More

    ನೆಲಕಚ್ಚಿದ ಹೋಟೆಲ್ ಉದ್ಯಮ

    ಅವಿನ್ ಶೆಟ್ಟಿ ಉಡುಪಿ

    ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಪರಿಣಾಮ ಸಂಪೂರ್ಣ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಜನವರಿ ತಿಂಗಳ ಬಳಿಕ ಸುಧಾರಣೆಯತ್ತ ಮುಖ ಮಾಡುತ್ತಿರುವಾಗಲೇ ಮತ್ತೆ ಕೋವಿಡ್ ಎರಡನೆ ಅಲೆಯ ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮಕ್ಕೆ ಸಹಿಸಲಾರದ ಹೊಡೆತ ನೀಡಿದೆ. ಪ್ರಸ್ತುತ ಹೋಟೆಲ್ ಉದ್ಯಮ ಚೇತರಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯೊಂದರಲ್ಲೆ ಹೋಟೆಲ್ ಉದ್ಯಮ ಅಂದಾಜು 150 ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ.

    ಎರಡನೇ ಅಲೆ ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಬೆರಳಣಿಕೆಯಷ್ಟು ಹೋಟೆಲ್‌ಗಳು ಮಾತ್ರ ವ್ಯಾಪಾರ ನಡೆಸಿದ್ದು, ಲಾಭದಾಯಕವಾಗಿ ನಡೆದಿಲ್ಲ ನಷ್ಟವೇ ಹೆಚ್ಚಾಗಿದೆ. ಪ್ರವಾಸೋದ್ಯಮ ಚೇತರಿಕೆಯಾಗುವವರೆಗೂ ಹೋಟೆಲ್ ಉದ್ಯಮ ಲಾಭದಾಯಕವಾಗದು ಎನ್ನುತ್ತಾರೆ ಮಾಲೀಕರು.

    ಕೆಲಸ ಕಳೆದುಕೊಂಡ ನೌಕರರು
    ಲಾಕ್‌ಡೌನ್ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಕೆಲವು ಹೋಟೆಲ್ ಹೊರತುಪಡಿಸಿ ಬಹುತೇಕ ಹೋಟೆಲ್‌ಗಳು ಹಲವು ತಿಂಗಳು ಬಾಗಿಲು ಮುಚ್ಚಿದ್ದವು. ಮಾಲೀಕರು ನಷ್ಟದ ಭೀತಿಯಲ್ಲಿದ್ದರೆ, ಸಾವಿರಾರು ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಉಡುಪಿ- ಮಣಿಪಾಲ-ಮಲ್ಪೆಯಲ್ಲಿ 800 ರಿಂದ 1000ಕ್ಕೂ ಅಧಿಕ ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳು ಕಾರ್ಯಾಚರಿಸುತ್ತಿವೆ. 200ರಿಂದ 300 ವಸತಿಗೃಹಗಳು ನಷ್ಟದಲ್ಲಿವೆ. ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿ ಹೋಟೆಲ್, ಲಾಡ್ಜ್ ನಡೆಸುತ್ತಿರುವ ಮಾಲೀಕರು ಕಂಗಲಾಗಿದ್ದಾರೆ.

    ಪುನರಾರಂಭಿಸಲು ಆರ್ಥಿಕ ಹೊರೆ
    ಮೂರ್ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯ ಹಲವು ಮಂದಿ ಬ್ಯಾಂಕ್‌ಗಳಿಂದ ಸಾಲ ಪಡೆದು, ಬಡ್ಡಿಗೆ ಕೈ ಸಾಲ ಪಡೆದು ದೂರದ ಬೆಂಗಳೂರು, ಬೆಳಗಾವಿ, ಮೈಸೂರು, ಹಾಸನ, ಹುಬ್ಬಳ್ಳಿ, ಮುಂಬೈನಲ್ಲಿ ಸಣ್ಣ ಮತ್ತು ದೊಡ್ಡ ಮಟ್ಟದ ಸಸ್ಯಾಹಾರಿ ಮತ್ತು ಮಾಂಸಹಾರಿ ಹೋಟೆಲ್ ಆರಂಭಿಸಿದ್ದರು. ಎರೆಡೆರಡು ಲಾಕ್‌ಡೌನ್ ಪರಿಣಾಮ ಈ ಉದ್ಯಮಿಗಳು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಹಲವು ಲಕ್ಷ ರೂ. ಬಂಡವಾಳ ಹೂಡಿ ಉದ್ಯಮ ಆರಂಭಿಸಿದ್ದೇವೆ. ಕಾರ್ಮಿಕರ ವೇತನ, ಕಟ್ಟಡ ಬಾಡಿಗೆ, ಸಾಲದ ಇಎಂಐ ಸೇರಿದಂತೆ ಪ್ರತಿ ತಿಂಗಳು ದೊಡ್ಡ ಮೊತ್ತವನ್ನು ಕಟ್ಟಬೇಕಿದೆ. ಒಟ್ಟಾರೆ ಉದ್ಯಮ ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ಉಡುಪಿ ಮೂಲದ ಹೊರ ಜಿಲ್ಲೆ ಉದ್ಯಮಿಗಳು.

    ಸದ್ಯದ ಮಟ್ಟಿಗೆ ಹೋಟೆಲ್ ಉದ್ಯಮ ಚೇತರಿಕೆ ಕಾಣುವ ಸಾಧ್ಯತೆ ಕಡಿಮೆ. ಕಳೆದ ವರ್ಷದಂತೆ ಈ ವರ್ಷವು ಕೋವಿಡ್ ಲಾಕ್‌ಡೌನ್ ಉದ್ಯಮವನ್ನು ಸಂಪೂರ್ಣ ಮುಳುಗಿಸಿಬಿಟ್ಟಿದೆ. ನಗರ ಭಾಗದ ಕೆಲವು ಹೋಟೆಲ್‌ಗಳು ಮಾತ್ರ ಆಹಾರ ಪಾರ್ಸೆಲ್ ನೀಡಿದ್ದವು. ಈ ಹೋಟೆಲ್‌ಗಳೂ ಲಾಭದಾಯಕವಾಗಿ ನಡೆದಿಲ್ಲ. ಈಗಾಗಲೆ ನಷ್ಟದಲ್ಲಿರುವ ಉದ್ಯಮಕ್ಕೆ ಶೇ.50 ಆಸನ ಭರ್ತಿ ನಿಯಮ ವಹಿವಾಟು ನಡೆಸಲು ಮತ್ತಷ್ಟು ಆರ್ಥಿಕ ಸಮಸ್ಯೆಗೆ ಕಾರಣವಾಗಲಿದೆ.
    ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಹೋಟೆಲ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts