More

    ದಕ್ಷಿಣದತ್ತ ಬಾಲಿವುಡ್…

    ದಕ್ಷಿಣದ ಚಿತ್ರಗಳು ಹಿಂದಿಗೆ ರಿಮೇಕ್ ಆಗುವುದು ಹೊಸದಲ್ಲ. ದಕ್ಷಿಣದ ಕಲಾವಿದರು ಮತ್ತು ತಂತ್ರಜ್ಞರು ಬಾಲಿವುಡ್​ಗೆ ಹೋಗಿ ಕೆಲಸ ಮಾಡುವುದು ಹೊಸದಲ್ಲ. ದಕ್ಷಿಣದ ನಾಯಕಿಯರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ರಾರಾಜಿಸುವುದು ಹೊಸದಲ್ಲ. ಇವೆಲ್ಲವೂ ಅದೆಷ್ಟೋ ವರ್ಷಗಳಿಂದ ನಡೆದುಕೊಂಡೇ ಬರುತ್ತಿವೆ. ಆದರೆ, ಬಾಲಿವುಡ್​ನವರು ದಕ್ಷಿಣದತ್ತ ಬಂದಿದ್ದು ಕಡಿಮೆಯೇ. ಆದರೆ, ‘ಬಾಹುಬಲಿ’ ಮತ್ತು ‘ಕೆಜಿಎಫ್ 2’ ಚಿತ್ರಗಳು ಬಂದಿದ್ದೇ ಬಂದಿದ್ದು, ಒಟ್ಟಾರೆ ಚಿತ್ರಣವೇ ಬದಲಾಗಿದೆ.

    ‘ಎಲ್ಲರೂ ಹಾಲಿವುಡ್​ಗೆ ಹೋಗಬೇಕು ಎಂದು ಬಯಸುತ್ತಾರೆ. ಆದರೆ, ನಾನು ದಕ್ಷಿಣದ ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತೇನೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡುವುದಕ್ಕೆ ಶುರು ಮಾಡಿದರೆ, ಅದೆಷ್ಟು ಜನ ನಮ್ಮ ಚಿತ್ರಗಳನ್ನು ನೋಡಬಹುದು ಯೋಚಿಸಿ. ಅವರ ಅಭಿಮಾನಿಗಳು, ನನ್ನ ಅಭಿಮಾನಿಗಳು ಒಟ್ಟಿಗೆ ಸೇರಿದರೆ ಅದ್ಭುತ ಸಂಭಿವಿಸುತ್ತದೆ. ನಾವು ಚಿತ್ರ 300 ಕೋಟಿ ರೂ. ದುಡಿಯಿತು, 400 ಕೋಟಿ ಕಲೆಕ್ಷನ್ ಆಯಿತು ಅಂತೆಲ್ಲ ಹೇಳುತ್ತೇವೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದರೆ, ಮೂರು ಸಾವಿರ ಕೋಟಿ ರೂ. ಸಂಪಾದಿಸಬಹುದೇನೋ?’

    ಹಾಗಂತ ಹೇಳಿಕೊಂಡಿದ್ದು ಬಾಲಿವುಡ್ ನಟ ಸಲ್ಮಾನ್ ಖಾನ್. ಅವರು ಹೀಗೆ ಮಾತನಾಡುವುದಕ್ಕೂ ಕಾರಣವಿದೆ. ಸಲ್ಮಾನ್ ಇದೇ ಮೊದಲ ಬಾರಿಗೆ, ಚಿರಂಜೀವಿ ಅಭಿನಯದ ‘ಗಾಡ್​ಫಾದರ್’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾದರೂ ಈ ಚಿತ್ರದಲ್ಲಿ ನಟಿಸುವುದಕ್ಕೆ ಎರಡು ಕಾರಣಗಳಿವೆ. ಒಂದು, ಚಿರಂಜೀವಿ ಜತೆಗಿನ ಗೆಳೆತನ. ಇನ್ನೊಂದು, ದಕ್ಷಿಣದ ಚಿತ್ರಗಳಿಗಿರುವ ಜನಪ್ರಿಯತೆ. ದಕ್ಷಿಣದಿಂದ ಹಿಂದಿ ಚಿತ್ರರಂಗದ ಕಡೆಗೆ ನಟರು, ನಟಿಯರು, ನಿರ್ದೇಶಕರು, ತಂತ್ರಜ್ಞರು, ನಿರ್ವಪಕರ ದಂಡಯಾತ್ರೆ ಅದೆಷ್ಟೋ ವರ್ಷಗಳಿಂದ ನಡೆದೇ ಇದೆ. ಆದರೆ, ಅದ್ಯಾಕೋ ಗೊತ್ತಿಲ್ಲ. ಬಾಲಿವುಡ್ ಮಂದಿ ಮಾತ್ರ ದಕ್ಷಿಣದತ್ತ ಬಂದ ಉದಾಹರಣೆಗಳು ಕಡಿಮೆಯೇ.

    ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬಾಲಿವುಡ್ ನಟರು, ತಂತ್ರಜ್ಞರು ದಕ್ಷಿಣದ ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕೆ ಹಾತೊರೆಯುತ್ತಿದ್ದಾರೆ. ಇಲ್ಲಿ ಅವಕಾಶಗಳು ಸಿಗುತ್ತವಾ ಎಂದು ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು ‘ಕೆಜಿಎಫ್ 2’ ಎಂದರೆ ತಪ್ಪಿಲ್ಲ. ಅದಕ್ಕೂ ಮುನ್ನ ‘ಬಾಹುಬಲಿ’, ಪ್ಯಾನ್ ಇಂಡಿಯಾ ಚಿತ್ರಗಳಿಗೆ ಮುನ್ನುಡಿ ಬರೆದಿತ್ತು. ಯಾವಾಗ ‘ಕೆಜಿಎಫ್ 2’ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ನಟಿಸಿ ದೊಡ್ಡ ಯಶಸ್ಸು ಮತ್ತು ಜನಪ್ರಿಯತೆ ನೋಡಿದರೋ, ಅಲ್ಲಿಂದ ಎಲ್ಲವೂ ಬದಲಾಯಿತು ಎಂದರೆ ತಪ್ಪಿಲ್ಲ.

    ಆ ನಂತರ ಪ್ಯಾನ್ ಇಂಡಿಯಾ ಚಿತ್ರಗಳ ಸಂಖ್ಯೆ ಹೆಚ್ಚಿದ್ದಷ್ಟೇ ಅಲ್ಲ, ಎಲ್ಲ ಭಾಷೆಗಳಿಗೂ ಸಲ್ಲುವ ಕಲಾವಿದರನ್ನು ಆಯ್ಕೆ ಮಾಡುವ ಪರಿಪಾಠವು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಅಲ್ಲಿಯವರೆಗೂ ದಕ್ಷಿಣದಿಂದ ದೂರವೇ ಇದ್ದ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಇತ್ತೀಚೆಗೆ ಹೆಚ್ಚೆಚ್ಚು ದಕ್ಷಿಣದ ಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿಸಿಕೊಳ್ಳುತ್ತಿವೆ. ಟಿ-ಸಿರೀಸ್, ಧರ್ಮ ಪ್ರೊಡಕ್ಷನ್ ಮುಂತಾದ ಸಂಸ್ಥೆಗಳು ದಕ್ಷಿಣದ ನಿರ್ಮಾಣ ಸಂಸ್ಥೆಗಳ ಜೊತೆಗೆ ಕೈ ಜೋಡಿಸುತ್ತಿವೆ. ಕರಣ್ ಜೋಹರ್, ‘ಲೈಗರ್’ ಚಿತ್ರ ನಿರ್ವಣದಲ್ಲಿ ತೊಡಗಿಸಿಕೊಂಡಿದ್ದರು. ‘ಗಾಡ್​ಫಾದರ್’ಗೆ ಸಲ್ಮಾನ್ ಬಂದರು. ಹಿಂದಿಯ ‘ರಾಮ್ ಲೀಲಾ’ದಲ್ಲಿ ತೆಲುಗಿನ ಸತ್ಯದೇವ್ ನಟಿಸಿದ್ದಾರೆ. ಇದೀಗ ಕನ್ನಡದ ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ‘ಕಬ್ಜ’ ಚಿತ್ರದಲ್ಲಂತೂ ಎಲ್ಲ ಭಾಷೆಗಳಿಗೆ ಸಲ್ಲುವ ನಟ-ನಟಿಯರಿದ್ದಾರೆ.

    ಒಟ್ಟಾರೆ, ಸದ್ಯದ ಪರಿಸ್ಥಿತಿಯಲ್ಲಿ ಬಾಲಿವುಡ್ ಮತ್ತು ದಕ್ಷಿಣದ ನಡುವಿನ ಅಂತರ ಬಹಳ ಕಡಿಮೆಯಾಗುತ್ತಿದೆ. ಮುಂಚೆ ಭಾರತೀಯ ಚಿತ್ರರಂಗ ಎಂದರೆ ಹೊರಗೆ ಬಾಲಿವುಡ್ ಎಂಬ ಪ್ರತೀತಿ ಇತ್ತು. ಅದು ಕ್ರಮೇಣ ಮರೆಯಾಗಿ ದಕ್ಷಿಣದವರೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಖುಷಿಯ ವಿಚಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts