More

    ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು

    ಶಿವಮೊಗ್ಗ: ಲೋಕಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 17,52,885 ಮತದಾರರು ಹಕ್ಕು ಚಲಾಯಿಸುವ ಅವಕಾಶ ಹೊಂದಿದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದು 8,90,061 ಮಂದಿ ಮತದಾನದ ಅರ್ಹತೆ ಪಡೆದಿದ್ದಾರೆ.

    8,62,789 ಪುರುಷರು, 35 ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿದ್ದಾರೆ. ಮತದಾನ ಪ್ರಕ್ರಿಯೆ ನಡೆಸಲು 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೇ 5ರ ಸಂಜೆಯಿಂದ ಇನ್ನಷ್ಟು ನಿಗಾವಹಿಸಲು ಹೆಚ್ಚುವರಿಯಾಗಿ 80 ಎಫ್‌ಎಸ್‌ಟಿ ತಂಡ ನಿಯೋಜಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    40 ಸಖಿ ಮತಗಟ್ಟೆ, 8 ಯುವ ಮತಗಟ್ಟೆ, ಅಂಗವಿಕಲರಿಗಾಗಿ 8 ಹಾಗೂ ಧ್ಯೇಯ ಆಧಾರಿತ 8 ಮತಗಟ್ಟೆ ಸ್ಥಾಪಿಸಲಾಗುವುದು. 2,039 ಮತಗಟ್ಟೆಗಳನ್ನು ಗುರುತಿಸಿದ್ದು, 87 ಸೂಕ್ಷ್ಮ ಹಾಗೂ 325 ಅತಿ ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಲಾಗಿದೆ ಎಂದು ವಿವರ ನೀಡಿದರು.
    ಬಹಿರಂಗ ಪ್ರಚಾರ ಮೇ 5ರ ಸಂಜೆಗೆ ಅಂತ್ಯವಾಗಲಿದ್ದು, ಬಳಿಕ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡದ ಪ್ರಚಾರಕರು ಕ್ಷೇತ್ರದಿಂದ ಹೊರಗೆ ಹೋಗಬೇಕು. ಇದಕ್ಕಾಗಿ ಎಲ್ಲ ರೆಸಾರ್ಟ್, ಲಾಡ್ಜ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳು ಸೇರಿ ಒಟ್ಟು 1,021 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
    17 ಲಕ್ಷ ಮತದಾರರಿಗೆ ವೋಟರ್ ಸ್ಲಿಪ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ರಾಜಕೀಯ ಪಕ್ಷಗಳು ವೋಟರ್ ಸ್ಲಿಪ್ ನೀಡಬಹುದು. ಆದರೆ ಅದರಲ್ಲಿ ಪಕ್ಷದ ಚಿಹ್ನೆ, ಅಭ್ಯರ್ಥಿ ಹೆಸರು ಇರುವಂತಿಲ್ಲವೆಂದು ಸೂಚಿಸಲಾಗಿದೆ ಎಂದರು. ಸಹಾಯಕ ಚುನಾವಣಾಧಿಕಾರಿ ಸಿದ್ದಲಿಂಗ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.
    ಈವರೆಗೆ 19 ಕೋಟಿ ರೂ. ವಶ: ಮಾದರಿ ನೀತಿ ಸಂಹಿತೆ ನಂತರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಒಟ್ಟು 19.07 ಕೋಟಿ ರೂ. ಮೌಲ್ಯದ ಚಿನ್ನ, ಹಣ, ಉಡುಗೊರೆ ನೀಡುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಹಣ ಇಲ್ಲವೇ ವಸ್ತುಗಳ ಬಗ್ಗೆ ಸಂಬಂಧಪಟ್ಟವರು ದಾಖಲೆ ನೀಡಿದರೆ ಅದನ್ನು ಮರಳಿಸಲಾಗುವುದು. ಹೀಗೆ ವಶಕ್ಕೆ ಪಡೆದ ವಸ್ತುಗಳನ್ನು ಕೆಲವೊಮ್ಮೆ ಜಿಎಸ್‌ಟಿ ವಂಚಿಸಿ, ಇಲ್ಲವೇ ಮಾರಾಟ ತೆರಿಗೆ ವಂಚಿಸಿ ಕೊಂಡೊಯ್ಯಲಾಗುತ್ತಿರುತ್ತದೆ. ವಶಕ್ಕೆ ಪಡೆದ ಮೇಲೆ ಸಂಬಂಧಪಟ್ಟ ಇಲಾಖೆ ದಂಡದೊಂದಿಗೆ ತೆರಿಗೆ ಪಡೆದುಕೊಂಡು ವಸ್ತುಗಳನ್ನು ನೀಡುತ್ತದೆ ಎಂದು ಡಿಸಿ ತಿಳಿಸಿದರು.
    ನೆರಳಿಗಾಗಿ ಶಾಮಿಯಾನ!: ಈ ಬಾರಿ ಬಿಸಿಲು ಹೆಚ್ಚಿರುವುದರಿಂದ ಮತಗಟ್ಟೆಗಳಲ್ಲಿ ಹೆಚ್ಚಿನ ಸೌಕರ್ಯ ಒದಗಿಸಲಾಗುತ್ತಿದೆ. ಕುಡಿಯುವ ನೀರು, ಸರದಿಯಲ್ಲಿ ನಿಂತವರ ನೆರಳಿಗಾಗಿ ಶಾಮಿಯಾನ ಅಳವಡಿಸಲಾಗುತ್ತದೆ. ಮತಗಟ್ಟೆಗಳಲ್ಲಿ ಮೆಡಿಕಲ್ ಕಿಟ್ ಇರುತ್ತದೆ. ಮತದಾರರು ಬಳಲಿಕೆಯಿಂದ ಕುಸಿದರೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಬಹುದಾದ ವಸ್ತುಗಳು ಮೆಡಿಕಲ್ ಕಿಟ್‌ನಲ್ಲಿ ಇರುತ್ತವೆ. ಸರದಿ ಸಾಲು ಹೆಚ್ಚಿದ್ದರೆ ಮತದಾರರು ಕುಳಿತುಕೊಳ್ಳಲು ನಿರೀಕ್ಷಣಾ ಕೊಠಡಿಯನ್ನು ಗುರುತಿಸಿಡುವಂತೆ ಮತಗಟ್ಟೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts