More

    ಅಪೌಷ್ಟಿಕತೆ ನೀಗಿಸಲು ಬಾಲ ಚೈತನ್ಯ ಕೇಂದ್ರ ಸಹಕಾರಿಯಾಗಿದೆ ಎಂದ ಜಿಪಂ ಸಿಇಒ ಕೆ.ಆರ್.ನಂದಿನಿ

    ಹೊಸಪೇಟೆ: ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುತ್ತದೆ ಎಂಬ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್. ನಂದಿನಿ ಹೇಳಿದರು.

    ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಸಂಡೂರು ರಸ್ತೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆರಂಭಿಸಲಾದ ಬಾಲಚೈತನ್ಯ ಮಕ್ಕಳ ಆರೋಗ್ಯ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ 800 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರನ್ನು ಬಾಲ ಚೈತನ್ಯ ಕೇಂದ್ರಕ್ಕೆ ಕರೆಸಿ ಪೌಷ್ಟಿಕ ಆಹಾರ, ಔಷಧ ನೀಡಿ ಆರೋಗ್ಯವಂತ ಮಕ್ಕಳನ್ನಾಗಿ ಸದೃಢಗೊಳಿಸುವ ಯತ್ನ ಇದಾಗಿದೆ. ಕೇಂದ್ರದಲ್ಲಿ 14 ದಿನಗಳ ಕಾಲ ಇರಿಸಿಕೊಂಡು ಆರೈಕೆ ಮಾಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳು ಕೋವಿಡ್‌ಗೆ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

    ವೈದ್ಯ ಅಶೋಕ ರಾಠೋಡ್ ಮಾತನಾಡಿ, ಕೋವಿಡ್ ಸೋಂಕು ತಗುಲುತ್ತದೆ ಎಂಬ ಕಾರಣಕ್ಕಾಗಿ ಎಂಬುದಕ್ಕಿಂತ ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು ಬಾಲಚೈತನ್ಯ ಮಕ್ಕಳ ಆರೈಕೆ ಕೇಂದ್ರ ಸಹಕಾರಿಯಾಗಿದೆ ಎಂದರು. ಎಸಿ ಸಿದ್ದರಾಮೇಶ್ವರ ಮಾತನಾಡಿದರು. ತಾಪಂ ಇಒ ವಿಶ್ವನಾಥ್, ಟಿಎಚ್‌ಒ ಭಾಸ್ಕರ್, ಡಾ.ದೀಪಾ, ಬಿಇಒ ಪಿ.ಸುನಂದಾ, ಸಿಡಿಪಿಒ ಸಿಂಧು ಅಂಗಡಿ ಇದ್ದರು.

    ಒಂದೂವರೆ ಗಂಟೆ ತಡ
    ಬಾಲಚೈತನ್ಯ ಕೇಂದ್ರ ಚಾಲನೆ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಿಗದಿಗೊಳಿಸಿದ್ದರಿಂದ ತಾಯಂದಿರು ಮಕ್ಕಳೊಂದಿಗೆ ಬೆಳಗ್ಗೆ 10 ಗಂಟೆಗೆ ಬಂದು ಕುಳಿತಿದ್ದರು. ಆದರೆ, ಜಿಪಂ ಸಿಇಒ ಕೆ.ಆರ್.ನಂದಿನಿ ಒಂದು ಗಂಟೆ ತಡವಾಗಿ ಬಂದರು. ಹಾಗೆಯೇ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ವೈದ್ಯ ಡಾ.ಅಶೋಕ ರಾಠೋಡ್ ಅವರು ಒಂದೂವರೆ ಗಂಟೆ ತಡವಾಗಿ ಬಂದ ಹಿನ್ನೆಲೆಯಲ್ಲಿ ತಾಯಂದಿರುವು ಕಾದು ಸುಸ್ತಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts