More

    ಸ್ವಚ್ಛತಾ ಕಾರ್ಯಕ್ಕಿಳಿದ ಪಡುಪೆರಾರ ಪಿಡಿಒ

    ವಿಜಯವಾಣಿ ಸುದ್ದಿಜಾಲ ಗುರುಪುರ

    ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜ್ಪೆ-ಕೈಕಂಬ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ತುಂಬಿದ್ದ ಲೋಡ್‌ಗಟ್ಟಲೆ ತ್ಯಾಜ್ಯವನ್ನು ಪಂಚಾಯಿತಿ ಪಿಡಿಒ ಉಗ್ಗಪ್ಪ ಮೂಲ್ಯ ನೇತೃತ್ವದಲ್ಲಿ ಪಂಚಾಯಿತಿ ಸಿಬ್ಬಂದಿ ಗುರುವಾರ ವಿಲೇವಾರಿ ಮಾಡಿದರು.

    ಹೆದ್ದಾರಿಯ ಅಂಬಿಕಾನಗರ-ಪುಚ್ಚಾಳ-ಪೆರಾರ ದ್ವಾರದವರೆಗೆ ರಸ್ತೆಯ ಎರಡೂ ಬದಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ತುಂಬಿತ್ತು. ಈ ಭಾಗದಲ್ಲಿ ರಾತ್ರಿ ವೇಳೆ ವಾಹನಗಳಲ್ಲಿ ಸಂಚರಿಸುವವರು ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಎಸೆಯುತ್ತಾರೆ. ಕಳೆದ ವರ್ಷ ಇಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಿ, ತ್ಯಾಜ್ಯ ಎಸೆಯುವವರಿಗೆ ಕಟ್ಟೆಚ್ಚರ ನೀಡಲಾಗಿತ್ತು. ಜತೆಗೆ ಕೆಲವರಿಗೆ ದಂಡ ಹೇರಲಾಗಿತ್ತು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಲಾಗಿದ್ದು, ರಸ್ತೆ ಬದಿಯ ಅಂಗಡಿ ಮಾಲೀಕರು ಅಥವಾ ಮನೆಯವರು ರಸ್ತೆಗೆ ತ್ಯಾಜ್ಯ ಎಸೆಯದೆ ಪಂಚಾಯಿತಿ ವಾಹನಕ್ಕೆ ನಿಯಮಿತವಾಗಿ ನೀಡಬೇಕು. ಎಲ್ಲಿಯಾದರೂ ರಸ್ತೆ ಬದಿ ತ್ಯಾಜ್ಯ ಎಸೆಯುವವರನ್ನು ಕಂಡರೆ ಅಂಗಡಿ ಮಾಲೀಕರು ಅಥವಾ ಮನೆಯವರು ಫೋಟೋ ಕ್ಲಿಕ್ಕಿಸಿ ಪಂಚಾಯಿತಿಗೆ ನೀಡಿದರೆ, ತಪ್ಪಿತಸ್ಥರ ವಿರುದ್ಧ 5,000 ರೂ.ವರೆಗೆ ದಂಡ ಹೇರಲು ಅವಕಾಶವಿದೆ.

    ಪಂಚಾಯಿತಿಯ ಪಿಡಿಒ ಉಗ್ಗಪ್ಪ ಮೂಲ್ಯ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ. ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದೆ, ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತುಕೊಂಡು ಮುಂದುವರಿಯಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ತ್ಯಾಜ್ಯ ಸುಡುವುದರಿಂದ ಅನೇಕ ಸಮಸ್ಯೆ ಉಂಟಾಗುತ್ತದೆ. ತ್ಯಾಜ್ಯದಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಈಗ ದೊಡ್ಡ ಮೊತ್ತದ ದಂಡ ಹಾಗೂ ಪ್ರಕರಣ ದಾಖಲಿಸಲು ಅವಕಾಶವಿದೆ. ಹಿಂದೆ ತ್ಯಾಜ್ಯ ಎಸೆದ ಕೆಲವರ ವಿರುದ್ಧ ಸಾಕ್ಷಾೃಧಾರ ಸಹಿತ ದಂಡ ಹೇರಲಾಗಿತ್ತು. ಸಿಕ್ಕಸಿಕ್ಕಲ್ಲಿ ತ್ಯಾಜ್ಯ ಎಸೆಯುವುದರಿಂದ ಮಳೆಗಾಲದಲ್ಲಿ ಭಾರಿ ಸಮಸ್ಯೆ, ಬೀದಿನಾಯಿಗಳ ಕಾಟ ಉಂಟಾಗುತ್ತದೆ. ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಜನ ಸಹಕರಿಸಬೇಕು. ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ತುಂಬಿದ್ದು, ಕೆಲವೆಡೆ ಸಿಸಿಟಿವಿ ಅಳವಡಿಸಲು ಮಾತುಕತೆ ನಡೆದಿದೆ.

    -ಉಗ್ಗಪ್ಪ ಮೂಲ್ಯ
    ಪಿಡಿಒ, ಪಡುಪೆರಾರ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts