More

    ಬುಡಕಟ್ಟು ಮೌಖಿಕ ಸಾಹಿತ್ಯದ ಬುನಾದಿ

    ಹಿರಿಯೂರು: ಮಾನಸಿಕ ಮತ್ತು ಶಾರೀರಕವಾಗಿ ಬಲಿಷ್ಠವಾಗಿರುವ ವರ್ಗವೇ ಬುಡಕಟ್ಟು ಸಮುದಾಯ. ಇದು ಮೌಖಿಕ ಸಾಹಿತ್ಯದ ನೆಲೆವೀಡು ಎಂದು ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ತೇಜಸ್ವಿ ಕಟ್ಟೀಮನಿ ಅಭಿಪ್ರಾಯಪಟ್ಟರು.

    ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಗಿರಿಜನ ಉಪ ಯೋಜನೆಯಡಿ ನಗರದ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 5 ದಿನಗಳ ಬರಹ ಮತ್ತು ಮುದ್ರಣ ಕೌಶಲ ಅಭಿವೃದ್ಧಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ 10 ಕೋಟಿ ಬುಡಕಟ್ಟು ಸಮುದಾಯದ ಜನರಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಡ, ಹರಿಯಾಣ, ಉತ್ತರಪ್ರದೇಶ, ತಮಿಳುನಾಡು, ಕೇರಳ ಹಾಗೂ ವಿವಿಧ ರಾಜ್ಯಗಳಲ್ಲಿ 645ಕ್ಕಿಂತ ಹೆಚ್ಚು ಬುಡಕಟ್ಟು ಸಮುದಾಯದವರಿದ್ದಾರೆ. ಇದರಲ್ಲಿ ಮುಖ್ಯವಾಗಿ ಬಿಲ್, ಬಿಲಾಲ, ಬೈಗಾ, ಗೊಂಡ ಇತ್ಯಾದಿ ಪಂಗಡಗಳಿವೆ ಎಂದು ತಿಳಿಸಿದರು.

    ಮ್ಯಾಸ ಬೇಡರ ಸಾಹಿತ್ಯ, ಜಗಳೂರಜ್ಜರ ಸಾಹಿತ್ಯ, ಸಿರಿಯಜ್ಜಿಯ ಹಾಡುಗಳಲ್ಲಿ ಬುಡಕಟ್ಟು ಸಮುದಾಯದ ಸಂಸ್ಕೃತಿ, ಸಂಸ್ಕಾರವನ್ನು ಕಾಣಬಹುದಾಗಿದೆ ಎಂದರು.

    ಭಾಷೆ ಅದ್ಭುತ ಶಕ್ತಿ. ಇದರಿಂದ ಪ್ರಭುತ್ವ ಸಾಧಿಸಬೇಕು. ರೂಪಾಂತರ, ಅನುವಾದ ಬಹುದೊಡ್ಡ ಉದ್ಯಮವಾಗಿವೆ. ಜ್ಞಾನ ಸಂಪಾದಿಸಿ, ಕೌಶಲಗಳನ್ನು ಬೆಳೆಸಿಕೊಂಡು ಬರಹ ಮತ್ತು ಮುದ್ರಣಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕಾದುದು ಯುವ ಸಮುದಾಯದ ಕರ್ತವ್ಯ ಎಂದರು.

    ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ಮೇಲು ಕೀಳೆಂಬ ಭಾವನೆಯಿಂದ ಹೊರ ಬಂದರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಮೌಖಿಕ ಪರಂಪರೆಯಲ್ಲಿ ಕಂಡು ಬಂದ ಸಾಹಿತ್ಯವನ್ನು ಬರವಣಿಗೆಗೆ ತಂದಾಗ ಹಲವಾರು ಸಮಸ್ಯೆಗಳು ಕೊನೆಗೊಳ್ಳುತ್ತವೆ. ಬೆವರು, ಕಣ್ಣೀರು, ಹಸಿವು, ರಕ್ತದ ಹನಿಗಳಿಂದ ನಿಜವಾದ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

    ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟೆ ಮಾತನಾಡಿ, ತಳ ಸಮುದಾಯ, ಬುಡಕಟ್ಟು ಸಮಾಜದಲ್ಲಿನ ಮೌಖಿಕ ಸಾಹಿತ್ಯವನ್ನು ಬರಹಕ್ಕಿಳಿಸಿ ಪುಸ್ತಕ ರೂಪ ಕೊಡಲು, ಲೇಖನ ರಚಿಸಲು, ವಿಶೇಷ ಅಂಕಣ ತಯಾರಿಸಲು ಇಂತಹ ಶಿಬಿರಗಳು ಸಹಕಾರಿ ಎಂದರು.

    ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟರ್ ಎನ್.ಕರಿಯಪ್ಪ, ಸಂಚಾಲಕ ಸಂತೋಷ್ ತಮ್ಮಯ್ಯ, ಪ್ರಾಚಾರ್ಯ ಡಾ.ಡಿ.ಧರಣೇಂದ್ರಯ್ಯ, ಕಮ್ಮಟದ ಸಹ ನಿರ್ದೇಶಕ ಕೆ.ಒ.ಮಹಾಂತೇಶ್ ನಾಯಕ, ಆರ್.ಪುಷ್ಪಲತಾ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ತಿಪ್ಪೇಸ್ವಾಮಿ, ಎಸ್.ಜಿ.ರಂಗಸ್ವಾಮಿ ಸಕ್ಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts