More

    ತಮಿಳುನಾಡಿನಾದ್ಯಂತ ವರುಣನ ಅಬ್ಬರ: ಇಬ್ಬರ ಸಾವು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಚೆನ್ನೈ: ಈಶಾನ್ಯ ಮಾರುತ ಆರ್ಭಟದಿಂದಾಗಿ ತಮಿಳುನಾಡಿನಾದ್ಯಂತ ವರುಣನ ಅಬ್ಬರ ಹೆಚ್ಚಾಗಿದ್ದು, ಏಳು ಜಿಲ್ಲೆಗಳಲ್ಲಿ ಆರೇಂಜ್​ ಅಲರ್ಟ್​ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಮಾಡಲಾಗಿದೆ.

    ಚೆನ್ನೈ, ಕಾಂಚಿಪುರಂ, ಚೆಂಗಲ್ಪಟ್ಟು, ತಿರುವಳ್ಳೂರ್​, ರಾಣಿಪೇಟ್​, ವಿಲ್ಲುಪುರಂ ಮತ್ತು ವೆಲ್ಲೋರ್​ ಜಿಲ್ಲೆಗಳಲ್ಲಿ ಆರೇಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಚೆನ್ನೈ ಮತ್ತು ತಿರುವಳ್ಳೂರ್ ಎರಡೂ ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೇಟ್, ವಿಲ್ಲುಪುರಂ ಮತ್ತು ವೆಲ್ಲೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.

    ಅ.29ರಂದು ಈಶಾನ್ಯ ಮಾರುತಗಳು ತಮಿಳುನಾಡಿಗೆ ಅಪ್ಪಳಿಸಿದ ದಿನದಿಂದ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈಗಾಗಲೇ ಇಬ್ಬರು ವರುಣನ ಅಬ್ಬರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಚೆನ್ನೈನಲ್ಲಿ ಮನೆಯ ಬಾಲ್ಕನಿ ಕುಸಿದು 47 ವರ್ಷದ ಶಾಂತಿ ಎಂಬಾಕೆ ದುರಂತ ಸಾವಿಗೀಡಾಗಿದ್ದಾರೆ. ಜಲಾವೃತಗೊಂಡಿದ್ದ ಪ್ರದೇಶದಲ್ಲಿ ಆಟೋ ಸಿಲುಕಿ ವಿದ್ಯುತ್​ ಶಾಕ್​ನಿಂದ 52 ವರ್ಷದ ದೇವೇಂದ್ರನ್​ ಎಂಬುವರು ಅಸುನೀಗಿದ್ದಾರೆ.

    ನವೆಂಬರ್​​ 5ರವರೆಗೂ ತಮಿಳುನಾಡಿನಾದ್ಯಂತ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈನ ಹಲವೆಡೆ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದೆ. ಆದರೆ, ಕೆಲವೆಡೆ ಜಲಾವೃತ ಕಡಿಮೆಯಾಗಿರುವುದರಿಂದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

    ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ವೆಲ್ಲೂರು, ರಾಣಿಪೇಟ್, ತಿರುಪತ್ತೂರ್ ಮತ್ತು ತಿರುವನಾಮಲೈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಮಳೆಯಿಂದಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. 21 ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಸ್ಟಾಲಿನ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ್ದು, ಮಳೆಯಿಂದ ಉಂಟಾಗಿರುವ ಅನಾಹುತಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

    ಜಲಾವೃತಗೊಂಡಿರುವ ಪ್ರದೇಶಗಳಿಂದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. (ಏಜೆನ್ಸೀಸ್​)

    ನೆದರ್ಲೆಂಡ್​ ವಿರುದ್ಧ ಪಾಕ್​​​ ಗೆಲುವು: ಬಾಬರ್​ ಅಜಾಮ್​ರನ್ನು ತರಾಟೆಗೆ ತೆಗೆದುಕೊಂಡ ಗೌತಮ್​ ಗಂಭೀರ್​!

    VIDEO| ಪ್ರಾಣ ಪಣಕ್ಕಿಟ್ಟು ದೈತ್ಯ ಕಾಳಿಂಗ ಸರ್ಪ ರಕ್ಷಣೆ: ಎದೆ ಝಲ್​ ಎನಿಸುವ ವಿಡಿಯೋ ಇದು…

    ಯಾರಾದ್ರು ಮೃತಪಟ್ಟರಷ್ಟೇ ಪೊಲೀಸರಿಗೆ ರಜೆ! ಅಸಮಾಧಾನ ಸ್ಫೋಟಗೊಳ್ತಿದ್ದಂತೆ ವಿವಾದಾತ್ಮಕ ಸುತ್ತೋಲೆ ವಾಪಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts