More

    ರಂಗೋಲಿ ಚಿತ್ತಾರದತ್ತ ಜಾಬವಂತನ ಚಿತ್ತ

    ಹೊಸದುರ್ಗ: ಕರಡಿ ಹಾವಳಿಯಿಂದ ಭಯಭೀತಗೊಂಡಿರುವ ಜನರು ಸಂಜೆಯಾಗುತ್ತಲೇ ಮನೆಯಿಂದ ಹೊರ ಬರಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

    ಕಳೆದ ಒಂದು ತಿಂಗಳಿಂದ ಕರಡಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರೂ ಜನರನ್ನು ರಕ್ಷಿಸುವ ಯಾವುದೇ ಪ್ರಯತ್ನ ನಡೆಯದಿರುವುದು ವನ್ಯಜೀವಿ ಹಾಗೂ ಮಾನವರ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣಗಳು ಕಾಣಿಸುತ್ತಿವೆ.

    ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗ, ಸಂಗಮ ನಗರ, ಭಗೀರಥ ನಗರ, ವಿಜಯ ನಗರ, ವಿದ್ಯಾ ನಗರ, ಕೈಗಾರಿಕಾ ಬಡಾವಣೆ ಸೇರಿದಂತೆ ಹೊಳಲ್ಕೆರೆ ರಸ್ತೆ ಹಾಗೂ ತರೀಕೆರೆ ರಸ್ತೆಗಳಲ್ಲಿ ಪ್ರತಿ ದಿನ ಸಂಜೆಯಾಗುತ್ತಲೇ ಕಾಣಿಸಿಕೊಳ್ಳುವ ಕರಡಿ ಯಾವುದೇ ಭಯವಿಲ್ಲದೆ ಓಡಾಡುತ್ತಿದೆ.

    ಸಿದ್ದರಾಮನಗರದಲ್ಲಿ ರಾತ್ರಿ ವಾಕಿಂಗ್ ನಡೆಸುತ್ತಿದ್ದ ಮಹಿಳೆಯರು ಕರಡಿ ಕಂಡು ಮನೆ ಸೇರಿದ್ದಾರೆ. ಬುಧವಾರ ಸಂಜೆ ಶಾಸಕರ ಮನೆ ಬಳಿ ಕಾಣಿಸಿಕೊಂಡ ಕರಡಿ ವಿಡಿಯೋವನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಗುರುವಾರ ರಾತ್ರಿ ಭದ್ರಾ ಲೇಔಟ್‌ನ ಮನೆಯ ಬಳಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ.

    ಕಳೆದ ಒಂದು ತಿಂಗಳಿಂದ ಕರಡಿ ಅಲ್ಲಲ್ಲಿ ಕಾಣಿಸಿಕೊಳ್ಳತ್ತಿದೆ. ಅದನ್ನು ರಕ್ಷಿಸಿ ಕಾಡಿಗೆ ಕಳಿಸುವ ಜವಾಬ್ದಾರಿ ಹೊತ್ತ ಅರಣ್ಯ ಇಲಾಖೆ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಜನರು ಅರಣ್ಯ ಇಲಾಖೆಗೆ ಫೋನ್ ಮಾಡಿದರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ.

    ಶಾಸಕರ ಮನೆಯ ಬಳಿ ಕರಡಿ ಕಾಣಿಸಿಕೊಂಡಾಗ ಅದನ್ನು ಅಲ್ಲಿಂದ ಓಡಿಸಲಾಗಿದೆ. ಕರಡಿ ಹಿಡಿಯಲು ಮೇಲಧಿಕಾರಿಗಳಿಂದ ಸೂಚನೆ ಬಂದಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
    ಸುಜಾತ, ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts