

ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹಿನ್ನಡೆಯ ಬಗ್ಗೆ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಈ ಪಕ್ಷಕ್ಕೆ ಈ ರೀತಿಯ ಸೋಲು ಹೊಸದೇನಲ್ಲ. ಈ ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತರ ಜೊತೆಗೆ ದೇವರ ಅನುಗ್ರಹವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮತದಾರರು ಹಾಗೂ ಜೆಡಿಎಸ್ ಮುಖಂಡರಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಕೃತಜ್ಞತೆ ಸಲ್ಲಿಸಿದರು. ಚನ್ನಪಟ್ಟಣದ ನನ್ನ ಕಾರ್ಯಕರ್ತರು ಯಾರ ಆಮಿಷಕ್ಕೂ ಒಳಗಾಗದೆ ನನ್ನ ಕೈ ಹಿಡಿದಿದ್ದಾರೆ. ಹಲವಾರು ಕಡೆ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಈ ಫಲಿತಾಂಶದಿಂದ ಹಲವರಿಗೆ ಗೊಂದಲ ಮತ್ತು ಆತಂಕ ಇದೆ. ಹಲವಾರು ಜನ ದೂರವಾಣಿ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಧೈರ್ಯವಾಗಿ ಇರಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಕಟ್ಟೋಣ ಎನ್ನುವ ಆತ್ಮ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷ ಉಳಿಸಿದ್ದು ನೀವು. ಇಲ್ಲಿ ನಾನು ನೆಪಮಾತ್ರ. ಇನ್ನು 15 ದಿನಗಳಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಲಿದ್ದೇನೆ ಎಂದು ಹೇಳಿದರು.
ಹೊಸ ಸರ್ಕಾರ ಹೇಳಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭ ಅಲ್ಲ. ಈಗ ಘೋಷಣೆ ಮಾಡಿರುವ ಯೋಜನೆಗೆ 62 ರಿಂದ 70 ಸಾವಿರ ಕೋಟಿ ರೂಪಾಯಿ ಬೇಕು. ಇದನ್ನು ಎಲ್ಲಿಂದ ತರುತ್ತಾರೆ. ಇನ್ನುಳಿದ ಅಭಿವೃದ್ಧಿಗೆ ಹಣ ಎಲ್ಲಿಂದ ತರ್ತಾರೆ ನೋಡಬೇಕು ಎಂದರು.
ಚನ್ನಪಟ್ಟಣದಲ್ಲಿ ನನ್ನ ಮೇಲೆ ವಿಶ್ವಾಸ ಇಟ್ಟು ಉಳಿಸಿಕೊಂಡಿದ್ದೀರಿ. ನಿಮ್ಮ ಶಕ್ತಿಯಿಂದ ರಾಜ್ಯದಲ್ಲಿ ಧ್ವನಿಯಾಗಿರಲು ಸಹಕಾರ ಕೊಟ್ಟಿದ್ದೀರಿ. ಚನ್ನಪಟ್ಟಣದ ಜನತೆ ಜೊತೆ ಇರುತ್ತೇನೆ. ಒಂದೊಂದು ಸಮಾಜಕ್ಕೆ ಸೇರಿದ ಮಾಜಿ, ಹಾಲಿ ಶಾಸಕರಿಗೆ ಜವಾಬ್ದಾರಿ ನೀಡಬೇಕು ಅಂದುಕೊಂಡಿದ್ದೇನೆ. ಶಾಸಕರಿಗೆ ಕಠಿಣ ಟಾಸ್ಕ್ ನೀಡುತ್ತಿದ್ದೇನೆ. ಎಲ್ಲವನ್ನೂ ನನ್ನ ಮೇಲೆ ಹಾಕಬೇಡಿ. ನೀವು ಜವಾಬ್ದಾರಿ ತೆಗದುಕೊಂಡು ಕ್ಷೇತ್ರದ ಜನರ ಸಮಸ್ಯೆ ಸ್ಪಂದಿಸುವ ಜವಬ್ದಾರಿ ಅವರಿಗೆ ನೀಡುತ್ತೇನೆ. ವಿಭಾಗೀಯವಾರು ನಾಯಕರನ್ನ ಆಯ್ಕೆ ಮಾಡಿ ಜವಾಬ್ದಾರಿ ನೀಡುತ್ತೇನೆ. ನಾನು ಅವರ ಬೆನ್ನೆಲುಬಾಗಿ ನಿಲ್ಲುತ್ತೇನೆ. ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ಭಾಗದಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.
ಈಗಿನ ಸರ್ಕಾರ ನಾಟಕವನ್ನು ನೀವು ನೋಡುತ್ತಿದ್ದೀರಿ. ಈ ಸರ್ಕಾರದಿಂದ ಒಳ್ಳೆಯ ಆಡಳಿತದ ನಿರೀಕ್ಷೇ ಇಟ್ಟುಕೊಂಡಿಲ್ಲ. ನಾನು ಸ್ವಾಭಿಮಾನ ಕಳೆದುಕೊಂಡು ಮಂತ್ರಿಗಳ ಮುಂದೆ ನಿಲ್ಲಲು ಆಗಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುವ ರೀತಿ ನಡೆದುಕೊಳ್ಳಲು ನಾನು ತಯಾರಿಲ್ಲ. ಅಭಿವೃದ್ಧಿಗೆ ಹಣ ತರುತ್ತಿದ್ದೆ, ಆದ್ರೆ ಈ ಸರ್ಕಾರದಲ್ಲಿ ಹಣ ತಂದು ಅಭಿವೃದ್ಧಿ ಮಾಡ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಲೋಕಸಭಾ ಚುನಾವಣೆ ಬಳಿಕ ಏನು ಅಭಿವೃದ್ಧಿ ಆಗುತ್ತದೋ ಕಾದು ನೋಡೋಣ ಎಂದರು.
ಮುಂದೆ ತಾ.ಪಂ, ಜಿಪಂ ಚುನಾವಣೆ ಬರುತ್ತೆ. ನನ್ನನ್ನು ಗೆಲ್ಲಿಸಿದಂತೆ ಎಲ್ಲ ಸ್ಥಾನಗಳನ್ನು ಗೆಲ್ಲಲು ಹೋರಾಡ ಮಾಡೋಣ. ನಾನು ನಿಮ್ಮ ಜೊತೆ ಇರ್ತೇನೆ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡ್ಮೂರು ತಿಂಗಳಲ್ಲಿ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಎಚ್ಡಿಕೆ ಭವಿಷ್ಯ ನುಡಿದರು.
20 ವರ್ಷ ಸೋಲಾದರೂ ಸಹ ಎಲ್ಲೂ ಸಹ ಪಕ್ಷ ಡ್ಯಾಮೇಜ್ ಆಗದಂತೆ ಉಳಿಸಿದ್ದೀರಿ. ನಾನು ಸಾಯುವುದು ರಾಮನಗರ ಜಿಲ್ಲೆಯಲ್ಲೇ. ಬಿಜೆಪಿಯ ರಾಷ್ಟ್ರೀಯ ಮಟ್ಟದ ನಾಯಕರು ಏನೇನು ಮಾಡಿದ್ದಾರೆ ಗೊತ್ತು. ಕುಮಾರಸ್ವಾಮಿ ಸೋಲಿಸಲು ಬಿಜೆಪಿಯವರ ನಡವಳಿಕೆ ಗೊತ್ತಿದೆ. ನಮ್ಮನ್ನು ಮುಗಿಸಲು ಹೋಗಿ ಈಗ ಅವರೇ ಮುಗಿದ್ದಿದ್ದಾರೆ. ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ ಎಂದು ಹೆಸರೇಳೆದೆ ಸಿ.ಪಿ. ಯೋಗೇಶ್ವರ್ಗೆ ಟಾಂಗ್ ನೀಡಿದರು.
ಮುಂದಿನ 5 ವರ್ಷ ನನಗೆ ಸವಾಲಾಗಿದೆ. ಅದನ್ನು ನಾನು ಸ್ವೀಕಾರ ಮಾಡಿದ್ದೇನೆ. ಮುಂದೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರಂತೆ ಕಾಂಗ್ರೆಸ್ನವರು ಲೂಟಿ ಮಾಡ್ತಾರೆ. ಎಲ್ಲಿ ಹಿಡಿಯಬೇಕು ನನಗೆ ಗೊತ್ತಿದೆ. ಆಗ ಹೋರಾಟ ಪ್ರಾರಂಭ ಮಾಡ್ತೇನೆ ಎಂದರು. ಇದೇ ವೇಳೆ ಸಿಎಂ ಸ್ಥಾನ ಹಾಗೂ ಡಿಕೆಶಿಗೆ ಡಿಸಿಎಂ ಸ್ಥಾನ ವಿಚಾರವಾಗಿ ಮಾತನಾಡಿ, ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಿಚಾರ. ಅವರ ಪಕ್ಷದವರು ಸೇರಿ ತೀರ್ಮಾನ ಮಾಡಿದ್ದಾರೆ. ಅದರ ಬಗ್ಗೆ ನಾನೇನೂ ಮಾತನಾಡಲ್ಲ. ಈಗ ಹೊಸ ಸರ್ಕಾರ ರಚನೆ ಆಗಬೇಕು. ಅವರ ಬಜೆಟ್, ಗ್ಯಾರಂಟಿಗಳು ಹೇಗೆಲ್ಲಾ ಅನುಷ್ಠಾನಕ್ಕೆ ತರ್ತಾರೆ ನೋಡಬೇಕೆಂದು ತಿಳಿಸಿದರು.
ಡಿಕೆಶಿ ಸಿಎಂ ಆಗಬೇಕು ಎಂತ ಒಕ್ಕಲಿಗ ಸ್ವಾಮೀಜಿ, ಸಮುದಾಯದಿಂದ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ಏನೋ ಅಭಿಮಾನದಲ್ಲಿ ಹೇಳಿರುತ್ತಾರೆ. ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕು ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಎನ್ನುವ ಮೂಲಕ ಡಿಕೆಶಿ ಪರ ಎಚ್ಡಿಕೆ ಬ್ಯಾಟ್ ಬೀಸಿದರು. ಇವತ್ತು ಜಾತಿ ಜಾತಿ ನಡುವೆ ಈ ರೀತಿ ಮಾಡಿದ್ರೆ ಸಂಘರ್ಷ ಏರ್ಪಡುತ್ತೆ. ಯಾರೇ ಮುಖ್ಯಮಂತ್ರಿ ಆದ್ರೂ ಒಂದು ಸಮಾಜದ ಸಿಎಂ ಆಗಬಾರದು. ಇಡೀ ರಾಜ್ಯದ ಆರೂವರೆ ಕೋಟಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಸಿಎಂ ಆಗಬೇಕು ಎಂದು ಸಲಹೆ ನೀಡಿದರು.
ರಾಮನಗರದಲ್ಲಿ ನಿಖಿಲ್ ಸೋಲಿನ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಮುಗಿದ ಅಧ್ಯಾಯ. ಅದರ ಬಗ್ಗೆ ಚರ್ಚೆ ಬೇಡ. ಎಂತಹ ಘಟಾನುಘಟಿ ನಾಯಕರೇ ಸೋತಿದ್ದಾರೆ. ಸೋತು ದೇಶದಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು. ವಾಜಪೇಯಿ, ಕೆಸಿಆರ್ ಇವರೆಲ್ಲ ಮೊದಲನೇ ಚುನಾವಣೆಯಲ್ಲಿ ಸೋತವರೇ. ಇವತ್ತು ಸೋತಿರಬಹುದು ಆದರೆ, ಅದೇ ಜನರು ಮುಂದಿನ ದಿನಗಳಲ್ಲಿ ಅವರನ್ನ ಬೆಳೆಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು ಎಂದರು.
ಚುನಾವಣಾ ಸೋಲಿನ ಪರಾಮರ್ಶೆ ಬಗ್ಗೆ ಮಾತನಾಡಿದ ಎಚ್ಡಿಕೆ, ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆ ನಿಲ್ತೇವೆ. ನನ್ನ ನಿರೀಕ್ಷೆ ಹುಸಿಯಾಗಿದೆ. ಮಾಧ್ಯಮಗಳ ನಿರೀಕ್ಷೆ ನಿಜವಾಗಿದೆ. ನಾನು ಕಳೆದ 6 ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೆ. ಪಂಚರತ್ನ ಯೋಜನೆಗಳು ಜನರಿಗೆ ಇಡಿಸಲಿಲ್ಲ ಅನ್ಸುತ್ತೆ. ಕಾಂಗ್ರೆಸ್ನ ಗ್ಯಾರಂಟಿಗಳ ನಂಬಿ ಮತಹಾಕಿದ್ದಾರೆ. ಪಕ್ಷದ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಏನೆಲ್ಲಾ ಆಗಿದೆ ಅನ್ನೊದರ ಬಗ್ಗೆ ಮಾಹಿತಿ ಕಲೆ ಹಾಕ್ತೇನೆ. ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ. ದೇವೇಗೌಡರು ಎರಡು ಬಾರಿ ಸೋತ ಬಳಿಕವೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿತ್ತು. ಜನ ಮುಂದಿನ ದಿನಗಳಲ್ಲಿ ಮತ್ತೆ ಜೆಡಿಎಸ್ ಬೇಕು ಅಂತ ಬಯಸ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಹೀನಾಯ ಸೋಲು ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ, ಜೆಡಿಎಸ್ ಅನ್ನು ಮುಗಿಸಬೇಕು ಎನ್ನುವ ನಡವಳಿಕೆ ಹಾಗೂ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಸೋತಿದೆ ಎಂದರು. ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ಕೊಡ್ತಾರಾ ಎಂಬ ಪ್ರಶ್ನೆಗೆ ಉತ್ತಿರಿಸಿದ ಎಚ್ಡಿಕೆ, ನೋಡೋಣ, ನಮಗಿಂತ ಅವರು ದೊಡ್ಡವರಲ್ವೆ? ಎಲ್ಲ ಲೆಕ್ಕಾಚಾರ ಮಾಡಿಯೇ ಸ್ಕೀಂ ಮಾಡಿರ್ತಾರೆ. ಮೊದಲು ಉಚಿತ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕ್ತಿದ್ದಾರೆ. ಮುಂದೆ ಏನು ಮಾಡ್ತಾರೆ ಅಂತ ನೋಡೊಣ ಎಂದರು. (ದಿಗ್ವಿಜಯ ನ್ಯೂಸ್)