More

    ಪರಿಷ್ಕೃತ ವೇತನ ಜಾರಿಗೆ ಒತ್ತಾಯ, ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ

    ಬಳ್ಳಾರಿ: ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ಆದೇಶಿಸಿರುವ ಪರಿಷ್ಕೃತ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

    ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್ ಮಾತನಾಡಿ, ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಸರ್ಕಾರ ಪರಿಷ್ಕರಿಸಿ ಕಳೆದ ವರ್ಷವೇ ಆದೇಶಿಸಿದ್ದರೂ ಇನ್ನೂ ಜಾರಿಯಾಗಿಲ್ಲ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರು ಪರಿಷ್ಕೃತ ವೇತನದಿಂದ ವಂಚಿತರಾಗಿದ್ದು, ಈಗಲೂ ಹಳೆಯ ವೇತನವನ್ನೇ ಅವರಿಗೆ ನೀಡಲಾಗುತ್ತಿದೆ.

    ಬಳ್ಳಾರಿಯ ಪರಿಶಿಷ್ಟ ಪಂಗಡದ ಹಾಸ್ಟೆಲ್‌ನ ಹೊರಗುತ್ತಿಗೆ ಕಾರ್ಮಿಕರಿಗೆ 3ರಿಂದ 4 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದ್ದು, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ

    ಕೂಡಲೇ ಹೊರಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ, ವಾರದ ರಜೆ, ಸಮರ್ಪಕ ಪಿಎಫ್ ಸೌಲಭ್ಯ, ನೇಮಕಾತಿ ಆದೇಶ, ಇಎಸ್‌ಐ ಕಾರ್ಡ್, ವೇತನ ರಸೀದಿ ಇನ್ನಿತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಹೊರಗುತ್ತಿಗೆ ಕಾರ್ಮಿಕರಿಗೆ ಪಿಎಫ್ ಹಣವನ್ನು ನಿಗದಿತ ಸಮಯದಲ್ಲಿ ಹಾಕುತ್ತಿಲ್ಲ. ನಾಲ್ಕು ವರ್ಷದ ಹಿಂದೆ ಇದ್ದ ಏಜೆನ್ಸಿಗಳು ಇನ್ನೂ ಕೂಡ ಹೊರಗುತ್ತಿಗೆ ಕಾರ್ಮಿಕರಿಗೆ ಬಾಕಿ ಪಿಎಫ್ ಹಣ ಹಾಕಿಲ್ಲ. ಇಷ್ಟಾದರೂ ಇಲಾಖೆಯಿಂದ ಏಜೆನ್ಸಿಗಳ ಮೇಲೆ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು.

    ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್, ಮುಖಂಡರಾದ ಮುರಳಿಕೃಷ್ಣ, ಲಕ್ಷ್ಮೀದೇವಿ, ಜಯರಾಂ, ಚೇತನ್, ಸೋನಾಬಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts