More

    ಆದರ್ಶ ಆಸ್ಪತ್ರೆಯಲ್ಲಿ ಹೋಮ್ ಕ್ವಾರಂಟೈನ್

    ಕುಂದಾಪುರ: ವಿದೇಶ ಹಾಗೂ ಇತರ ಕಡೆಯಿಂದ ಬರುವವರಿಗೆ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್‌ಗಳ ಐಸೋಲೇಶನ್ ವಾರ್ಡ್ ತೆರೆಯಲಾಗಿದ್ದು, ಹೆಚ್ಚುವರಿಯಾಗಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹಳೇ ಆದರ್ಶ ಆಸ್ಪತ್ರೆಯನ್ನು ಹೋಮ್ ಕ್ವಾರಂಟೈನ್ ಆಸ್ಪತ್ರೆಯಾಗಿ ಬದಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಆದರ್ಶ ಆಸ್ಪತ್ರೆ ಬೇರೆ ಕಡೆ ಶಿಪ್ಟ್ ಆಗಿದ್ದು, ಹಳೇ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳಲಾಗಿತ್ತು. ಹಳೇ ಕಟ್ಟಡವನ್ನು ಹೋಮ್ ಕ್ವಾರಂಟೈನ್ ಆಸ್ಪತ್ರೆಯಾಗಿ ಪರಿವರ್ತಿಸಲು ಡಾ.ಆದರ್ಶ ಹೆಬ್ಬಾರ್ ಕುಟುಂಬ ಮುಂದೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ ಜಿಲ್ಲಾಡಳಿತದ ಈ ಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತಗೊಂಡಿದೆ.

    ಜನಸಂಚಾರಕ್ಕಿನ್ನೂ ಬಿದ್ದಿಲ್ಲ ಬ್ರೇಕ್: ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿ ಮೂರು ದಿನವಾಗಿದ್ದು, ಶುಕ್ರವಾರ ಲಾಕ್‌ಡೌನ್‌ಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂದನೆ ವ್ಯಕ್ತಗೊಂಡಿದ್ದರೆ, ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಜನಸಂಚಾರಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಅನಗತ್ಯ ತಿರುಗಾಟ ನಡೆಸಿದರೆ ಕೇಸು ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಸಿದರೂ ಪೇಟೆ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ತಲ್ಲೂರು ಪಡಿತರ ವಿತರಣೆ ಕೇಂದ್ರದ ಬಳಿ ಜನದಟ್ಟಣೆ ಇದ್ದರೂ ಸಾಮಾಜಿಕ ಅಂತರ ಇತ್ತು. ಹೆಮ್ಮಾಡಿ, ನೆಂಪು, ವಂಡ್ಸೆ, ಚಿತ್ತೂರು, ಕಂಚಿನಕೊಡ್ಲು, ಆಲೂರು, ಹರ್ಕೂರು, ಸೇನಾಪುರ, ಮುಳ್ಳಿಕಟ್ಟೆ, ನಾಯಕವಾಡಿ, ಗುಜ್ಜಾಡಿ, ಗಂಗೊಳ್ಳಿ ಪ್ರದೇಶಗಳಲ್ಲಿ ಒಂದೆರಡು ಅಗತ್ಯ ವಸ್ತುಗಳ ಅಂಗಡಿ ಹಾಗೂ ಪಡಿತರ ಅಂಗಡಿ ಹೊರತು ಪಡಿಸಿ ಮಿಕ್ಕೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರಕಡಿಮೆಯಿತ್ತು. ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾಮಾಜಿಕ ಹಾಗೂ ನಾಗರಿಕ ಪ್ರಜ್ಞೆ ಮೆರೆದಿದ್ದಾರೆ.

    ಗ್ರಾಮ ಭಾಗದಲ್ಲಿ ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ವಸ್ತುಗಳು ಖಾಲಿಯಾಗಿ ಮಾರಾಟ ಭರಾಟೆ ಇಲ್ಲದ್ದರಿಂದ ಅಂಗಡಿಗಳು ಮುಚ್ಚಿವೆ. ತೆರೆದಿರುವ ಒಂದೆರಡು ಅಂಗಡಿಗಳಲ್ಲಿ ಆಳಿದುಳಿದ ವಸ್ತು ಮಾರಾಟ ಮಾಡಲಾಗುತ್ತಿದೆ. ಬಹುತೇಕ ಮೀನು ಮಾರುಕಟ್ಟೆಗಳಲ್ಲಿ ಕರ್ಫ್ಯೂ ವಾತಾವರಣ ಇತ್ತು. ಆಲೂರು, ಮುಳ್ಳಿಕಟ್ಟೆ, ಗಂಗೊಳ್ಳಿ, ಗುಜ್ಜಾಡಿ ಮುಂತಾದ ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

    ಕುಂದಾಪುರ ಎಸಿ, ಎಎಸ್ಪಿ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಕರ್ಫ್ಯೂ ಉಲ್ಲಂಘಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಬರಬೇಡಿ ತುರ್ತು ಅಗತ್ಯವಿದ್ದರೆ ಮಾತ್ರ ಬನ್ನಿ. ದಿನಬಳಕೆ ವಸ್ತುಗಳ ಬೆಲೆ ಏರಿಸಿ ವ್ಯಾಪಾರ ಮಾಡಿದರೆ, ಪರವಾನಗಿ ರದ್ದು ಮಾಡಿ, ಅಂಗಡಿ ಬಂದ್ ಮಾಡಲಾಗುತ್ತದೆ.
    ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts