಡಿಲ್ಲ.
    – ಕುಡ್ಪಿ ಜಗದೀಶ್ ಶೆಣೈ, ದ.ಕ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

    ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವುಗೊಂಡ ಬಳಿಕ ಹೋಟೆಲ್ ಉದ್ಯಮ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆಯಾಗಿಲ್ಲ. ವ್ಯಾಪಾರ ಇಲ್ಲದ ಕಾರಣ ಖರ್ಚು ವೆಚ್ಚ ನಿಭಾಯಿಸಲು ಕಷ್ಟವಾಗುತ್ತಿದೆ. ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ಲಾಡ್ಜ್‌ಗಳಿಗೂ ಆದಾಯವಿಲ್ಲ.
    – ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts