More

  ಅನುದಾನದ ಕೊರತೆ ರಸ್ತೆ ದುರವಸ್ಥೆ

  ಹಿರೇಕೆರೂರ: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
  ಪಪಂ ವ್ಯಾಪ್ತಿಯಲ್ಲಿ ಒಟ್ಟು 20 ವಾರ್ಡ್‌ಗಳಿದ್ದು, 64 ಕಿ.ಮೀ. ರಸ್ತೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 43.79 ಕಿ.ಮೀ. ಕಾಂಕ್ರಿಟ್, 9 ಕಿ.ಮೀ. ಡಾಂಬರ್ ರಸ್ತೆ ಇದೆ. ಇನ್ನುಳಿದ 11.21 ಕಿ.ಮೀ. ರಸ್ತೆ ಸುಧಾರಣೆ ಆಗಬೇಕಿದೆ.
  ರಾಘವೇಂದ್ರ ಕಾಲನಿ, ತಂಬಾಕದ ನಗರ, ಅಯ್ಯಪ್ಪಸ್ವಾಮಿ ನಗರ, ಹೌಸಿಂಗ್ ಬೋರ್ಡ್, ಜಟ್‌ಪಟ್ ನಗರ, ಜಾವಿದ್‌ಖಾನ್ ನಗರ, ಚೌಡೇಶ್ವರಿ ನಗರ, ಅಗ್ನಿಶಾಮಕ ದಳದ ಕಚೇರಿ ರಸ್ತೆ, ಕೋಟೆ ನಗರದಿಂದ ವೀರಭದ್ರೇಶ್ವರ ದೇವಸ್ಥಾನ ಮಾರ್ಗವಾಗಿ ದುರ್ಗಾದೇವಿ ದೇವಸ್ಥಾನದ ರಸ್ತೆ, ಸಂತೆ ಮೈದಾನ ಹಿಂಭಾಗದ ಮುಖ್ಯ ರಸ್ತೆ ಹೀಗೆ ಒಟ್ಟು 11.21 ಕಿ.ಮೀ. ವಿವಿಧ ಕಾಲನಿಗಳಲ್ಲಿ ರಸ್ತೆ ಅಭಿವೃದ್ಧಿ ಆಗಬೇಕಿದೆ.
  ಈ ಹಿಂದೆ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಒಳಚರಂಡಿ ನಿರ್ಮಾಣಕ್ಕಾಗಿ ಅಗೆದು, ಸರಿಯಾಗಿ ಮುಚ್ಚಿಲ್ಲ. ಹೀಗಾಗಿ, ಒಳಚರಂಡಿಯ ಮುಚ್ಚಳಗಳು ರಸ್ತೆಯಲ್ಲಿ ಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕೆಲ ಕಾಲನಿಗಳಲ್ಲಿ ಈವರೆಗೆ ಡಾಂಬರೀಕರಣವಾಗಲಿ, ಕಾಂಕ್ರೀಟ್ ರಸ್ತೆ ಆಗಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅನುದಾನ ಕೊರತೆಯ ನೆಪ ಹೇಳುತ್ತಿದ್ದಾರೆ. ಪಟ್ಟಣದ ಜನರಿಂದ ವರ್ಷಕ್ಕೆ ಅಂದಾಜು 60 ಲಕ್ಷ ರೂ. ತೆರಿಗೆ ಸಂಗ್ರಹಿಸುವ ಪಪಂ ರಸ್ತೆಗಳ ಅಭಿವೃದ್ಧಿಗೆ ಏಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಎಲ್ಲ ಕಾಲನಿಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  ಹೌಸಿಂಗ್ ಬೋರ್ಡ್ ಕಾಲನಿ ನಿರ್ಮಾಣ ಆದಾಗಿನಿಂದ ಈವರೆಗೆ ಕೆಲ ರಸ್ತೆಗಳು ಡಾಂಬರ್, ಕಾಂಕ್ರೀಟ್ ಕಂಡಿಲ್ಲ. ಹೀಗಾಗಿ, ಈ ರಸ್ತೆಗಳಲ್ಲಿ ಓಡಾಡಲು ತೀವ್ರ ತೊಂದರೆಯಾಗುತ್ತಿದೆ. ಕೂಡಲೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಅಭಿವೃದ್ಧಿ ಪಡಿಸಬೇಕಿದೆ.
  ಜಗದೀಶ ಮುರಡೇಶ್ವರ ಸ್ಥಳೀಯ ನಿವಾಸಿ

  ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು, ಮನವಿಗಳು ಬಂದಿವೆ. ಅಭಿವೃದ್ಧಿ ಪಡಿಸಲು ಅನುದಾನ ಕೊರತೆಯಿದೆ. ಯುಟಿಪಿ ಇಲಾಖೆಯವರು ಕೆಲ ಕಾಲನಿಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದಾರೆ. ಇನ್ನು ಬಾಕಿ ಉಳಿದ ರಸ್ತೆಗಳನ್ನು ಅನುದಾನ ಬಂದ ಕೂಡಲೇ ಅಭಿವೃದ್ಧಿಪಡಿಸಲಾಗುವುದು.
  ಎಸ್.ಎಂ. ಟಿಪ್ಪು ಪಪಂ ಇಂಜಿನಿಯರ್

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts