More

    ಹಟ್ಟಿಗೆ ಬೇಕಿದೆ ಸಮುದಾಯ ಆರೋಗ್ಯ ಕೇಂದ್ರ

    ಹಟ್ಟಿಚಿನ್ನದಗಣಿ: ಪಟ್ಟಣ ತಾಲೂಕು ಕೇಂದ್ರವಾಗುವ ಅರ್ಹತೆ ಹೊಂದಿದೆ. ದಿನೇ ದಿನೆ ಜನಸಂಖ್ಯೆ ಏರುತ್ತಿದೆ. ಆದರೆ, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆ ಸಾಲುತ್ತಿಲ್ಲ. ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

    ಇದನ್ನೂ ಓದಿ: ಹವಾಮಾನ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗಳಿಗೆ ಎಡತಾಕುತ್ತಿರುವ ಜನರು

    ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯರು, 3 ಸ್ಟಾಫ್ ನರ್ಸ್, 1 ಫಾರ್ಮಸಿಸ್ಟ್, 3 ಎಎನ್‌ಎಂ, 2 ಗ್ರೂಪ್ ಡಿ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ. 1 ಎಂಎಲ್‌ಹೆಚ್‌ಪಿ, 1 ಕಿರಿಯ ಆರೋಗ್ಯ ಸಹಾಯಕ ಪುರುಷ ಹುದ್ದೆ ಖಾಲಿ ಇದೆ.

    ಖಾಲಿ ಇರುವ ಎರಡು ಹುದ್ದೆಗಳನ್ನು ಭರ್ತಿ ಮಾಡಿದರೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಏಕೆಂದರೆ ಇರುವ ಕೆಲ ಸಿಬ್ಬಂದಿ ಕೆಲವೆಡೆ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹುದ್ದೆಗಳು ಮಂಜೂರಾಗಿದ್ದವು. ಈಗಿನ ಜನಸಂಖ್ಯೆ ಆಧಾರದ ಮೇಲೆ ಅವಶ್ಯವಿರುವ ಹುದ್ದೆಗಳನ್ನು ಹೆಚ್ಚಿಸಿದಾಗ ಮಾತ್ರ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗಲಿದೆ.

    ಸುತ್ತಲಿನ ಹಳ್ಳಿಗಳಾದ ವಂದಲಿ ಹೊಸೂರು, ಮಲ್ಲಾಪೂರ, ಆನ್ವರಿ, ಗೆಜ್ಜಲಗಟ್ಟಾ, ರೋಡಲಬಂಡಾ, ಯಲಗಟ್ಟಾ, ಗುರುಗುಂಟಾ, ಕೋಠಾ, ಹಿರೇನಗನೂರು ಸೇರಿ ಹೋಬಳಿ ವ್ಯಾಪ್ತಿಯ 31 ಹಳ್ಳಿಗಳು, 180ಕ್ಕು ಹೆಚ್ಚು ದೊಡ್ಡಿಗಳಿಗೆ ಹಟ್ಟಿ ಪಟ್ಟಣವೇ ಶಿಕ್ಷಣ, ಆರೋಗ್ಯ, ವ್ಯಾಪಾರ ವಹಿವಾಟಿನ ಕೇಂದ್ರವಾಗಿದೆ.

    ದುರಂತವೆಂದರೆ ಇಷ್ಟು ಹಳ್ಳಿಗಳ ಮಧ್ಯ ಯಾವೊಂದು ಸಮುದಾಯ ಆರೋಗ್ಯ ಕೇಂದ್ರವಿಲ್ಲ. ಈಗಿರುವ ಆಸ್ಪತ್ರೆ, ವೈದ್ಯರು ನೆಗಡಿ ಕೆಮ್ಮಿನಂಥಹ ಸಣ್ಣ-ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗಿದ್ದಾರೆ.

    ಹಟ್ಟಿ, ಗುರುಗುಂಟಾ, ಆನ್ವರಿ, ರೋಡಲಬಂಡಾ, ಗೆಜ್ಜಲಗಟ್ಟಾ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಯಾವೊಂದು ಆಸ್ಪತ್ರೆಯಲ್ಲಿಯೂ ಸಹಿತ ಎಕ್ಸರೆ, ದಂತ ಚಿಕಿತ್ಸೆ ವೈದ್ಯರು, ನೇತ್ರ ಸೇರಿ ಯಾವುದೇ ತಜ್ಞರಿಲ್ಲ. ಇರುವ ಆಸ್ಪತ್ರೆ ಹಾಗೂ ವೈದ್ಯ-ಸಿಬ್ಬಂದಿಯಿಂದ ಹಳ್ಳಿಗರಿಗೆ ಸಮರ್ಪಕ ಸೇವೆ ಒದಗಿಸಲಾಗುತ್ತಿಲ್ಲ.

    ಹಳ್ಳಿ-ದೊಡ್ಡಿಗಳಲ್ಲಿ ವಾಸಿಸುವ ಬಹುತೇಕರು ವಿಷಜಂತುಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಹಾವು ಕಚ್ಚಿದರೆ ಹಟ್ಟಿಚಿನ್ನದಗಣಿ ಕಂಪನಿ ಆಸ್ಪತ್ರೆಯೇ ಗತಿಯಾಗಿದೆ. ಕಂಪನಿ ಆಸ್ಪತ್ರೆಯಲ್ಲಿ ಒಬ್ಬರು ಮಾತ್ರ ಅರವಳಿಕೆ ತಜ್ಞರಿದ್ದಾರೆ. ಇದರಿಂದ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ.

    ಗಣಿ ಆಸ್ಪತ್ರೆಗೆ ಕಾರ್ಮಿಕರನ್ನು ಹೊರತುಪಡಿಸಿ ಸುತ್ತಲಿನ ಹಳ್ಳಿ-ದೊಡ್ಡಿಗಳ ತಿಂಗಳಿಗೆ ಸರಾಸರಿ 35 ರಿಂದ 40 ಹಾವು ಕಚ್ಚಿದ ಪ್ರಕರಣಗಳು ದಾಖಲಾಗುತ್ತಿವೆ.

    ಹುಣಸಗಿ ತಾಲೂಕಿನ ಕಕ್ಕೇರಾ, ತಿಂಥಣಿ ಸೇರಿ ಅನ್ಯ ಜಿಲ್ಲೆ, ತಾಲೂಕಿನ ಹಾವು ಕಚ್ಚಿದ ರೋಗಿಗಳು ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಸೇವೆ ಸಿಗದ ಪರಿಣಾಮ ಖಾಸಗಿ ಆಸ್ಪತ್ರೆಗಳು, ನಕಲಿ ವೈದ್ಯರು, ಅನುಮತಿ ಪಡೆಯದೆ ಕೆಲ ನರ್ಸಿಂಗ್ ಹೋಂಗಳನ್ನು ನಡೆಸುತ್ತಿರುವ ಆರೋಪವಿದೆ.

    ಸಣ್ಣ-ಪುಟ್ಟ ರೋಗಿಗಳಿಗೆ ಚಿಕಿತ್ಸೆಗೆ ಹೋದರೆ ರಕ್ತ, ಮೂತ್ರ ಇನ್ನಿಲ್ಲದ ಪರೀಕ್ಷೆ ಮಾಡಿ ಸಾವಿರಾರು ರೂ.ವಸೂಲಿ ಮಾಡುತ್ತಿರುವ ದಂಧೆ ಯತೇಚ್ಛವಾಗಿ ನಡೆದಿದೆ. ಹಣ ವಿಲ್ಲದವರು ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ಹೋಗುತ್ತಾರೆ.

    ಲಿಂಗಸುಗೂರು ತಾಲೂಕು ಕೇಂದ್ರದಿಂದ ಕೆಲ ಹಳ್ಳಿಗಳು ಗರಿಷ್ಠ 42 ಕಿ.ಮೀ ಅಂತರದಲ್ಲಿವೆ. ಹಳ್ಳಿಯಿಂದ ಬಸ್ಸಿನ ಸೌಕರ್ಯವಿಲ್ಲದಿರುವ ರೋಗಿಗಳು ಸಾವಿರಾರು ರೂ.ಹಣ ತೆತ್ತು ಲಿಂಗಸುಗೂರಿಗೆ ತೆರಳಬೇಕಿದೆ.

    ಹಟ್ಟಿ ಪಟ್ಟಣವು ಲಿಂಗಸೂಗುರು ತಾಲೂಕಿನ ಹಳ್ಳಿಗಳಿಗೆ ಮಾತ್ರವಲ್ಲದೆ ಮಾನ್ವಿ, ಸಿರವಾರ, ದೇವದುರ್ಗ ತಾಲೂಕಿನ ಕೆಲ ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವು ವಿಶಾಲವಾದ 2 ಎಕರೆ ಜಾಗದಲ್ಲಿದೆ.

    ಇರುವ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಿ ಅರವಳಿಕೆ, ನೇತ್ರ, ದಂತ, ಹೃದಯರೋಗಿ ಸಂಬಂಧಿ ವೈದ್ಯರನ್ನು ಸೇರಿ ಪ್ರಮುಖ ತಜ್ಞರನ್ನು ನೇಮಿಸಿದರೆ ಈ ಭಾಗದ ಬಡ ಜನರಿಗೆ ಅನುಕೂಲವಾಗಲಿದೆ.

    ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಕೊರತೆ ಇದೆ. ಎಕ್ಸರೆಯಂಥ ಸೌಲಭ್ಯಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾತ್ರ ಸಿಗಲು ಸಾಧ್ಯ.
    | ಲಕ್ಷ್ಮೀಕಾಂತ, ವೈದ್ಯಾಧಿಕಾರಿ, ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts