More

  ಹನಗೋಡು ಭಾಗದಲ್ಲಿ ಮಳೆ ಅಧ್ವಾನ

  ಹನಗೋಡು: ಕಳೆದ ಒಂದು ವಾರದಿಂದ ಹನಗೋಡು ಹೋಬಳಿಯಲ್ಲಿ ಸುರಿಯುತ್ತಿರುವ ಸತತ ಮಳೆಯ ಪರಿಣಾಮ ಆಸ್ತಿ- ಪಾಸ್ತಿಗಳಿಗೆ ಹೆಚ್ಚಿನ ಹಾನಿ ಸಂಭವಿಸಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

  ಈ ಬಾರಿ ಸಕಾಲಕ್ಕೆ ಮಳೆ ಬಾರದೆ ಬಿಸಿಲ ಬೇಗೆಗೆ ಕಂಗಾಲಾಗಿದ್ದ ರೈತರಿಗೆ ಮೇ ತಿಂಗಳಲ್ಲಿ ಸುರಿದ ಭರ್ಜರಿ ಮಳೆ ಸಮಾಧಾನಕ್ಕಿಂತ ಹೆಚ್ಚು ನಷ್ಟ ಉಂಟಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ತಂಬಾಕು ನಾಟಿ, ಶುಂಠಿ, ಮುಸುಕಿನಜೋಳ ಬಿತ್ತನೆ ಮಾಡಿದ್ದರು. ಆದರೆ ಈ ಹಂತದಲ್ಲಿ ಸುರಿದ ಮಳೆ ರೈತರನ್ನು ಕಂಗೆಡಿಸಿದ್ದು, ಲಕ್ಷಾಂತರ ರೂ. ನಷ್ಟಕ್ಕೆ ಮಳೆ ದಾರಿ ಮಾಡಿಕೊಟ್ಟಿದೆ.

  ಕೊಚ್ಚಿ ಹೋದ ಬೆಳೆ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹನಗೋಡು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ನಾಟಿ ಮಾಡಿದ್ದ ತಂಬಾಕು, ಶುಂಠಿ, ಮುಸುಕಿನ ಜೋಳದ ಪೈರು ಮಳೆಗೆ ಕೊಚ್ಚಿ ಹೋಗಿದೆ. ಅಲ್ಲದೆ ಬೆಳೆ ಬೆಳೆಯಲು ರೈತರು ಹದ ಮಾಡಿಕೊಂಡಿದ್ದ ಜಮೀನುಗಳಲ್ಲಿ ಫಲವತ್ತಾದ ಮಣ್ಣನ್ನು ಸಹ ಮಳೆ ನೀರು ಹೊತ್ತೊಯ್ದಿದ್ದು, ಶುಂಠಿ, ತಂಬಾಕು ಸಸಿಗಳ ಬೇರುಗಳು ಕಾಣಿಸಲಾರಂಭಿಸಿವೆ. ಅಲ್ಲದೇ ಬಹುತೇಕ ಕಡೆ ಮಣ್ಣು ಕೊಚ್ಚಿ ಹೋಗಿ ಜಮೀನುಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಜತೆಗೆ ತಗ್ಗು ಪ್ರದೇಶದಲ್ಲಿರುವ ಹೊಲಗಳಲ್ಲಿ ನೀರು ನಿಂತು ತಂಬಾಕು ಸಸಿಗಳು ಸಂಪೂರ್ಣ ನಾಶವಾಗಿದೆ. ಚಿಲ್ಕುಂದ, ಕಣಗಾಲು, ಕರ್ಣಕುಪ್ಪೆ, ಹರೀನಹಳ್ಳಿ, ಕಲ್ಲಹಳ್ಳಿ, ಹನಗೋಡು, ನೇರಳಕುಪ್ಪೆ ಮುತ್ತುರಾಯನಹೊಸಳ್ಳಿ, ಸುತ್ತಮುತ್ತಲ ಗ್ರಾಮಗಳಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಮಳೆಯಿಂದ ಶುಂಠಿ ಬೆಳೆ ನೀರಿನಲ್ಲಿ ಮುಳುಗಿದೆ.

  ಕಿತ್ತು ಹೋದ ರಸ್ತೆಗಳು: ಈ ಭಾಗದ ಬಹುತೇಕ ರಸ್ತೆಗಳು ಮಳೆಗೆ ಸಂಪೂರ್ಣ ಹಾಳಾಗಿವೆ. ಮಳೆ ನೀರಿನ ರಭಸಕ್ಕೆ ಹಲವೆಡೆ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದರೆ, ಅರೆ-ಬರೆ ಹಾಳಾಗಿದ್ದ ರಸ್ತೆಗಳಲ್ಲಿ ಜಲ್ಲಿಕಲ್ಲುಗಳು ಮೇಲೆದ್ದು ಹೊಂಡಗಳು ನಿರ್ಮಾಣವಾಗಿದೆ. ಅನೇಕ ರಸ್ತೆಗಳಲ್ಲು ವಾಹನಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿಯನ್ನು ಮಳೆ ತಂದಿಟ್ಟಿದೆ.

  ತುಂಬಿದ ಕೆರೆ-ಕಟ್ಟೆಗಳು: ಹನಗೋಡು ಭಾಗದಲ್ಲಿ ಬಿಸಿಲ ಬೇಗೆಗೆ ಸಂಪೂರ್ಣ ಬತ್ತಿ ಹೋಗಿದ್ದ ಕೆರೆ, ಕಟ್ಟೆಗಳು ಇದೀಗ ಮರುಜೀವ ಪಡೆದಿವೆ. ಅಪಾರ ಮಳೆಯಿಂದಾಗಿ ಚಿಲ್ಕುಂದ, ಕರ್ಣಕುಪ್ಪೆ, ಕಲ್ಲಹಳ್ಳಿ, ಹರೀನಹಳ್ಳಿ, ಅಬ್ಬೂರು ಕಣಗಾಲು, ಭಾಗದ ಅನೇಕ ಕೆರೆ-ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಭಾರಿ ಪ್ರಮಾಣದ ನೀರು ಲಕ್ಷ್ಮಣತೀರ್ಥ ನದಿಗೆ ಸೇರುತ್ತಿದೆ.

  ಬಿದ್ದು ಹೋದ ಬ್ಯಾರೆನ್ ಮನೆ: ಭಾನುವಾರ ರಾತ್ರಿ ಸುರಿದ ಬಾರಿ ಮಳೆಗೆ ಕಚುವಿನಹಳ್ಳಿ ಗ್ರಾಮದ ಜಯಮ್ಮ ಕೋಂ ಲೇ.ಜವರೇಗೌಡ ಅವರ ತಂಬಾಕು ಹದಗೊಳಿಸುವ ಬ್ಯಾರನ್ ಮನೆಯ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಸುಮಂತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  ಮನೆಗಳಿಗೆ ನುಗ್ಗಿದ ನೀರು: ಭಾನುವಾರ ರಾತ್ರಿ ಸುರಿದ ಬಾರಿ ಮಳೆಗೆ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಮಾಳದ ಕಮಲಮ್ಮ, ಬಸವರಾಜನಾಯ್ಕ, ಶಾಂತಮ್ಮ ಪೂಜಾರಿ ಮಹೇಶ, ಹರೀನಹಳ್ಳಿ ಗೇಟ್ನ ಚಂದ್ರ ಸೇರಿದಂತೆ ಹಲವರ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ದಸವ-ಧಾನ್ಯಗಳು, ಗೃಹ ಬಳಕೆ ವಸ್ತುಗಳು ಹಾಳಾಗಿವೆ.

  ಮುಂಗಾರು ಮಳೆ ತಡವಾಗಿ ಪ್ರಾರಂಭವಾದರೂ ಕಳೆದ ವಾರ ಬಿದ್ದ ಮಳೆಗೆ ಈ ಭಾಗದ ರೈತರು ತಂಬಾಕು, ಮುಸಿಕಿನಜೋಳ, ಶುಂಠಿ ಮತ್ತಿತರ ಬೆಳೆಗಳನ್ನು ನಾಟಿ ಮಾಡಿದ್ದರು. ಆದರೆ ಕಳೆದೆರಡು ದಿನಗಳಿಂದ ಬಿದ್ದ ಬಾರಿ ಮಳೆಯಿಂದ ಫಲಾವತ್ತಾದ ಮಣ್ಣು ಸಮೇತ ಬೆಳೆಯನ್ನು ಮಳೆ ನೀರು ಹೊತ್ತೊಯ್ದಿದ್ದು, ಹೆಚ್ಚಿನ ನಷ್ಟವನ್ನು ಉಂಟು ಮಾಡಿದೆ. ಈ ಕೂಡಲೇ ತಾಲೂಕು ಆಡಳಿತ ಸರ್ಕಾರಕ್ಕೆ ಸೂಕ್ತ ಮಳೆ ಹಾನಿ ವರದಿ ಸಲ್ಲಿಸಿ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ನೀಡಬೇಕು.
  ಕಣಗಾಲು ಮಲ್ಲೇಶ್, ಪ್ರಗತಿಪರ ರೈತ

  ಹನಗೋಡು ಹೋಬಳಿ ವ್ಯಾಪ್ತಿಯ ಮಳೆ ಹಾನಿ ಪ್ರದೇಶಕ್ಕೆ ಈಗಾಗಲೇ ಭೇಟಿ ನೀಡಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿದ್ದು, ಮಳೆಯಿಂದ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಬಂದ ತಕ್ಷಣವೇ ತಾಲೂಕು ಆಡಳಿತಕ್ಕೆ ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪರಿಹಾರ ಒದಗಿಸುವ ಸಂಬಂಧ ಸರ್ಕಾರಕ್ಕೂ ಮಾಹಿತಿ ನೀಡಲಾಗುವುದು.
  ಮಹಮ್ಮದ್ ಹ್ಯಾರಿಸ್ ಸುಮೇರ, ಉಪವಿಭಾಧಿಕಾರಿ, ಹುಣಸೂರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts