More

    ಬದಲಿ ಮಾರ್ಗ ಕಲ್ಪಿಸಿ ಕಾಮಗಾರಿ ಕೈಗೊಳ್ಳಿ

    ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ – ಸಂತಕಟ್ಟೆಗೆ ಅಂಡರ್​ಪಾಸ್​ ವೀಕ್ಷಣೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಸಂತೆಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಬದಲಿ ಮಾರ್ಗ ಕಲ್ಪಿಸಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕಾಮಗಾರಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಂತಕಟೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಪ್ರತಿದಿನವೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಲಿದ್ದು, ಸಾರ್ವಜನಿಕರು ಪ್ರತಿಭಟನೆಯನ್ನೂ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂಧಿಸಿದಂತೆ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬಳಿಕ ಸಂತೆಕಟ್ಟೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

    ಕೂಡಲೇ ತೊಂದರೆ ನಿವಾರಿಸಿ

    ಸಂತೆಕಟ್ಟೆ ಅಂಡರ್​ಪಾಸ್​ ರಸ್ತೆ ಕಾಮಗಾರಿಯಿಂದಾಗಿ ಸ್ಥಳೀಯ ಜನರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಈ ಕುರಿತು ದಿನವೂ ಸಾಕಷ್ಟು ದೂರು ಕೇಳಿಬರುತ್ತಿದ್ದು, ವಾಹನ ಅಪಘಾತದಿಂದ ಸಾವು-ನೋವು ಆಗುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಇದನ್ನೆಲ್ಲ ನಿಯಂತ್ರಣ ಮಾಡಲು ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲೇಬೇಕು ಎಂದು ಇಂಜಿನಿಯರ್​ಗಳಿಗೆ ತಾಕೀತು ಮಾಡಿದರು.

    ತಾತ್ಕಾಲಿಕ ಮೇಲ್ಸೇತುವೆ ನಿರ್ಮಿಸಿ

    ಅಂಡರ್​ಪಾಸ್​ ಕಾಮಗಾರಿಯಿಂದಾಗಿ ದೈನಂದಿನ ವ್ಯವಹಾರಗಳಿಗೆ ಹಾಗೂ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಆಗುತ್ತಿಲ್ಲ. ಕಿಲೋ ಮೀಟರ್​ಗಟ್ಟಲೆ ನಡೆದುಹೋಗಿ ಅಲ್ಲಿ ರಸ್ತೆ ದಾಟುವಂತಾಗಿದೆ. ಪಾದಚಾರಿಗಳಿಗೆ ರಸ್ತೆ ದಾಟಲು ತಾತ್ಕಾಲಿಕ ಮೇಲ್ಸೇತುವೆ ನಿರ್ಮಿಸಿ ಎಂದು ಡಿಸಿ ಸೂಚನೆ ನೀಡಿದರು.

    ಶೀಘ್ರ ಭೂ ಸ್ವಾಧೀನ ಮುಗಿಸಿ

    ಕರಾವಳಿ ಜಂಕ್ಷನ್​ನಿಂದ ಮಲ್ಪೆವರೆಗಿನ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಉಪ ವಿಭಾಗಾಧಿಕಾರಿ ಹಾಗೂ ಹೆದ್ದಾರಿ ಅಧಿಕಾರಿಗಳು ಶೀಘ್ರದಲ್ಲಿ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಿಸಬೇಕು. ಇದಲ್ಲದೆ, ಪರ್ಕಳದ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣ ತ್ವರಿತವಾಗಿ ಇತ್ಯರ್ಥಪಡಿಸಲು ನ್ಯಾಯವಾದಿಗಳೊಂದಿಗೆ ಮಾತನಾಡಿ ಎಂದು ಅಧಿಕಾರಿಗಳಿಗೆ ವಿದ್ಯಾಕುಮಾರಿ ತಿಳಿಸಿದರು.

    ಕುಂದಾಪುರ ವಿಭಾಗ ಸಹಾಯಕ ಕಮಿಷನರ್​ ರಶ್ಮಿ ಎಸ್​., ಉಡುಪಿ ತಹಸೀಲ್ದಾರ್​ ಗುರುರಾಜ್​, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್​ ಅಜ್ಮಿ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

    ಅಧಿಕಾರಿಗಳ ಮೇಲೂ ಕ್ರಿಮಿನಲ್​ ಕೇಸ್​ ದಾಖಲಿಸಿ

    ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅವರ ಕೆಲಸಗಳಿಂದ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರು ಅಥವಾ ಇಂಜಿನಿಯರ್​ಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದಲ್ಲಿ ಅವರೆಲ್ಲರ ವಿರುದ್ಧವೂ ಸಹ ಕ್ರಿಮಿನಲ್​ ಕೇಸ್​ ಹಾಕಬೇಕು ಎಂದು ಪೊಲೀಸ್​ ವರಿಷ್ಠರಿಗೆ ಡಿಸಿ ಸೂಚಿಸಿದರು. ವಾಹನ ಯಾವ ಮಾರ್ಗದಲ್ಲಿ ಚಲಿಸಬೇಕು, ಅವುಗಳ ವೇಗ ಎಷ್ಟಿರಬೇಕು, ಕಾಮಗಾರಿ ನಡೆಯುತ್ತಿರುವ ಎಚ್ಚರಿಕೆಯ ಸೂಚನಾ ಫಲಕಗಳನ್ನು ಕಾಣುವಂತೆ ದೊಡ್ಡದಾಗಿ ಅಳವಡಿಸಬೇಕು. ಮುಂದಿನ ತಿಂಗಳಿಂದ ಮುಂಗಾರು ಮಳೆ ಪ್ರಾರಂಭವಾಗುವ ಸಾಧ್ಯತೆಗಳಿದ್ದು, ಈಗಲೇ ಸಂಚಾರಕ್ಕೆ ವ್ಯತ್ಯಯವಾಗದಂತೆ ಅಗತ್ಯವಿರುವ ಕಾಮಗಾರಿ ಕೈಗೊಳ್ಳಬೇಕು. ಇಂದ್ರಾಳಿ ಯಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಬಂದಿರುವ ಕಬ್ಬಿಣದ ಗರ್ಡರ್​ಗಳನ್ನು ಜೋಡಿಸುವ ಕಾರ್ಯವನ್ನೂ ಕೂಡಲೇ ಪ್ರಾರಂಭಿಸಿ, ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಡಾ.ಕೆ. ವಿದ್ಯಾಕುಮಾರಿ ತಿಳಿಸಿದರು.

    ಕಾಮಗಾರಿ ಸ್ಥಳದಲ್ಲಿ ನಿರ್ಲಕ್ಷ್ಯದಿಂದಾಗಿ ಪ್ರಾಣ ಹಾನಿಯಾದರೆ ಇಂಜಿನಿಯರ್​ಗಳ ಮೇಲೂ ಕೇಸ್​ ದಾಖಲಿಸಲು ನಮ್ಮ ಪೊಲೀಸ್​ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪ್ರಕರಣ ದಾಖಲಿಸಲು ಪೊಲೀಸರೂ ನಿರ್ಲಕ್ಷಿಸಿದರೆ ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ.

    ಡಾ. ಕೆ.ಅರುಣಕುಮಾರ್​. ಜಿಲ್ಲಾ ಪೊಲೀಸ್​ ವರಿಷ್ಠ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts