More

    ಪಾಲಕರನ್ನು ಹೊರಗಿಟ್ಟು ಗ್ಯಾಂಗ್​ರೇಪ್​ ಸಂತ್ರಸ್ತೆಯ ಅಂತ್ಯಕ್ರಿಯೆ: ಪೊಲೀಸರು ಕೊಟ್ಟ ಸಮರ್ಥನೆ ಹೀಗಿದೆ…

    ಲಖನೌ: ಪೈಶಾಚಿಕ ಗ್ಯಾಂಗ್​ರೇಪ್​, ಕ್ರೂರ ಸಾವು, ಆತುರದ ಅಂತ್ಯಕ್ರಿಯೆ ಮತ್ತು ದುಃಖಿತ ಕುಟುಂಬ. ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಏನು ನಡೆಯಬಾರದೆಂದು ಎಲ್ಲರೂ ಅಪೇಕ್ಷಿಸಿದ್ದರೋ ಅದಕ್ಕೆ ತದ್ವಿರುದ್ಧವಾಗಿ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದೇ ಬಿಟ್ಟಿದೆ. ಗ್ಯಾಂಗ್​ರೇಪ್​ ಹಾಗೂ ಕಿರುಕುಳದಿಂದ ಮೃತಪಟ್ಟ ಯುವತಿಯ ಮೃತದೇಹವನ್ನು ಕುಟುಂಬದ ವಿರೋಧದ ನಡುವೆಯೂ ಅವರನ್ನು ದೂರವಿಟ್ಟು ಪೊಲೀಸರೇ ನಡೆಸಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ.

    ಪೊಲೀಸರ ನಡೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಕುಟುಂಬದ ಬಯಕೆಯಂತೆಯೇ ಹಾಗೂ ಅವರ ಒಪ್ಪಿಗೆ ಪಡೆದೆಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ)ವನ್ನು ರಚಿಸಲಾಗಿದೆ ಎಂದು ಜವಾಬು ನೀಡಿದ್ದಾರೆ.

    ಮನಕಲಕುವ ಘಟನೆಗೆ ಬರುವುದಾದರೆ, 20 ವರ್ಷದ ಯುವತಿಯನ್ನು ತಾಯಿಯ ಜತೆ ಮೇವು ತರಲು ಹೊಲಕ್ಕೆ ಹೋಗಿದ್ದ ವೇಳೆ ಎಳೆದೊಯ್ದು ನಾಲ್ವರು ಕಾಮುಕರು ಸೆ. 14ರಂದು ಹತ್ರಾಸ್​ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ಯುವತಿಯ ನಾಲಿಗೆ ಸೀಳಿ, ಬೆನ್ನುಮೂಳೆ ಮುರಿದು ವಿಕೃತಿ ಮೆರೆದಿದ್ದರು. ಪ್ರಕರಣ ನಡೆದ ಎರಡು ವಾರಗಳು ಬಳಿಕ ಸಂತ್ರಸ್ತ ಯುವತಿ ದೆಹಲಿ ಸಫ್ದರ್​ ಜಂಗ್​ ಆಸ್ಪತ್ರೆಯಲ್ಲಿ ಸೆ. 29ರಂದು ಕೊನೆಯುಸಿರೆಳೆದಳು. ಮಗಳನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಪೊಲೀಸರ ನಡೆಯು ಪಾಲಕರ ಗಾಯದ ಮೇಲೆ ಬರೆ ಎಳೆದಂತಾಯಿತು.

    ಇದನ್ನೂ ಓದಿ: ರಕ್ತಹೀನ ಗರ್ಭಿಣಿ ಹಸುವಿಗೆ ಮತ್ತೊಂದು ಹಸುವಿನ ರಕ್ತ ವರ್ಗಾಯಿಸಿ ಪ್ರಾಣ ಉಳಿಸಿದ ವೈದ್ಯರು!

    ಮಗಳ ಮೃತದೇಹವನ್ನು ಒಮ್ಮೆ ಮನೆಯ ಕೊಂಡೊಯ್ಯುತ್ತೇವೆ ಎಂದು ಕುಟುಂಬಸ್ಥರು ಬೇಡಿಕೊಂಡರೂ ಪೊಲೀಸರ ಮನಸ್ಸು ಕರಗಲಿಲ್ಲ. ರಾಕ್ಷಸರಂತೆ ವರ್ತಿಸಿ, ಬಲವಂತವಾಗಿ ಯುವತಿಯ ಮೃತದೇಹವನ್ನು ಆಂಬುಲೆನ್ಸ್​ನಲ್ಲಿ ಹಾಕಿಕೊಂಡು ಗ್ರಾಮಕ್ಕೆ ತೆರಳಿ, ಕುಟುಂಬವನ್ನು ದೂರವಿಟ್ಟು, ಮಾಧ್ಯಮದವರು ಬರದಂತೆ ಮಾನವ ಸರಪಳಿ ನಿರ್ಮಿಸಿ ಯುವತಿಯ ಮೃತದೇಹವನ್ನು ಬುಧವಾರ ನಸುಕಿನ ಜಾವ 2.45 ಗಂಟೆ ಸುಮಾರಿಗೆ ಸುಟ್ಟೇ ಬಿಟ್ಟರು.

    ಪೊಲೀಸರ ಈ ನಡೆ ಇದೀಗ ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿದ್ದು, ದೇಶಾದ್ಯಂತ ಆಕ್ರೋಶ ಕಿಚ್ಚು ಹೆಚ್ಚಿದೆ. ಅಲ್ಲದೆ, ಉತ್ತರ ಪ್ರದೇಶದ ಸರ್ಕಾರದ ವಿರುದ್ಧವೂ ಜನಾಕ್ರೋಶ ಕೇಳಿಬಂದಿದ್ದು, ಯುವತಿ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಆಗ್ರಹಿಸಿದ್ದಾರೆ.

    ಆದರೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಪೊಲೀಸರು ಅಂತ್ಯಕ್ರಿಯೆಯಲ್ಲಿ ಎಲ್ಲ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಮತ್ತು ಕುಟುಂಬದ ಒಪ್ಪಿಗೆ ಪಡೆದೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದಿದ್ದಾರೆ. ಯೋಗಿ ಆದಿನ್ಯಾಥ್​ ಸರ್ಕಾರ ಮೂರು ಸದಸ್ಯರುಳ್ಳ ಎಸ್​ಐಟಿ ತಂಡ ರಚನೆ ಮಾಡಿದ್ದು, ಪ್ರಧಾನಿ ಮೋದಿ ಸೂಚನೆಯಂತೆ ಕಠಿಣ ಕ್ರಮಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದೆ. ಆದರೂ, ಸರ್ಕಾರ ಮತ್ತು ಪೊಲೀಸರ ಕಾರ್ಯ ವೈಖರಿ ಕುರಿತು ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದ್ದು ಶೇಮ್​ ಆನ್​ ಯೋಗಿ ಎಂದ ಹ್ಯಾಸ್​ಟ್ಯಾಗ್​ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್​)

    ಅಮ್ಮ ನನ್ನನ್ನು ಕಾಪಾಡಿ, ಸಾಯಲು ಇಷ್ಟವಿಲ್ಲ: ಹತ್ರಾಸ್ ಗ್ಯಾಂಗ್​ರೇಪ್​​ ಕಿಚ್ಚು ಆರುವ ಮುನ್ನವೇ ಮತ್ತೊಂದು ಹೀನ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts