More

    ಎಸಿ, ಕೂಲರ್‌ಗಳಿಗೆ ಹೆಚ್ಚಿದ ಡಿಮಾಂಡ್

    ಮಾನ್ವಿ: ಎಂದೆದೂ ಕಾಣದ ಬೇಸಿಲ ತಾಪಕ್ಕೆ ಜನರು ಬೇಸ್ತು ಬಿದ್ದಿದ್ದು, ಝಳದಿಂದ ತಪ್ಪಿಸಿಕೊಳ್ಳಲು ಜನರು ಹಣಕ್ಕೆ ಹಿಂದೆ ಮುಂದೆ ನೋಡದೇ ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ.

    ಮಾರ್ಚ್‌ನಲ್ಲಿ ಆರಂಭವಾದ ಬಿಸಿಲು ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲೆ ಇದೆ. ಬಿಸಿಲಿನ ತಾಪಮಾನ ಹಗಲು ಒಂದು ರೀತಿ ಇದ್ದರೆ ಸಂಜೆಯಾಗುತ್ತಿದ್ದಂತೆ ಮತ್ತೊಂದು ರೀತಿ ತಾಪಮಾನ ಶುರುವಾಗುತ್ತದೆ. ದಿನವಿಡಿ ಬಿಸಿಲಿಗೆ ಕಾದ ಮನೆಗಳು ಸಂಜೆಯಾಗುತ್ತಿದ್ದಂತೆ ಮನೆಯಿಂದ ಝಳ ಬರುತ್ತದೆ. ಮನೆಯಲ್ಲಿ ಫ್ಯಾನ್ ಹಾಕಿದರೆ ಸಾಕು ಬೆಚ್ಚನೆ ಗಾಳಿ ಬರುತ್ತಿದ್ದು, ಮನೆಯಲ್ಲಿ ಕೂಡಲು ಆಗದೆ ಹೊರಗಡೆ ಬರುವ ಪರಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನು ಟಿನ್ ಶೆಡ್‌ಗಳಲ್ಲಿ ವಾಸ ಮಾಡುವವರ ಕಥೆ ಹೇಳತೀರದು.

    ಇದನ್ನು ಓದಿ:ಜಿಲ್ಲೆಯಲ್ಲಿ ಮಿತಿ ಮೀರಿದ ಬಿಸಿಲ ತಾಪಮಾನ: ಸಾರ್ವಜನಿಕರಿಗೆ ಸಲಹೆ ಕೊಟ್ಟ ಜಿಲ್ಲಾಧಿಕಾರಿ ಡಾ.ಕುಮಾರ…!

    ಕಳೆದೊಂದು ವಾರದಿಂದ ತಾಪಮಾನ ಪ್ರತಿನಿತ್ಯ 43-45 ಡಿಗ್ರಿ ಸೆಲ್ಸಿಯಸ್‌ನ ಅಸುಪಾಸಿನಲೇ ಇದ್ದು, ಇಳಿಮುಖವಾಗುತ್ತಿಲ್ಲ. ಇದರಿಂದ ಸೆಕೆಯ ಕಿರಿಕಿರಿ ಜೋರಾಗಿದ್ದು, ರಾತ್ರಿ ವೇಳೆ ಎಸಿ, ಫ್ಯಾನ್, ಕೂಲರ್ ಇಲ್ಲದೆ ನಿದ್ರೆ ಬಾರದಂತಾಗಿದೆ. ಹಗಲಲ್ಲಿ ಬಿಸಿಲ ಝಳ ಹೆಚ್ಚಾಗಿರುವುದರಿಂದ ಹೊರಗೆ ಓಡಾಡುವುದು ಕಷ್ಟವಾಗುತ್ತಿದೆ.

    ಪಟ್ಟಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯಾದರೂ ಬಿಸಿಲಿನ ಝಳ ನಿಲ್ಲುತ್ತಿಲ್ಲ. ರಣಬಿಸಿಲಿನಿಂದ ಮನೆಗಳು, ರಸ್ತೆಗಳು ಕಾದ ಕುಲುಮೆಯಂತಾಗಿವೆ. ಕೂಲರ್ ಮತ್ತು ಫ್ಯಾನ್‌ಗಳಿಗೆ ಈಗ ಬಿಡುವಿಲ್ಲದಂತಾಗಿದ್ದು ಹಗಲು-ರಾತ್ರಿ ಎನ್ನದೆ ದಿನದ 24 ತಾಸೂ ಬಳಸಲಾಗುತ್ತಿದೆ. ವಿದ್ಯುತ್ ಹೋದರೆ ಸಾಕು ಝಳದಿಂದ ಬಸವಳಿಯುವಂತಾಗುತ್ತದೆ. ಪ್ರತಿ ಕುಟುಂಬವು ಜೀವನ ಮಟ್ಟಕ್ಕೆ ತಕ್ಕಂತೆ ಸೆಕೆಯಿಂದ ಪಾರಾಗಲು ವಿದ್ಯುತ್ ಉಪಕರಣಗಳನ್ನು ಖರೀದಿಸುತ್ತಿದೆ.

    ಬಡವರ ಮನೆಗಳಲ್ಲಿ ಫ್ಯಾನ್, ಕೂಲರ್, ಸ್ಥಿತಿವಂತರ ಮನೆ ಮತ್ತು ಕಚೇರಿಗಳಲ್ಲಿ ಎಸಿ ಸಾಮಾನ್ಯವಾಗಿದೆ.
    ಖರೀದಿ ಜೋರು: ಬಿಸಿಲಿನ ತಾಪಮಾನಕ್ಕೆ ಕೂಲರ್, ಎಸಿ ಮತ್ತು ಫ್ಯಾನ್ ಖರೀದಿ ಜೋರಾಗಿದ್ದರಿಂದ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕರು ಪ್ರತಿನಿತ್ಯ ಫ್ಯಾನ್, ಕೂಲರ್, ಎಸಿ ಉಪಕರಣಗಳನ್ನು ತರಿಸುತ್ತಿದ್ದಾರೆ. ಬೇಸಿಗೆ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಇವುಗಳ ಮಾರಾಟ ತುಂಬಾ ಕಡಿಮೆ ಇರುತ್ತಿತ್ತು. ಆದರೆ, ಈಗ ಮಾರಾಟವು ಏಕಾಏಕಿ ಹೆಚ್ಚಳವಾಗಿದೆ. ಕೂಲರ್‌ಗಳು 6 ಸಾವಿರದಿಂದ 40 ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ. ಏರ್ ಕಂಡೀಷನರ್‌ಗಳು 35 ಸಾವಿರದಿಂದ 1 ಲಕ್ಷ ರೂ. ವರೆಗೂ ಮಾರಾಟವಾಗುತ್ತಿವೆ. ಈ ವರ್ಷ ಕೂಲರ್ ಮತ್ತು ಎಸಿಗಳ ಖರೀದಿ ಜೋರಾಗಿದ್ದು, ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಅಂಗಡಿ ಮಾಲೀಕರು.

    ಆನ್‌ಲೈನ್ ಖರೀದಿ: ಕೆಲವರ ಅಂಗಡಿಗಳಲ್ಲಿ ಕೂಲರ್ ಖರೀದಿಸಿದರೆ ಇನ್ನೂ ಕೆಲವರು ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಆನ್‌ಲೈನ್ ಮೂಲಕ ಕೂಲರ್, ಎಸಿ ಖರೀದಿಸುತ್ತಿದ್ದಾರೆ. ಆನ್‌ಲೈನ್‌ನಿಂದ ಖರೀದಿಸಿದವರಿಗೆ ಬ್ಯಾಂಕ್‌ಗಳು ಇಎಂಐ ಸೌಲಭ್ಯ ಕಲ್ಪಿಸಿವೆ. ಹೀಗಾಗಿ, ಗ್ರಾಹಕರು ಅಂಗಡಿಗಳಿಗಿಂತ ಹೆಚ್ಚಾಗಿ ಆನ್‌ಲೈನ್ ಮೂಲಕ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

    ಕೂಲರ್, ಎಸಿ ಉಪಕರಣಗಳ ಬೇಡಿಕೆ ಹೆಚ್ಚಾಗಿರುವ ಕಾರಣ ಹಲವೆಡೆ ಅಂಗಡಿಗಳಲ್ಲಿ ಸಿಗುತ್ತಿಲ್ಲ. ಅಂಗಡಿಗೆ ಹೋಗಿ ತಕ್ಷಣವೇ ಎಸಿ ಖರೀದಿಸಿದರೂ ಜೋಡಣೆಗೆ ಕನಿಷ್ಠ 2-3ದಿನ ಕಾಯುವಂತಾಗಿದೆ. ಎಸಿ ಜೋಡಣೆಯು ಕೆಲಸಗಾರರಿಗೆ ಕೆಲಸದ ಒತ್ತಡ ಹೆಚ್ಚಿರುವುದರಿಂದ ಗ್ರಾಹಕರು ಕಾಯುವುದು ಅನಿವಾರ್ಯವಾಗಿದೆ.


    ರಿಪೇರಿಗೆ ಪರದಾಟ: ಕೆಲವರು ಖರೀದಿ ಮಾಡಿದ ಕೂಲರ್‌ಗಳನ್ನು ದಿನವಿಡಿ ಹಚ್ಚುವುದರಿಂದ ಹೆಚ್ಚು ರಿಪೇರಿ ಬರುತ್ತಿವೆ. ಬೇಡಿಕೆ ಹೆಚ್ಚಾಗಿದ್ದರಿಂದ ಕಡಿಮೆ ಬೆಲೆಗೆ ಲೋಕಲ್ ಕಂಪನಿಗಳ ಕೂಲರ್‌ಗಳನ್ನು ಜನರು ತೆಗೆದುಕೊಂಡು ಹೋಗುವುದರಿಂದ ದುರಸ್ತಿಗೆ ಬರುತ್ತಿದ್ದು, ರಿಪೇರಿ ಮಾಡುವ ಮೆಕ್ಯಾನಿಕಗಳಿಗೆ ಬೇಡಿಕೆ ಹೆಚ್ಚಾಗಿದೆ.

    ಸೆಕೆಯಿಂದಾಗಿ ಮನೆಯಲ್ಲಿ ಕೂಡಲು ಆಗುತ್ತಿಲ್ಲ. ಸಣ್ಣ ಮಕ್ಕಳು ಬಿಸಿಲಿನ ತಾಪಕ್ಕೆ ಅಳುತ್ತಿದ್ದಾರೆ. ಮನೆಯಲ್ಲಿ ಮಲಗಲು ಆಗುತ್ತಿಲ್ಲ. ಫ್ಯಾನ್ ಹಚ್ಚಿದರೆ ಮತ್ತಷ್ಟು ಬಿಸಿ ಗಾಳಿ ಬರುತ್ತದೆ. ಮನೆ-ಮಾಳಿಗೆ ಮೇಲೆ ಮಲಗಿದರೆ ಝಳ ಹೀಗಾಗಿ ಕೂಲರ್ ಖರೀದಿ ಮಾಡಲಾಗಿದೆ.
    ಪಂಪಣ್ಣ ಕುಂಬಾರ
    ನೀರಮಾನ್ವಿ

    ಕೂಲರ್‌ಗಳು ಅತಿ ಹೆಚ್ಚು ರಿಪೇರಿಗೆ ಬರುತ್ತಿವೆ. ಎಲ್ಲರೂ ಒಂದೇ ದಿನದಲ್ಲಿ ರಿಪೇರಿ ಮಾಡಿಕೊಡಬೇಕು ಎನ್ನುತ್ತಾರೆ ಹೀಗಾಗಿ ರಿಪೇರಿ ಮಾಡುವುದು ಕಷ್ಟವಾಗಿದೆ. ಬಿಸಿಲು ಹೆಚ್ಚಾಗಿದ್ದರಿಂದ ಅತಿ ಹೆಚ್ಚು ಬಳಕೆಯಿಂದ ರಿಪೇರಿ ಬರುತ್ತಿವೆ.
    ನಿಸಾರ್ ಆಹ್ಮದ್‌ಖಾನ್ಮೆ ಕ್ಯಾನಿಕ್ ಮಾನ್ವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts