More

    2 ಸಾವಿರ ರೂ. ಲಂಚ ಪಡೆದಿದ್ದ ಮುಖ್ಯಶಿಕ್ಷಕನಿಗೆ ಸಿಕ್ತು 30 ಸಾವಿರ ರೂ. ದಂಡ, 5 ವರ್ಷ ಜೈಲು..!

    ಮಧ್ಯಪ್ರದೇಶ: 2000 ರೂ. ಲಂಚ ಪಡೆದ ಮುಖ್ಯ ಶಿಕ್ಷಕ ಕಳೆದುಕೊಂಡದ್ದು ಸರ್ಕಾರಿ ನೌಕರಿ, ಜೀವನದ 5 ವರ್ಷಗಳು ಮತ್ತು 30,000 ರೂ.ಗಳು! ಈ ಘಟನೆ ನಡೆದದ್ದು ಮಧ್ಯಪ್ರದೇಶದ ಛತ್ತರ್​ಪುರದಲ್ಲಿ.

    ಅತಿಥಿ ಶಿಕ್ಷಕರೊಬ್ಬರಿಂದ 2,000 ರೂಪಾಯಿ ಲಂಚ ಪಡೆದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಧ್ಯಪ್ರದೇಶದ ಛತ್ತರ್‌ಪುರದ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧಾಂಶು ಸಿನ್ಹಾ, ಶನಿವಾರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಚಂದ್ರಭಾನ್ ಸೇನ್ ಅವರನ್ನು ದೋಷಿ ಎಂದು ಘೋಷಿಸಿಚ 30,000 ರೂ. ದಂಡ ವಿಧಿಸಿದ್ದಾರೆ.

    ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಸೂರಜ್‌ಪುರಕಲನ್‌ನಲ್ಲಿರುವ ಸರ್ಕಾರಿ ಮಧ್ಯಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಚಂದ್ರಭಾನ್​ ಸೇನ್, ಕೆಲಸಕ್ಕೆ ಸೇರಲು ಅತಿಥಿ ಶಿಕ್ಷಕ ಲಕ್ಷ್ಮೀಕಾಂತ್ ಶರ್ಮಾ ಅವರಿಂದ 2,000 ರೂಪಾಯಿ ಲಂಚ ಪಡೆದಿದ್ದರು. ಈ ಬಗ್ಗೆ ಅತಿಥಿ ಶಿಕ್ಷಕ ಲಕ್ಷ್ಮೀಕಾಂತ್​ ಶರ್ಮಾ, ಜನವರಿ 6, 2015ರಂದು ಸಾಗರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಎರಡು ದಿನಗಳ ನಂತರ ಚಂದ್ರಭಾನ್​ ಸೇನ್ ಬಂಧಿಸಲ್ಪಟ್ಟರು.

    “ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಮಾಜವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಭ್ರಷ್ಟಾಚಾರ, ಪ್ರಜಾಪ್ರಭುತ್ವ ಮತ್ತು ಕಾನೂನು ಸುವ್ಯವಸ್ಥೆಯ ಅಡಿಪಾಯವನ್ನು ಅಲುಗಾಡಿಸುತ್ತಿದೆ. ಅಂತಹ ಆರೋಪಿಗಳಿಗೆ ದಯೆ ತೋರುವುದು ಕಾನೂನಿನ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಇದು ಕಠಿಣ ನಿಲುವು ತೋರಿಸುವುದು ಅಗತ್ಯವಾಗಿದೆ” ಎಂದು ನ್ಯಾಯಾಧೀಶ ಸುಧಾಂಶು ಸಿನ್ಹಾ ತಮ್ಮ ಆದೇಶದಲ್ಲಿ ಹೇಳಿದರು.

    ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಪ್ರಾಸಿಕ್ಯೂಟರ್ ಗೌತಮ್, ಶಿಕ್ಷಕರು ಸಮಾಜದ ಪ್ರಮುಖ ಭಾಗ. ಇವರೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರೆ ಅದು ಸಮಾಜಕ್ಕೆ ಹಾನಿಕಾರಕ ಎಂದು ಕಠಿಣ ಶಿಕ್ಷೆಯನ್ನು ಈಡುವಂತೆ ಕೋರಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts