More

    ಸಂಭ್ರಮದ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮರಥೋತ್ಸವ

    ಹರಿಹರ: ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ನಗರದಲ್ಲಿ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
    ಬೆಳಗ್ಗೆ 10.50ರ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಶಿವಮೊಗ್ಗ ವೃತ್ತದವರೆಗೆ ಭಕ್ತರು ಹರ ಹರ ಮಹದೇವ, ಗೋವಿಂದಾ, ಗೋವಿಂದಾ ಎಂದು ಸ್ಮರಣೆ ಮಾಡುತ್ತಾ ರಥವನ್ನು ಎಳೆದರು.

    ರಥೋತ್ಸವಕ್ಕೂ ಮುನ್ನ ಪುರಾಣ ಪ್ರಸಿದ್ಧ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರಥದೊಳಗೆ ಅಲಂಕರಿಸಲಾಯಿತು.

    ದೇವಸ್ಥಾನದಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳಲ್ಲಿ ಮೊದಲಿಗೆ ಪೂರ್ಣಾಹುತಿ ನಂತರ ದೇವಸ್ಥಾನದ ಸುತ್ತ ಬಲಿಹರಣ, ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ ಹೋಮ, ಹವನಾದಿಗಳನ್ನು ನಡೆಸಲಾಯಿತು.

    ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮೀಪದ ಬಿರ್ಲಾ ಕಲ್ಯಾಣ ಮಂಟಪ, ಶಿಬಾರ ವೃತ್ತ, ನಡುವಲ ಪೇಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಿಸಿಲಿನ ಧಗೆ ತಣಿಸಲು ಅಲ್ಲಲ್ಲಿ ಮಜ್ಜಿಗೆ, ಶರಬತ್ ಸಹ ವಿತರಿಸಲಾಯಿತು.

    ಶಾಸಕ ಎಸ್. ರಾಮಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಸೇರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ತಹಸೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್, ಮುಜರಾಯಿ ಇಲಾಖೆ ಸಿಬ್ಬಂದಿ ನೆರೆದಿದ್ದರು.

    ಪ್ರತಿ ವರ್ಷ ನಡೆಯುವ ರಥೋತ್ಸವಕ್ಕೆ ಬೆಂಗಳೂರು, ಹಾಸನ, ಅರಸೀಕೆರೆ, ಕಡೂರು, ಬೀರೂರು ಸೇರಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರ ಜಾತ್ರೆಗೆ ಹೋಗುವ ಮತ್ತು ಅಲ್ಲಿಂದ ಬರುವ ಭಕ್ತರು ಹರಿಹರೇಶ್ವರನ ದರ್ಶನ ಪಡೆಯುವುದು ಹಿಂದಿನಿಂದ ಬಂದ ಪ್ರತೀತಿಯಾಗಿದೆ.

    ಭಕ್ತರ ಮನೆಗಳಲ್ಲಿ ಭಾನುವಾರ ಹೋಳಿಗೆ, ಶಾವಿಗೆ, ಪಾಯಸ ಇತರೆ ಸಿಹಿ ಪದಾರ್ಥಗಳನ್ನು ಮಾಡಿ ಸವಿಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts