VIDEO| ಪ್ರಾಣ ಪಣಕ್ಕಿಟ್ಟು ದೈತ್ಯ ಕಾಳಿಂಗ ಸರ್ಪ ರಕ್ಷಣೆ: ಎದೆ ಝಲ್​ ಎನಿಸುವ ವಿಡಿಯೋ ಇದು...

Cobra
Published on

ಮುಂಬೈ: ಮಹಾರಾಷ್ಟ್ರದ ಅಹ್ಮದ್​ನಗರದ ಪ್ರಖ್ಯಾತ ಉರಗ ರಕ್ಷಕ ಸರ್ಪಮಿತ್ರ ಆಕಾಶ್ ಜಾಧವ್ ಅವರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಸುಮಾರು 13 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ಒಡಿಶಾದಲ್ಲಿ ರಕ್ಷಣೆ ಮಾಡಿದ್ದಾರೆ.

ಸರ್ಪಮಿತ್ರ ಆಕಾಶ್​ ಜಾಧವ್​ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಒಡಿಶಾದ ನಯಾಗಢ ಜಿಲ್ಲೆಯ ಒಡಂಗಾವ್​ ತಾಲೂಕಿನ ಕುಸಪಂದೇರಿ ಗ್ರಾಮಕ್ಕೆ ಆಕಾಶ್​ ತಮ್ಮ ತಂಡದೊಂದಿಗೆ ತೆರಳಿ ಗ್ರಾಮದ ಹೊಲವೊಂದರಲ್ಲಿ ಅವಿತು ಕುಳಿತಿದ್ದ ಸರ್ಪವನ್ನು ರಕ್ಷಣೆ ಮಾಡಿದ್ದಾರೆ.

ಸುಮಾರು 18 ನಿಮಿಷದ ವಿಡಿಯೋದಲ್ಲಿ ಕಾಳಿಂಗ ಸರ್ಪವು ಆಕಾಶ್​ ಅವರನ್ನು ಕಚ್ಚಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದು, ತಮ್ಮ ಕೌಶಲ್ಯ ಮತ್ತು ಅನುಭವದಿಂದ ಆಕಾಶ್​ ಎಸ್ಕೇಪ್​ ಆಗುವ ರೋಚಕ ದೃಶ್ಯವನ್ನು ನೋಡಬಹುದಾಗಿದೆ.

ಹಾವನ್ನು ಹಿಡಿದ ಬಳಿಕ ಸ್ಥಳೀಯರಿಗೆ ಕಾಣುವಂತೆ ಹಾವನ್ನು ಬಿಟ್ಟು ಅದನ್ನು ಆಡಿಸುವಾಗ, ಹಾವು ಕೂಡ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ. ಆದರೆ, ಸರ್ಪವನ್ನು ಹಿಡಿದು ಜನರಿಗೆ ಹಾವಿನ ಬಗ್ಗೆ ಮತ್ತು ಅದರ ವಿಷದ ಶಕ್ತಿಯ ಬಗ್ಗೆ ಆಕಾಶ್​ ಅವರು ಅರಿವು ಮೂಡಿಸಿದರು.

ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲದಂತೆ ಜನರ ಬಳಿ ಆಕಾಶ್​ ಮನವಿ ಮಾಡಿಕೊಂಡರು. ಕೊಲ್ಲುವ ಬದಲಾಗಿ ನಮಗೆ ಮಾಹಿತಿ ನೀಡಿ, ನಾವು ಬಂದು ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು. ಇದಾದ ಬಳಿಕ ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net