More

    ರೆಮಲ್ ಭೀತಿ ನಾಳೆ ಭಾರಿ ಮಳೆ ಸಾಧ್ಯತೆ; ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಶನಿವಾರ (ಮೇ 25) ಬೆಳಗ್ಗೆ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ ) ಮೂನ್ಸೂಚನೆ ನೀಡಿದೆ.

    ಚಂಡಮಾರುತಕ್ಕೆ ಈಗಾಗಲೇ ‘ರೆಮಲ್’ ಎಂದು ಹೆಸರಿಡಲಾಗಿದೆ. ಚಂಡಮಾರುತ ಪರಿಣಾಮದಿಂದಾಗಿ ಒಡಿಶಾದ ಕರಾವಳಿ ಭಾಗದಲ್ಲಿ ಭಾರಿ ಮಳೆ ತರಲಿದೆ. ಮೇ 21ರಂದು ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಹಂತ ಹಂತವಾಗಿ ಸೈಕ್ಲೋನ್ ಆಗಿ ಪರಿವರ್ತನೆಯಾಗಲಿದೆ. ಈ ವೇಳೆ ಗಾಳಿಯ ವೇಗ ಜಾಸ್ತಿಯೂ ಇರಲಿದೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳದ ಕರಾವಳಿ ಭಾಗಕ್ಕೆ ಮೇ 26ರ ಸಂಜೆ ಸೈಕ್ಲೋನ್ ಅಪ್ಪಳಿಸುವ ಸಂಭವವಿದೆ. ಹೀಗಾಗಿ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಈಗಾಗಲೇ ಐಎಂಡಿ ಎಚ್ಚರಿಕೆ ಕೊಟ್ಟಿದೆ.

    ಮಾನ್ಸೂನ್ ಮೇಲೆ ಪರಿಣಾಮವಿಲ್ಲ: ಚಂಡಮಾರುತದಿಂದ ನೈಋತ್ಯ ಮಾನ್ಸೂನ್ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮಾನ್ಸೂನ್ ಇನ್ನಷ್ಟು ವ್ಯಾಪಿಸಲು ಪರಿಸ್ಥಿತಿ ಅನುಕೂಲವಾಗಿದೆ. ಕೆಲ ಸಂದರ್ಭದಲ್ಲಿ ಸೈಕ್ಲೋನ್​ನಿಂದಾಗಿ ಮಾರುತಗಳು ಮುನ್ನಡೆಯಲು ಪೂರಕ ವಾತಾವರಣ ಉಂಟಾಗುತ್ತದೆ. ಇದರಿಂದಾಗಿ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯೂ ಇರುತ್ತದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

    ಯೆಲ್ಲೋ ಅಲರ್ಟ್ ಘೋಷಣೆ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಕೆಲವೆಡೆ ಮುಂದಿನ ಎರಡು ದಿನ ಧಾರಾಕಾರ ವರ್ಷಧಾರೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಮೈಸೂರಿನಲ್ಲಿ ಮೇ 24ರಂದು ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮೇ 24ರಿಂದ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ, ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಸಾಧಾರಣ ವರ್ಷಧಾರೆಯಾಗಲಿದೆ.

    ಅಪಾರ ಹಾನಿ: ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಾಗದಲ್ಲಂತೂ ವರುಣಾರ್ಭಟ ಜನಜೀವನವನ್ನು ಸಂಪೂರ್ಣ ತಬ್ಬಿಬ್ಬುಗೊಳಿಸಿದೆ. ಅಪಾರ ಪ್ರಮಾಣದ ಆಸ್ತಿ ನಾಶ ಮಾಡಿದೆ. ಮಳೆ-ಗಾಳಿಗೆ ಆಲಿಕಲ್ಲು ಸಹ ಸಾಥ್ ನೀಡಿದ್ದು, ಹಾನಿ ಪ್ರಮಾಣ ಹೆಚ್ಚಿಸಿದೆ. ಕಲಬುರಗಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸುರಿದ ಬಿರುಗಾಳಿ ಮತ್ತು ಸಿಡಿಲಬ್ಬರದ ಮಳೆಗೆ ತಲಾ ಒಂದು ಎತ್ತು, ಎಮ್ಮೆ ಅಸುನೀಗಿವೆ. ಅಲ್ಲಲ್ಲಿ ಮರಗಳು ನೆಲಕ್ಕೆ ಉರುಳಿದ್ದರೆ, ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಅಫಜಲಪುರ ತಾಲೂಕಿನ ಕರಜಗಿಯಲ್ಲಿ ಮಳೆ-ಗಾಳಿಗೆ 100ಕ್ಕೂ ಅಧಿಕ ಮನೆಗಳ ಪತ್ರಾಸ್​ಗಳು ಹಾರಿ ಹೋಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ 100ಕ್ಕೂ ಅಧಿಕ ಮರಗಿಡಗಳು ಉರುಳಿವೆ.

    ಮಳೆ ಅವಘಡ, ಇಬ್ಬರು ಸಾವು: ಬೆಳಗಾವಿ ಜಿಲ್ಲೆಯ ವಿವಿಧೆಡೆ ಗುರುವಾರ ಸಿಡಿಲು ಸಹಿತ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಸಿಡಿಲು ಬಡಿದು ರಾಯಬಾಗ ಪಟ್ಟಣದ ಚೌಹಾಣ ತೋಟದಲ್ಲಿ ಶೋಭಾ ಕುಲಗುಡೆ (52) ಮೃತಪಟ್ಟು, ನಾಲ್ವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಾತ್ರಾಳದ ಡಾಬಾ ಬಳಿ ಗಾಳಿ-ಮಳೆಯಿಂದಾಗಿ ಕಾರಿನ ಮೇಲೆ ಟಿನ್ ಛಾವಣಿ ಬಿದ್ದು, ಕಾರಿನೊಳಗೆ ಕುಳಿತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಬಾದಾಮಿಯ ಖಾದರ್​ಸಾಬ್ (52) ಮೃತ. ಡಾಬಾಕ್ಕೆ ಊಟಕ್ಕಾಗಿ ಆಗಮಿಸಿದ್ದಾಗ ಅವಘಡ ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದೇವದುರ್ಗ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದ್ದು ಹಲವೆಡೆ ಮರಗಳು ಧರೆಗುರುಳಿವೆ. ಗಲಗ ಗ್ರಾಮದಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts