ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ತಲೆಗೆ ಗಂಭೀರ ಗಾಯ; ಗುಂಪಲ್ಲಿದ್ದ ಕಿಡಿಗೇಡಿಯಿಂದ ಕಲ್ಲೆಸೆತ!

Parameshwar
Published on

ತುಮಕೂರು: ಕಾಂಗ್ರೆಸ್ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾಗ ಗುಂಪಿನಲ್ಲಿದ್ದ ಕಿಡಿಗೇಡಿಯ ಕಲ್ಲೆಸೆತದಿಂದಾಗಿ ಅವರು ಗಾಯಗೊಂಡಿದ್ದಾರೆ.

ಪರಮೇಶ್ವರ್ ಅವರು ಇಂದು ಸಂಜೆ 5.15ರ ಸುಮಾರಿಗೆ ಕೊರಟಗೆರೆ ಕ್ಷೇತ್ರದ ಭೈರನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾಗ ಗುಂಪಿನಲ್ಲಿ ಯಾರೋ ಕಲ್ಲೆಸೆದಿದ್ದು, ತಲೆಗೆ ಬಲವಾದ ಏಟು ಬಿದ್ದಿದೆ.

ತೀವ್ರ ಗಾಯಗೊಂಡ ಅವರನ್ನು ಬೆಂಬಲಿಗರು ಕೂಡಲೇ ಅಕ್ಕಿರಾಂಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಮೇಶ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಹಿಂದೆಯೂ ನಡೆದಿತ್ತು ಇಂಥದ್ದೇ ಪ್ರಕರಣ: ಈ ಹಿಂದೆ ನಾಮಪತ್ರ ಸಲ್ಲಿಸುವ ವೇಳೆ ಕೂಡ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಆಗ ಕೊರಟಗೆರೆ ತಾಲೂಕು ಕಛೇರಿ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಪೇದೆಗೆ ಕಲ್ಲು ತಗುಲಿ ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net