More

    ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತವಾಗಿ ನಡೆದ ಪ್ರಜಾಪ್ರಭುತ್ವ ಹಬ್ಬ

    ಹಾಸನ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ.80ರಷ್ಟು ದಾಖಲೆಯ ಮತದಾನವಾಗಿದೆ. ಹಾಸನ ಲೋಕಸಭಾ ಚುನಾವಣಾ ಕಣದಲ್ಲಿರುವ 15 ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಯಲ್ಲಿ ಸ್ಟ್ರಾಂಗ್ ರೂಮ್‌ಗೆ ಭದ್ರವಾಗಿದೆ. ಜೂನ್ 4ರಂದು ಮತದಾರ ಪ್ರಭು ಯಾರಿಗೆ ಜೈ ಅಂದಿದ್ದಾರೆ ಎಂಬುದು ತಿಳಿದುಬರಲಿದೆ.
    ಬೆಳಗ್ಗೆ 7 ಗಂಟೆಗೆ ಸರಿಯಾಗಿ ಆರಂಭವಾದ ಮತದಾನ ಬೆಳಗ್ಗೆ 9 ಗಂಟೆಗೆ ಶೇ.8.23, ಬೆಳಗ್ಗೆ 11 ಗಂಟೆಗೆ ಶೇ.22.05, ಮಧ್ಯಾಹ್ನ 1 ಗಂಟೆಗೆ ಶೇ.41.02, ಮಧ್ಯಾಹ್ನ 3ಗಂಟೆಗೆ ಶೇ.55.09ರಷ್ಟು ಮತದಾನ, ಸಂಜೆ 5 ಗಂಟೆಗೆ ಶೇ.72.03 ಹಾಗೂ ಸಂಜೆ ಆರು ಗಂಟೆಗೆ ಮತದಾನ ಮುಕ್ತಾಯಗೊಂಡಾಗ ಜಿಲ್ಲೆಯಲ್ಲಿ ಒಟ್ಟು ಶೇ.80ರಷ್ಟು ಮತದಾನವಾಗಿದೆ.
    ಬೆಳಗ್ಗೆ 7 ಗಂಟೆಯಿಂದ ಮತದಾರ ಪ್ರಭುಗಳು ಮತದಾನ ಮಾಡಲು ಉತ್ಸಾಹದಿಂದ ಪಾಲ್ಗೊಂಡರು. ಮತಗಟ್ಟೆಗೆ ಮತದಾರರು ತೆರಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ ಉರಿಬಿಸಿಲಿನಿಂದ ಮತದಾನ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿತ್ತು. ಆನಂತರ ಮತ್ತೆ ಚುರುಕುಗೊಂಡಿತು.
    ಮತದಾನ ಪ್ರಕ್ರಿಯೆ ಆರಂಭಗೊಂಡ ನಂತರ ಜಿಲ್ಲೆಯ ಹಲವು ಗಣ್ಯರು ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಹಕ್ಕನ್ನು ಚಲಾಯಿಸಿದರು. ಅವರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ, ಮಾಜಿ ಸಚಿವ ಎಚ್.ಡಿ ರೇವಣ್ಣ ಕುಟುಂಬ, ಜಿಲ್ಲೆಯ ಶಾಸಕರಾದ ಎ.ಮಂಜು, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್, ಹುಲ್ಲಹಳ್ಳಿ ಸುರೇಶ್, ಸಿಮೆಂಟ್ ಮಂಜು ಹಾಗೂ ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ, ಪ್ರೀತಂ ಗೌಡ, ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್, ಎಂ.ಎ. ಗೋಪಾಲಸ್ವಾಮಿ ಹಾಗೂ ಇತರರು ತಮ್ಮ ಹಕ್ಕು ಚಲಾಯಿಸಿದರು.
    ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲ ಮತಯಂತ್ರಗಳನ್ನು ಆಯಾ ತಾಲೂಕು ಕೇಂದ್ರಕ್ಕೆ ರವಾನಿಸಲಾಯಿತು. ನಂತರ ಅಲ್ಲಿಂದ ನಗರದ ಇಂಜಿನಿಯರಿಂಗ್ ಕಾಲೇಜಿಗೆ ತಂದು ಸ್ಟ್ರಾಂಗ್ ರೂಮ್‌ನಲ್ಲಿ ಎಲ್ಲ ಇವಿಎಂ ಯಂತ್ರಗಳನ್ನು ಭದ್ರಪಡಿಸಲಾಯಿತು.
    ತಾಲೂಕುವಾರು ಚಲಾವಣೆಯಾದ ಶೇಖಡವಾರು ಮತದಾನದಲ್ಲಿ ಶ್ರವಣಬೆಳಗೊಳ ಮೊದಲ ಸ್ಥಾನದಲ್ಲಿದ್ದರೆ ಹಾಸನ ಕೊನೆಯ ಸ್ಥಾನದಲ್ಲಿದೆ. ಹಾಸನದಲ್ಲಿ ಶೇ.63.71 , ಶ್ರವಣಬೆಳಗೊಳದಲ್ಲಿ ಶೇ.81.60, ಹೊಳೆನರಸೀಪುರದಲ್ಲಿ ಶೇ.77.87, ಅರಕಲಗೂಡಿನಲ್ಲಿ ಶೇ.65.35, ಬೇಲೂರಿನಲ್ಲಿ ಶೇ.69.48, ಸಕಲೇಶಪುರದಲ್ಲಿ ಶೇ.75.20, ಅರಸೀಕೆರೆಯಲ್ಲಿ ಶೇ.74.44 ಹಾಗೂ ಕಡೂರಿನಲ್ಲಿ ಶೇ.75.15ರಷ್ಟು ಮತದಾನವಾಗಿದೆ.
    ಹುಟ್ಟೂರಿನಲ್ಲಿ ಮತ ಚಲಾಯಿಸಿದ ಡಾಲಿ ಧನಂಜಯ
    ಖ್ಯಾತ ಚಲನಚಿತ್ರ ನಾಯಕ ನಟ ಡಾಲಿ ಧನಂಜಯ ಅವರು ತಮ್ಮ ಹುಟ್ಟೂರಾದ ಅರಸೀಕೆರೆ ತಾಲೂಕಿನ ಕಾಳೇನಹಳಿಯಲ್ಲಿ ಮತದಾನ ಮಾಡಿದರು. ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿದ ಅವರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿದರು. ನಂತರ ಗ್ರಾಮದ ನಾಮಫಲಕದ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದರು.
    7 ಗಂಟೆಯವರೆಗೂ ಮತದಾನ
    ಆರು ಗಂಟೆಯಾದರೂ ಕೆಲವು ಮತಗಟ್ಟೆಯಲ್ಲಿ ಜನರು ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದರು. ಆರು ಗಂಟೆಯೊಳಗೆ ಮತಗಟ್ಟೆ ಆವರಣದಲ್ಲಿ ನಿಂತಿದ್ದ ಮತದಾರರಿಗೆ ಟೋಕನ್ ಕೊಟ್ಟು ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಹಲವು ಮತಗಟ್ಟೆಗಳಲ್ಲಿ 7 ಗಂಟೆಯವರೆಗೂ ಮತದಾನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts