More

    ಮೌಲ್ಯಾಂಕನ ಪರೀಕ್ಷೆಗೆ ಮತ್ತೆ ಹೈಕೋರ್ಟ್ ಅಸ್ತು

    ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8, 9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ಮತ್ತೊಮ್ಮೆ ಅನುಮತಿ ನೀಡಿದೆ. ಈ ಬೆನ್ನಲ್ಲೇ ಆದೇಶ ಪ್ರಶ್ನಿಸಿ ಪುನಃ ಸುಪ್ರೀಂ ಕೋರ್ಟ್​ಗೆ ಮೇಲ್ಮ ನವಿ ಸಲ್ಲಿಸಲು ರುಪ್ಸಾ ಸಂಘಟನೆ ಸಿದ್ಧತೆ ಮಾಡಿಕೊಂಡಿದೆ. ಹೈಕೋರ್ಟ್ ಹಸಿರು ನಿಶಾನೆ ತೋರುತ್ತಿ ದ್ದಂತೆ ಪರೀಕ್ಷೆ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

    ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರುಪ್ಸಾ ಸಿದ್ಧತೆ

    ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ನ್ಯಾ.ರಾಜೇಶ್ ರೈ ಕೆ. ಅವರಿದ್ದ ವಿಭಾಗೀಯ ಪೀಠ ಸುದೀರ್ಘ ವಿಚಾರಣೆ ನಡೆಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ನಿಲ್ಲಿಸಲಾಗಿದ್ದ 5, 8, 9ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳು, ಪರೀಕ್ಷೆ ಸ್ಥಗಿತಗೊಂಡ ಹಂತದಿಂದಲೇ ಮುಂದುವರಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ. ಅಲ್ಲದೆ, ಮೌಲ್ಯಾಂಕನ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ರದ್ದುಗೊಳಿಸಿದೆ. ರಾಜ್ಯ ಸರ್ಕಾರವು ಮೌಲ್ಯಾಂಕನ ಪರೀಕ್ಷೆ ನಡೆಸಬಹುದು. ಪರೀಕ್ಷೆ ಪ್ರಕ್ರಿಯೆ ಸ್ಥಗಿತಗೊಂಡ ಹಂತದಿಂದಲೇ ಮುಂದುವರಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಇದೇ ವೇಳೆ, ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ರುಪ್ಸಾ ಹಾಗೂ ಅವರ್ಸ್ ಸ್ಕೂಲ್ ಸಲ್ಲಿಸಿದ ಮನವಿಯನ್ನೂ ತಿರಸ್ಕರಿಸಿದ ವಿಭಾಗೀಯ ಪೀಠ, ತಡೆಯಾಜ್ಞೆಯನ್ನು ಸುಪ್ರೀಂನಲ್ಲೇ ಕೋರುವಂತೆ ಸೂಚಿಸಿದೆ.

    ರುಪ್ಸಾ ವಾದ ಏನು?

    ರಾಜ್ಯ ಸರ್ಕಾರವು ಮೌಲ್ಯಾಂಕನ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿರು ವುದು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ವಿರುದ್ಧವಾಗಿದೆ. ಈ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಾನೂನು ಬಾಹಿರ ಎಂದು ರುಪ್ಸಾ ಪರ ವಕೀಲರು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿ ರುವ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ವ್ಯವಸ್ಥೆ ಬೇಕಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಇದನ್ನು 10, 12ನೇ ತರಗತಿಗೆ ನಡೆಸುವ ಪರೀಕ್ಷೆ ರೀತಿ ಎಂದು ತಿಳಿಯಬಾರದು. ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ನಿಯಮ ಅಧಿಸೂಚನೆಯಲ್ಲಿ ಪ್ರಕಟಿಸಬೇಕಿಲ್ಲ ಎಂದು ವಾದ ಮಂಡಿಸಿದ್ದರು.

    ಮತ್ತೆ ಸುಪ್ರೀಂ ಅಂಗಳಕ್ಕೆ?: ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ ಹೈಕೋರ್ಟ್​ನ ವಿಭಾಗೀಯ ಪೀಠದಿಂದ ಪ್ರಕಟಗೊಂಡ ತೀರ್ಪನ್ನು ಗೌರವಿಸುತ್ತೇವೆ. ಆದರೆ, ಇದು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ. ಪರೀಕ್ಷೆ ನಡೆಸಿದಲ್ಲಿ ಶಿಕ್ಷಣ ನೀತಿಯನ್ನು ಉಲಂಘನೆ ಮಾಡಿದಂತಾಗಿದೆ. ಆದೇಶದ ಬಗ್ಗೆ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ರುಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.

    ಏನಿದು ಪ್ರಕರಣ?: ಕರ್ನಾಟಕ ಶಿಕ್ಷಣ ಕಾಯ್ದೆಯಡಿ ರಾಜ್ಯ ಶಿಕ್ಷಣ ಇಲಾಖೆ 2023ರ ಅ. 6 ಮತ್ತು 9ರಂದು ಎರಡು ಸುತ್ತೋಲೆಗಳನ್ನು ಹೊರಡಿಸಿ 5, 8, 9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದಕ್ಕೆ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಅನುದಾನರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಸರ್ಕಾರ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಮೇಲ್ಮನವಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಇದಕ್ಕೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿದಾರರು ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ದ್ವಿಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್, ದ್ವಿಸದಸ್ಯ ಪೀಠದ ಮುಂದೆ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ, ಸೂಕ್ತ ಆದೇಶವನ್ನು ನೀಡುವಂತೆ ಸೂಚನೆ ನೀಡಿತ್ತು.

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts