More

    ಲೋಕ ಅದಾಲತ್‌ನಲ್ಲಿ ಒಂದಾದ 7 ಜೋಡಿಗಳು

    ದಾವಣಗೆರೆ : ವಿವಾಹ ವಿಚ್ಛೇದನ ಬಯಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ 7 ಜೋಡಿಗಳು ಲೋಕ ಅದಾಲತ್‌ನಲ್ಲಿ ಶನಿವಾರ ಒಂದಾದವು.
     ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಶುರಾಮ ಜಾಧವ್- ಇಂದಿರಾಬಾಯಿ, ವೀರೇಶ್-ಪೂಜಾ, ಪ್ರೀತಂ-ಚಂದನ್, ಮಂಜುನಾಥ-ಕಲ್ಪನಾ, ಸಂದೀಪ-ವಿಶಾಲ ಒಂದಾದರು.
     ವಿಚ್ಛೇದನ ಪಡೆಯಲು ನಿರ್ಧರಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಅವರೊಂದಿಗೆ ನ್ಯಾಯಾಧೀಶರು, ವಕೀಲರು ಆಪ್ತ ಸಮಾಲೋಚನೆ ನಡೆಸಿದ ನಂತರ ಅವರು ಒಂದಾಗಿ ಬಾಳಲು ನಿರ್ಧರಿಸಿದರು.
     ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ವಕೀಲರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡ ಈ ಜೋಡಿಗಳಿಗೆ ಸಿಹಿಯನ್ನು ವಿತರಣೆ ಮಾಡಿ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವಂತೆ ಹಾರೈಸಲಾಯಿತು. ತಮ್ಮನ್ನು ಮತ್ತೆ ಒಂದಾಗಿಸಿದ್ದಕ್ಕಾಗಿ ಆ ದಂಪತಿಗಳು ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು.
     ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಈ ಸಂದರ್ಭದಲ್ಲಿ ಮಾತನಾಡಿ, 2023 ರಲ್ಲಿ 4 ಅದಾಲತ್‌ಗಳನ್ನು ನಡೆಸಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಸಾರ್ವಜನಿಕರು ಲೋಕ ಅದಾಲತ್‌ನ ಮಹತ್ವ ಅರಿತು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.
     ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಕಳೆದ ವರ್ಷ 26 ಜೋಡಿಗಳು ಲೋಕ ಅದಾಲತ್‌ನಲ್ಲಿ ಒಂದಾಗಿವೆ. ಮನಸ್ತಾಪದಿಂದ ದೂರವಾಗಿದ್ದವರನ್ನು ಒಂದುಗೂಡಿಸಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಲೋಕ ಅದಾಲತ್ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ. ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಮಾಡುವುದು ಬಿಟ್ಟು ಪರಸ್ಪರ ಹೊಂದಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
     ಲೋಕ ಅದಾಲತ್‌ನಲ್ಲಿ ಒಂದಾದ ಪರಶುರಾಮ್ ಮಾತನಾಡಿ, ಸಣ್ಣ ಪುಟ್ಟ ಜಗಳು ಬಂದರೆ ಮನೆಯಲ್ಲೇ ಪರಿಹರಿಸಿಕೊಳ್ಳುವುದು ಒಳ್ಳೆಯದು. ನ್ಯಾಯಾಧೀಶರು, ವಕೀಲರು ತಂದೆ, ತಾಯಿಯಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದರು.
     ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ. ದಶರಥ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರವೀಣ ಕುಮಾರ್, ಪೋಕ್ಸೋ ನ್ಯಾಯಾಧೀಶ ಶ್ರೀಪಾದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts