ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ

BLY-25-4
ಬಳ್ಳಾರಿ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಎ.ದೇವದಾಸ್, ಜಿ.ಸುರೇಶ್, ಡಾ.ಪ್ರಮೋದ್, ಮುರಳಿಕೃಷ್ಣ, ಲಕ್ಷ್ಮೀದೇವಿ, ಜಯರಾಂ ಮತ್ತಿತರರಿದ್ದರು.
Published on

ಬಳ್ಳಾರಿ : ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ಆದೇಶಿಸಿರುವ ಪರಿಷ್ಕೃತ ವೇತನವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ವೇಳೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್ ಮಾತನಾಡಿ, ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ವನ್ನು ಸರ್ಕಾರ ಪರಿಷ್ಕೃತಗೊಳಿಸಿ ಕಳೆದ ವರ್ಷ ಆದೇಶಿಸಿದೆ. ಆದರೆ ಆದೇಶ ಇನ್ನೂ ಜಾರಿಯಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಇಲಾಖೆಗಳ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರು ಪರಿಷ್ಕೃತ ವೇತನದಿಂದ ವಂಚಿತರಾಗಿದ್ದಾರೆ. ಇನ್ನೂ ಹಳೆಯ ವೇತನವನ್ನೇ ಅವರಿಗೆ ನೀಡಲಾಗುತ್ತಿದೆ. ಬಳ್ಳಾರಿಯ ಪರಿಶಿಷ್ಟ ಪಂಗಡದ ಹಾಸ್ಟಲ್‌ನ ಹೊರಗುತ್ತಿಗೆ ಕಾರ್ಮಿಕರಿಗೆ 3ರಿಂದ 4 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದ್ದು, ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಹೊರಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ, ವಾರದ ರಜೆ, ಸಮರ್ಪಕ ಪಿ.ಎಫ್ ಸೌಲಭ್ಯ, ನೇಮಕಾತಿ ಆದೇಶ, ಇಎಸ್‌ಐ ಕಾರ್ಡ್, ವೇತನ ರಶೀದಿ ಇನ್ನಿತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಸತಿ ನಿಲಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಹೊರಗುತ್ತಿಗೆ ಕಾರ್ಮಿಕರಿಗೆ ಪಿ.ಎಫ್ ಹಣವನ್ನು ನಿಗದಿತ ಸಮಯದಲ್ಲಿ ಹಾಕುತ್ತಿಲ್ಲ. ನಾಲ್ಕು ವರ್ಷದ ಹಿಂದೆ ಇದ್ದ ಏಜೆನ್ಸಿಗಳು ಇನ್ನೂ ಕೂಡ ಹೊರಗುತ್ತಿಗೆ ಕಾರ್ಮಿಕರಿಗೆ ಬಾಕಿಯಿರುವ ಪಿ.ಎಫ್ ಹಣವನ್ನು ಹಾಕದೆ ಕಾರ್ಮಿಕರನ್ನು ಸಾಕಷ್ಟು ಸಂಕಷ್ಟಕ್ಕೀಡು ಮಾಡಿವೆ. ಆದರೂ ಇಲಾಖೆಯಿಂದ ಈ ಏಜೆನ್ಸಿಗಳ ಮೇಲೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್, ಮುಖಂಡರಾದ ಮುರಳಿಕೃಷ್ಣ, ಲಕ್ಷ್ಮೀದೇವಿ, ಜಯರಾಂ, ಚೇತನ್, ಸೋನಾಬಾಯಿ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net