More

    ಹದಿಮೂರು ವರ್ಷದ ವಿರಸಕ್ಕೆ ವಿರಾಮ

    ಹೊಸದುರ್ಗ ಕೌಟುಂಬಿಕ ಕಲಹದಿಂದ ಪರಸ್ಪರ ದೂರವಾಗಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ 13 ವರ್ಷಗಳ ಕಾಲ ಅಲೆದಾಡಿದ ಸತಿ-ಪತಿ ನ್ಯಾಯಾಧೀಶರ ಮನವೊಲಿಕೆಗೆ ಒಪ್ಪಿ ಒಗ್ಗೂಡಿದ ಪ್ರಸಂಗ ಹೊಸದುರ್ಗದಲ್ಲಿ ನಡೆದಿದೆ.

    ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್ ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಯಿತು.
    ಪಟ್ಟಣದ ನಿವಾಸಿ ಲಕ್ಷ್ಮಿ ಹಾಗೂ ಶಿವಮೊಗ್ಗದ ನಾಗರಾಜು ವಿವಾಹ 2008ರಲ್ಲಿ ಆಗಿತ್ತು. 2009ರಲ್ಲಿ ವೈಮನಸ್ಸು ಉಂಟಾಗಿ ಇಬ್ಬರೂ ಬೇರ್ಪಟ್ಟಿದ್ದರು. 2010 ರಲ್ಲಿ ನಾಗರಾಜು ವಿಚ್ಛೇದನಕ್ಕಾಗಿ ಹರಿಹರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಷ್ಟರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತ್ತು. ನನಗೆ ಪತಿ ಬೇಕು ಎಂದು ಪತ್ನಿ ಹೋರಾಟ ನಡೆಸಿದ ಕಾರಣ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

    ಪ್ರಕರಣ ಕೋರ್ಟ್‌ನಲ್ಲಿದ್ದಾಗಲೇ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದವು. ಲಕ್ಷ್ಮಿಯ ಅಣ್ಣ ರಮೇಶ ವಿರುದ್ಧದ ಪ್ರಕರಣದಲ್ಲಿ ಆತನಿಗೆ ಶಿಕ್ಷೆ ಕೂಡ ಪ್ರಕಟವಾಗಿತ್ತು.

    ವಿಚ್ಛೇದನ ಅರ್ಜಿ ವಜಾಗೊಂಡ ನಂತರ ನಾಗರಾಜ ಮತ್ತೆ ಶಿವಮೊಗ್ಗ ಹಾಗೂ ಬೆಂಗಳೂರಿನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿಯನ್ನು ಹೊಸದುರ್ಗ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾಯಿಸಿದ್ದ ಹೈಕೋರ್ಟ್, ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿತ್ತು.

    ಶನಿವಾರ ಲೋಕ ಅದಾಲತ್‌ಗೆ ಹಾಜರಾಗಿದ್ದ ದಂಪತಿಯ ಬಳಿ ಪ್ರಧಾನ ನ್ಯಾಯಾಧೀಶೆ ಶಶಿಕಲಾ ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನಡೆಸಿದರು. ವಿಚ್ಛೇದನ ಪಡೆಯದೆ ಒಂದಾಗಿ ಬಾಳುವಂತೆ ಮನವೊಲಿಸಿದರು.

    ಇಬ್ಬರೂ ಜತೆಯಾಗಿರಲು ಒಪ್ಪಿದ ನಂತರ ಕೊರ್ಟ್ ಆವರಣದಲ್ಲಿ ಪರಸ್ಪರ ಹೂವಿನ ಹಾರ ಹಾಕಿಸಿ, ಸಿಹಿ ತಿನ್ನಿಸಿ ಸಂಸಾರ ಚೆನ್ನಾಗಿರಲಿ ಎಂದು ಶುಭ ಹಾರೈಸಲಾಯಿತು.

    ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶೆ ಶಶಿಕಲಾ, ಎಪಿಪಿ ರುದ್ರಮುನಿ, ಹಿರಿಯ ವಕೀಲ ಡಿ.ಅಂಜನಕುಮಾರ ಈ ಕುಟುಂಬವನ್ನು ಒಂದುಗೂಡಿಸಲು ಶ್ರಮವಹಿಸಿದರು.

    ಕುಟುಂಬಗಳ ನಡುವಿನ ವ್ಯತ್ಯಾಸಗಳು ವಿಚ್ಛೇದನದ ಮೂಲಕ ಅಂತ್ಯಗೊಳ್ಳುತ್ತಿರುವುದು ವಿಪರ್ಯಾಸ. ಸಂಯಮದಿಂದ ವರ್ತಿಸಿದರೆ ಇಂತಹ ಪ್ರಕರಣಗಳನ್ನು ತಡೆಯಬಹುದು. 13 ವರ್ಷ ಬೇರೆಯಾಗಿದ್ದ ದಂಪತಿ ಒಂದಾಗಿದ್ದಾರೆ. ಅವರ ಮಗಳಿಗೂ ಉತ್ತಮ ಭವಿಷ್ಯ ದೊರೆತಿದೆ. ಅವರ ಬದುಕು ಚೆನ್ನಾಗಿ ನಡೆಯಲಿ.
    ಶಶಿಕಲಾ ಪ್ರಧಾನ ನ್ಯಾಯಾಧೀಶೆ, ಜೆಎಂಎಫ್‌ಸಿ, ಹೊಸದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts