More

    ರಕ್ತಹೀನ ಗರ್ಭಿಣಿ ಹಸುವಿಗೆ ಮತ್ತೊಂದು ಹಸುವಿನ ರಕ್ತ ವರ್ಗಾಯಿಸಿ ಪ್ರಾಣ ಉಳಿಸಿದ ವೈದ್ಯರು!

    ರಾಜು ಪಾದರಹಳ್ಳಿ, ಬಿಡದಿ

    ರಕ್ತ ಪಿಂಜರಿ (ಬೋವಿನೆ ಬಬೇಸಿಯಸ್) ಕಾಯಿಲೆಯಿಂದ ಬಳಲುತ್ತಿದ್ದ ಏಳು ತಿಂಗಳ ಗರ್ಭಿಣಿ ಹಸುವಿಗೆ ಮತ್ತೊಂದು ಹಸುವಿನ ರಕ್ತ ನೀಡಿ ಬದುಕಿಸಿದ ಅಪರೂಪದ ಪ್ರಸಂಗ ಬಿಡದಿಯ ಹೊಸೂರಿನಲ್ಲಿ ನಡೆದಿದೆ. ಬೈರಮಂಗಲ ಹಿರಿಯ ಪಶು ವೈದ್ಯ ಡಾ.ಮಹದೇವ ಲಮಾಣಿ ಮತ್ತು ಹೆಜ್ಜಾಲ ಪಶು ವೈದ್ಯ ಡಾ.ಸಿ.ಸಚಿನ್ ಸೇರಿ ನಡೆಸಿದ ಈ ಯಶಸ್ವಿ ಚಿಕಿತ್ಸೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

    ಬಿಡದಿ ಹೋಬಳಿ ಹೊಸೂರು ಗ್ರಾಮದಲ್ಲಿ ಶಿವಲಿಂಗಯ್ಯ ಎಂಬುವರಿಗೆ ಸೇರಿದ ಗರ್ಭಿಣಿ ಹಸುವಿನಲ್ಲಿ ಕಳೆದ ನಾಲ್ಕು ದಿನಗಳಿಂದ ರಕ್ತ ಹೀನತೆ ಕಂಡು ಬಂದಿತ್ತು. ಅಲ್ಲದೇ ಹಸುವಿನ ಮೂತ್ರ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹಸು ಮಣ್ಣು ತಿನ್ನಲು ಪ್ರಯತ್ನಿಸುತ್ತ, ಕಣ್ಣು ಮತ್ತು ಮಡಿಲುಗಳು ಸಹ ಬೆಳ್ಳಗಾಗಿ ಏಳಲಾಗದ ಸ್ಥಿತಿಗೆ ತಲುಪಿತ್ತು. ಈ ಕಾಯಿಲೆಗೆ ಪಶುವೈದ್ಯ ಲೋಕದಲ್ಲಿ ತಕ್ಷಣ ಚಿಕಿತ್ಸೆ ಲಭ್ಯವಿದೆ. ಆದರೆ ಈ ಹಸುವಿನ ತಪಾಸಣೆಯೇ ವಿಳಂಬವಾಗಿದ್ದರಿಂದ ಅದರ ಜೀವ ಉಳಿಸುವುದು ಸವಾಲಾಗಿ ಪರಿಣಮಿಸಿತ್ತು. ಇದನ್ನೂ ಓದಿ: ಚಿನ್ನದ ಪದಕ ಬಾಚಿಕೊಂಡ ಸಂಭ್ರಮದಲ್ಲಿ ಗಾರೆ ಕೆಲಸಗಾರನ ಪುತ್ರಿ…

    3 ಗಂಟೆಗಳ ಚಿಕಿತ್ಸೆ: ಹಸು ಬಳಲುತ್ತಿರುವುದನ್ನು ಕಂಡ ಡಾ. ಮಹದೇವ ಲಮಾಣಿ ಮತ್ತು ಡಾ. ಸಿ. ಸಚಿನ್ ರೈತರ ಮನೆಯಲ್ಲಿ ಆರೋಗ್ಯವಾಗಿದ್ದ ಮತ್ತೊಂದು ಹಸುವಿನಿಂದ 2 ಲೀಟರ್ ರಕ್ತ ತೆಗೆದು ಕಾಯಿಲೆಯಿಂದ ಬಳಲುತ್ತಿದ್ದ ಹಸುವಿಗೆ ವರ್ಗಾವಣೆ ಮಾಡಿದರು. ಸತತ 3 ಗಂಟೆಗಳ ಚಿಕಿತ್ಸೆ ನಂತರ ಹಸು ಚೇತರಿಸಿಕೊಳ್ಳತೊಡಗಿತು.
    ಮನುಷ್ಯರಲ್ಲಿನ ರಕ್ತದ ಕೊರತೆ ನೀಗಿಸುವುದಕ್ಕಾಗಿ ರಕ್ತ ಸಂಗ್ರಹಿಸಿಡಲು ಅನೇಕ ಮಾರ್ಗಗಳಿವೆ. ಆದರೆ ಪಶುಗಳಿಗೆ ರಕ್ತ ಹೀನತೆ ಕಂಡು ಬಂದಾಗ ಇಂತಹ ಯಾವುದೇ ವ್ಯವಸ್ಥೆಯಿಲ್ಲ. ಇಂತಹ ಸಮಯದಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಹಸುವಿಗೆ ಆರೋಗ್ಯವಂತ ಹಸುವಿನ ರಕ್ತವನ್ನು ವರ್ಗಾವಣೆ ಮಾಡಿದರೆ ಹಸುವನ್ನು ಬದುಕಿಸಬಹುದು ಎಂಬ ಪ್ರಯತ್ನದಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಹೊಸೂರು ಗ್ರಾಮದ ಶಿವಲಿಂಗಯ್ಯ ಅವರ ಹಸು ರಕ್ತ ಪಿಂಜರಿ ರೋಗಕ್ಕೆ ತುತ್ತಾಗಿತ್ತು. ಚಿಕಿತ್ಸೆ ಲಭ್ಯವಿದ್ದರೂ ಹಸುವಿನ ಸ್ಥಿತಿ ಗಂಭೀರವಾಗಿತ್ತು. ಆ ಸಮಯದಲ್ಲಿ ಆರೋಗ್ಯವಂತ ಹಸುವಿನಿಂದ 2 ಲೀಟರ್ ರಕ್ತ ತೆಗೆದು ಹಸುವಿಗೆ ನೀಡಿದ್ದರಿಂದ ಪ್ರಾಣ ಉಳಿಸಲು ಸಾಧ್ಯವಾಯಿತು. ಹಸು ಆರೋಗ್ಯವಾಗಿದೆ.
    |ಡಾ. ಮಹದೇವ ಲಮಾಣಿ ಹಿರಿಯ ಪಶುವೈದ್ಯ, ಬೈರಮಂಗಲ

    ಕಳೆದ ಇಪ್ಪತ್ತು ವರ್ಷಗಳಿಂದ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದೇನೆ. ಆದರೆ ಇಂತಹ ರೋಗವನ್ನು ಎಂದೂ ಕಂಡಿರಲಿಲ್ಲ. ಹಸು ಸತ್ತು ಹೋಗುತ್ತದೆ ಎಂದುಕೊಂಡಿದ್ದ ಸಮಯದಲ್ಲಿ ಪಶು ವೈದ್ಯರು ಸವಾಲಾಗಿ ತೆಗೆದುಕೊಂಡು ಅದರ ಪ್ರಾಣ ಉಳಿಸಿದ್ದಾರೆ.
    |ಶಿವಲಿಂಗಯ್ಯ  ಹಸುವಿನ ಪಾಲಕ, ಹೊಸೂರು  

    Web Exclusive: ಪೊಲೀಸರಿಗೆ ಸಿಗುತ್ತಿಲ್ಲ ‘ಆರೋಗ್ಯ ಭಾಗ್ಯ’; ಚಿಕಿತ್ಸೆ ಸಿಗಲ್ಲವೆಂದು ಭಿತ್ತಿಪತ್ರ ಅಂಟಿಸಿದ ಆಸ್ಪತ್ರೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts