More

    ತನಿಖಾ ತಂಡದಿಂದ ಬಯಲಾಗುತ್ತಾ ಸತ್ಯ?

    *ಅಕ್ರಮ ಗರ್ಭಪಾತ, ಭ್ರೂಣ ಪತ್ತೆ-ಹತ್ಯೆ ಪ್ರಕರಣ
    *ಆರೋಗ್ಯ ಇಲಾಖೆ ಆಯುಕ್ತರಿಗೆ ಇಂದು ವರದಿ ಸಲ್ಲಿಕೆ ಸಾಧ್ಯತೆ?

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ಇತ್ತೀಚಿಗೆ ಬೆಳಕಿಗೆ ಬಂದ ಭ್ರೂಣ ಪತ್ತೆ-ಹತ್ಯೆ ಹಾಗೂ ಕಾನೂನು ಬಾಹಿರ ಗರ್ಭಪಾತ ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆ ವಿರುದ್ಧ ಕೇಳಿಬರುತ್ತಿರುವ ವೈಲ್ಯ ಆರೋಪದ ಬಗ್ಗೆ ವಾಸ್ತವ ತಿಳಿಯಲು ರಚನೆಯಾಗಿರುವ ತನಿಖಾ ತಂಡದ ವರದಿ ಮಂಗಳವಾರ ಸಲ್ಲಿಕೆಯಾಗುವ ಸಾಧ್ಯತೆ ಇದೆ.
    ಇಲಾಖೆಯ ಯೋಜನಾ ನಿರ್ದೇಶಕರ (ಆರ್‌ಸಿಎಚ್) ನೇತೃತ್ವದ ತಂಡದಲ್ಲಿ ವೈದ್ಯಕೀಯ ವಿಭಾಗದ ಉಪನಿರ್ದೇಶಕ ಹಾಗೂ ಕುಟುಂಬ ಕಲ್ಯಾಣ ವಿಭಾಗದ ನಿರ್ದೇಶಕರಿದ್ದು, ಈ ತಂಡ ಪ್ರಕರಣಕ್ಕೆ ಸಂಬಂಧಪಟ್ಟ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ವಾಸ್ತವಾಂಶದ ಬಗ್ಗೆ ತನಿಖೆ ನಡೆಸಿ ಸೂಕ್ತ ದಾಖಲೆಗಳೊಂದಿಗೆ ಮಾ.26ರಂದು ವರದಿ ಸಲ್ಲಿಸಬೇಕು ಎಂದು ಇಲಾಖೆ ಆಯುಕ್ತ ಡಿ.ರಂದೀಪ್ ಸೂಚಿಸಿದ್ದು, ತನಿಖಾ ತಂಡ ಕಡತಗಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದೆ.
    ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರದ ವಾಸ್ತವಾಂಶ ಬೆಳಕಿಗೆ ಬರಲಿದ್ದು, ಈ ಪ್ರಕರಣಗಳಲ್ಲಿ ಅಧಿಕಾರಿಗಳ ಪಾತ್ರವೇನು? ಜಿಲ್ಲಾ ಆರೋಗ್ಯ ಇಲಾಖೆಯ ಕರ್ತವ್ಯ ಪಾಲನೆ ಎಷ್ಟರ ಮಟ್ಟಿಗಿದೆ ಎಂಬ ಸತ್ಯಾಂಶ ಬಯಲಾಗಲಿದೆ ಎಂಬ ನಿರೀಕ್ಷೆ ಇದೆ.

    ಇಬ್ಬರು ಅಧಿಕಾರಿಗಳಿಂದ ದೂರು ಹೊಸಕೋಟೆ ಹಾಗೂ ನೆಲಮಂಗಲದಲ್ಲಿ ಭ್ರೂಣಹತ್ಯೆ ತಡೆ ಕಾಯ್ದೆ ಉಲ್ಲಂಘನೆ, ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣಹತ್ಯೆ, ಕಾನೂನು ಬಾಹಿರವಾಗಿ ಗರ್ಭಪಾತ ಪ್ರಕರಣ ಸಂಬಂಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಆರ್.ಮಂಜುನಾಥ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಆಯುಕ್ತಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರ ತನಿಖಾ ತಂಡ ರಚಿಸಿ ವರದಿ ಸಲ್ಲಿಕೆಗೆ ಗಡುವು ನೀಡಲಾಗಿದೆ.

    ಇಷ್ಟು ದಿನ ಪರಿಶೀಲನೆ ಏಕಿಲ್ಲ? ಜಿಲ್ಲೆಯಲ್ಲಿನ ಪ್ರತಿ ಖಾಸಗಿ ಆಸ್ಪತ್ರೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಬೇಕಾದ ಜಿಲ್ಲಾ ಆರೋಗ್ಯ ಇಲಾಖೆಯ ಉದಾಸೀನ ಮನೋಭಾವನೆಯೇ ಇಂಥ ಪ್ರಕರಣಗಳಿಗೆ ಸಹಕಾರ ನೀಡಿದಂತಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಹಲವು ಆಸ್ಪತ್ರೆಗಳಲ್ಲಿ ಪರವಾನಗಿ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ಇದು ಆರೋಗ್ಯ ಇಲಾಖೆ ಗಮನಕ್ಕೆ ಬರುವುದಿಲ್ಲವೇ ಅಥವಾ ಜಾಣಕುರುಡು ಪ್ರದರ್ಶಿಸುತ್ತಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಗರ್ಭಪಾತಗಳ ಬಗ್ಗೆ ಹಲವು ವರ್ಷದಿಂದ ಸಮರ್ಪಕ ದಾಖಲೆಗಳನ್ನೇ ಇಟ್ಟಿಲ್ಲ. ಆದರೂ ಆಸ್ಪತ್ರೆಗಳು ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿವೆಯೆಂದರೆ ಇಂಥ ಆಸ್ಪತ್ರೆಗಳಿಗೆ ಕೆಲವು ಅಧಿಕಾರಿಗಳೇ ಬೆಂಗವಲಾಗಿದ್ದಾರೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾಯ್ದೆಯಡಿ ಕನಿಷ್ಠ 6 ತಿಂಗಳಿಗೆ ಒಮ್ಮೆಯಾದರೂ ಆರೋಗ್ಯ ಇಲಾಖೆ ಆಸ್ಪತ್ರೆಗಳ ತಪಾಸಣೆ ನಡೆಸಬೇಕು. ಆದರೆ ಜಿಲ್ಲೆಯಲ್ಲಿನ ಅನೇಕ ಆಸ್ಪತ್ರೆಗಳ ಕಡೆ ವರ್ಷಗಟ್ಟಲೇ ಅಧಿಕಾರಿಗಳು ತಲೆಹಾಕಿಲ್ಲ ಎಂಬುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

    ಚುನಾವಣೆ ಕಾವಿನಲ್ಲಿ ಸದ್ದಿಲ್ಲ ಮಂಡ್ಯದಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದ್ದ ಭ್ರೂಣಹತ್ಯೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಗ್ರಾಮಾಂತರ ಜಿಲ್ಲೆಯ ಎರಡೂ ತಾಲೂಕುಗಳಲ್ಲಿ ಸರಣಿಯಾಗಿ ಪ್ರಕರಣ ಬೆಳಕಿಗೆ ಬಂದರೂ ಲೋಕಸಭಾ ಚುನಾವಣೆ ಗದ್ದಲದಲ್ಲಿ ಸದ್ದು ಮಾಡುತ್ತಿಲ್ಲ. ಈ ಅವಕಾಶವನ್ನೇ ಬಳಸಿಕೊಂಡು ಪ್ರಕರಣ ಹಳ್ಳಹಿಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಗುಸುಗುಸು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts