More

    ಕಾಂಗ್ರೆಸ್ ದಲಿತ ಕಾಳಜಿ ಹೇಳಿಕೆಗೆ ಸೀಮಿತ; ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಮಂಜುನಾಥ ಓಲೇಕಾರ ಆರೋಪ

    ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ತಿಂಗಳಾಗಿದ್ದು, ಗಂಗಾಕಲ್ಯಾಣ ಯೋಜನೆಯಡಿ ಯಾವುದೇ ಫಲಾನುಭವಿಗೆ ಕಾಂಗ್ರೆಸ್ ಸರ್ಕಾರ ಸೌಲಭ್ಯ ಕಲ್ಪಿಸಿಲ್ಲ. ದಲಿತರಿಗೆ ಯಾವುದೇ ನಿವೇಶನ, ವಸತಿ ಭಾಗ್ಯ ನೀಡಿಲ್ಲ. ಇವರ ದಲಿತಪರ ಕಾಳಜಿ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಮಂಜುನಾಥ ಓಲೇಕಾರ ಆರೋಪಿಸಿದರು.
    ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ಸಮುದಾಯದ 11,144 ಕೋಟಿ ರೂ.ಯನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಸಚಿವ ಎಚ್.ಸಿ.ಮಹದೇವಪ್ಪ ಕೂಡ ಇದನ್ನು ವಿರೋಧಿಸಲಿಲ್ಲ. ಎಸ್‌ಟಿ (ಪರಿಶಿಷ್ಟ ಪಂಗಡ) ಸಮುದಾಯದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಳ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
    ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸರ್ಕಾರ ಭಾರತ ರತ್ನ ನೀಡಲಿಲ್ಲ. ನಂತರ ಅಟಲ್ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಅವರ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರ ಮಾಡಲು ನವದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಜಾಗ ನೀಡಲಿಲ್ಲ. ಸ್ನೇಹಿತರ ನೆರವಿನಿಂದ ಬಾಂಬೆಗೆ ತಂದು, ಸಮುದ್ರದ ದಂಡೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಇದು ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ತೋರಿದ ಗೌರವ ಎಂದು ಟೀಕಿಸಿದರು. ಬಿಜೆಪಿ ಸರ್ಕಾರ ಪಂಚತೀರ್ಥ ಕ್ಷೇತ್ರ ಯೋಜನೆ ಮೂಲಕ ಅಂಬೇಡ್ಕರ್‌ಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಜಾರಿಗೊಳಿಸಿದೆ ಎಂದರು.
    ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಕಾಂಗ್ರೆಸ್ ಸರ್ಕಾರ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡಿದೆ. 2013-18ರ ಅವಧಿಯಲ್ಲಿ ಸದಾಶಿವ ಆಯೋಗದತ್ತ ಸಿದ್ದರಾಮಯ್ಯನವರು ತಿರುಗಿ ನೋಡಲಿಲ್ಲ. ಹೋರಾಟದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಿಲ್ಲ ಎಂದು ದೂರಿದರು.
    ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಚಂದ್ರಪ್ಪ ಹರಿಜನ, ಬಸವರಾಜ ಚಳಗೇರಿ, ನಿರಂಜನ ಹೇರೂರ, ಪರಮೇಶ್ವರಪ್ಪ ಮೇಗಳಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts