More

    ಆರೋಗ್ಯ, ಶಿಕ್ಷಣ ಸಾಮಾನ್ಯ ಜನರ ಕೈಗೆಟುಕದಂತಾಗಿದೆ

    ಮೈಸೂರು: ಮೂಲಾಧಾರವಾಗಿರುವ ಶಿಕ್ಷಣ ಮತ್ತು ಆರೋಗ್ಯ ಸೇವೆ ತಾರತಮ್ಯವಿಲ್ಲದೆ ಸಮಾನವಾಗಿ ಯಾವ ದೇಶದಲ್ಲಿ ಸಿಗುತ್ತದೆಯೋ ಆ ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾಣುತ್ತದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
    ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನದಿಂದ ಆಗ್ರಹಾರದ ಅಕ್ಕನ ಬಳಗ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೊಡಗಿನ ಗೌರು ಪೊನ್ನವ್ವ ನಂಬಿಯಪಂಡ ಸ್ಮರಣಾರ್ಥ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ ಶ್ರೇಷ್ಠ ಶಿಕ್ಷಕಿಯರಿಗಾಗಿ ಜೀವನದಿ ಕಾವೇರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ಪ್ರಸ್ತುತ ನಮ್ಮಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಬಹುಪಾಲು ಖಾಸಗಿಯವರ ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ಸಿಲುಕಿವೆ. ದುರಾದೃಷ್ಟವಶಾತ್ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಖಾಸಗಿಯವರೊಡನೆ ಪೈಪೋಟಿ ನೀಡಲಾಗದೆ ಮುಚ್ಚಿ ಹೋಗುವ ಸ್ಥಿತಿಯಲ್ಲಿವೆ. ಇದರಿಂದ ಜನಸಾಮಾನ್ಯರಿಗೆ ಶಿಕ್ಷಣ ಮತ್ತು ಆರೋಗ್ಯ ಕೈಗೆಟುಕದಂತಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
    ಜ್ಞಾನವೇ ಪ್ರತಿಯೊಬ್ಬರಿಗೂ ಬಹುದೊಡ್ಡ ಶಕ್ತಿ ಮತ್ತು ಆಸ್ತಿಯಾಗಿದ್ದು ಇಂತಹ ಜ್ಞಾನವನ್ನು ನೀಡಿ ಶಿಷ್ಯರನ್ನು ಉದ್ಧರಿಸಿ ತನ್ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿರುವ ಶಿಕ್ಷಕರಿಗೆ ಸಮ ಯಾರೂ ಇಲ್ಲ. ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇರುವಷ್ಟು ಮಹತ್ವ ಬೇರೆ ಯಾವುದೇ ಕ್ಷೇತ್ರಗಳಿಗೂ ಇಲ್ಲ ಎಂದು ಹೇಳಿದರು.
    ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಅಸಾಮಾನ್ಯ ವ್ಯಕ್ತಿಗಳ ತನಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಗುರು ಇಲ್ಲವಾದರೂ ಕೂಡ ಅವರ ಜ್ಞಾನದಾನದಿಂದ ಒಂದಲ್ಲಾ ಒಂದು ರೀತಿಯಲ್ಲಿ ಶಿಷ್ಯ ಸಮೂಹದ ಮೂಲಕ ಬದುಕಿರುತ್ತಾರೆ ಎಂದರು.
    ಎಚ್.ಡಿ. ಕೋಟೆ ತಾಲೂಕು ಆಲನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಎನ್. ಜಾನಕಿ, ಹುಣಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಪಿ. ಮಂಜುಳಾ, ಪಿರಿಯಾಪಟ್ಟಣ ತಾಲೂಕಿನ ಅರೇನ ಹಳ್ಳಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಕೆ. ಪರ್ವೀನ್ ತಾಜ್, ಮೈಸೂರು ತಾಲೂಕಿನ ಬೀರೇಗೌಡನ ಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜಿ.ರತ್ನ, ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಟಿ.ಅಕ್ಕಮ್ಮ, ಮೈಸೂರು ನಗರದ ಯಾದವಗಿರಿಯ ಭಾರತೀ ಸ್ತ್ರೀ ಸಮಾಜದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ರಾಣಿ, ತಿ.ನರಸೀಪುರ ತಾಲೂಕು ವ್ಯಾಸರಾಜಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಟಿ.ಎಸ್.ಮೈಥಿಲಿ, ಸೋಮವಾರಪೇಟೆ ತಾಲೂಕಿನ ಕಾಜೂರು ಗ್ರಾಮದ ಮುಖ್ಯ ಶಿಕ್ಷಕಿ ಎಂ.ಟಿ.ಸರಳ ಕುಮಾರಿ ಅವರಿಗೆ ಜೀವನದಿ ಕಾವೇರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪ ಕಲಾವಿದ ಎ.ಕಿರಣ್ ಸುಬ್ಬಯ್ಯ ಅವರಿಗೆ ಕಾವೇರಿ ಹೆಸರಿನಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ನೃತ್ಯ ಕಲಾವಿದೆ ಡಾ.ತುಳಸಿ ರಾಮಚಂದ್ರ, ವಿಶ್ರಾಂತ ಶಿಕ್ಷಕ ಎ.ಸಂಗಪ್ಪ, ಕಲಾವಿದೆ ಡಾ. ಜಮುನಾರಾಣಿ ಮಿರ್ಲೆ ಅವರು ಮಾತನಾಡಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ.ಮುರಳೀಧರ್, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಚಿತ್ರಕಲಾ ಶಿಕ್ಷಕ ಮನೋಹರ್, ಮುಕ್ತಕ ಕವಿ ಎಂ.ಮುತ್ತುಸ್ವಾಮಿ, ಸಮಾಜಸೇವಕಿ ಮಾಲಿನಿ ಆರ್ ಪಾಲಾಕ್ಷ , ಶಿಕ್ಷಕಿ ಅನುಪಮಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts