More

    ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ: ಹರಿಹರ ನಗರಸಭೆಯಲ್ಲಿ ಸಾರ್ವಜನಿಕರ ಒತ್ತಾಯ

    ಹರಿಹರ: ಹಿಂದು ರುದ್ರಭೂಮಿಗೆ ಜಮೀನು ಖರೀದಿಸಲು, ಉದ್ಯಾನವನ, ರಸ್ತೆ ಅಭಿವೃದ್ಧಿ, ಬೀದಿ ದೀಪಗಳ ಖರೀದಿಗೆ ಮುಂಬರುವ ಅಯವ್ಯಯದಲ್ಲಿ ಹೆಚ್ಚಿನ ಹಣ ಮೀಸಲಿಡಬೇಕೆಂದು ಸಾರ್ವಜನಿಕರು ಸಲಹೆ ನೀಡಿದರು.

    ನಗರಸಭೆಯ 2024-25ನೇ ಸಾಲಿನ ಆಯವ್ಯಯ ತಯಾರಿಸಲು ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳಿಂದ ಸಲಹೆ ಸೂಚನೆ ಪಡೆಯಲು ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

    ನಗರದಲ್ಲಿ ಈಗಿರುವ ಹಿಂದು ರುದ್ರಭೂಮಿ ಜನಸಂಖ್ಯೆಗೆ ಅನುಗುಣವಾಗಿಲ್ಲ. ಅಲ್ಲದೆ, ಮಳೆಗಾಲದಲ್ಲಿ ನದಿ ಪ್ರವಾಹಕ್ಕೆ ಜಲಾವೃತವಾಗುತ್ತದೆ. ಈ ಹಿನ್ನೆಲೆಯಲ್ಲಿ ರುದ್ರಭೂಮಿ ವಿಸ್ತರಿಸಲು ಜಮೀನು ಖರೀದಿಗೆ ಹಾಗೂ ಇತರೆ ಸಮಾಜದ ಸ್ಮಶಾನಗಳ ಅಭಿವೃದ್ಧಿಗೆ ಹಣ ಮೀಸಲಿಡಬೇಕೆಂದು ಸಲಹೆ ನೀಡಿದರು.

    ನಗರದ ಯಾವ ಉದ್ಯಾನವನವೂ ಇದುವರೆಗೂ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಬಜೆಟ್‌ನಲ್ಲಿ ನಗರದ ಪಾರ್ಕ್‌ಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದರು.

    ಪತ್ರಕರ್ತ ಶೇಖರಗೌಡ ಪಾಟೀಲ್ ಮಾತನಾಡಿ, ಬಜೆಟ್ ಪೂರ್ವಸಿದ್ಧತಾ ಸಭೆ ಕೇವಲ ದಾಖಲೆ ನಿರ್ವಹಣೆಗೆ ಸೀಮಿತವಾಗಬಾರದು, ಸಾರ್ವಜನಿಕರು, ಸಂಘ ಸಂಸ್ಥೆಗಳು ನೀಡುವ ಅಮೂಲ್ಯ ಸಲಹೆ, ಸೂಚನೆ ಪರಿಗಣಿಸಿ, ಅವುಗಳಿಗೆ ಹಣ ಮೀಸಲಿಟ್ಟು ಜಾರಿ ಮಾಡಿದಾಗ ಸಾರ್ವಜನಿಕರಿಗೆ ವಿಶ್ವಾಸ ಬರುತ್ತದೆ ಎಂದರು.

    ಸದಸ್ಯ ಆಟೋ ಹನುಮಂತಪ್ಪ ಮಾತನಾಡಿ, ಮುಂಬರುವ ಬಜೆಟ್‌ನಲ್ಲಿ ಹಿಂದುಳಿದ ವಾರ್ಡ್‌ಗಳಾದ ಹಳೇ ಹರ್ಲಾಪುರ, ಕೇಶವ ನಗರ, ಗುತ್ತೂರು, ಆಶ್ರಯ ಕಾಲೋನಿ, ಚಿಂತಾಮಣಿ ನಗರ ಮಜ್ಜಿಗೆ ಬಡಾವಣೆಯ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಡಬೇಕೆಂದರು.

    ವಕೀಲ ಮಾರುತಿ ಬೇಡರ್ ಮಾತನಾಡಿ, ಇಂದಿರಾನಗರದಲ್ಲಿ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ತೆರವುಗೊಳಿಸುವುದು ಹಾಗೂ ಸಾರ್ವಜನಿಕ ಆಸ್ಪತ್ರೆ ರಸ್ತೆ ಅಭಿವೃದ್ಧಿ, ನಗರದ ಸ್ವಚ್ಛತೆಗೆ ಹೊರಗುತ್ತಿಗೆ ಆಧಾರಿತ ಪೌರಕಾರ್ಮಿಕರ ನೇಮಕಕ್ಕೆ ಹಣ ಮೀಸಲಿಡಬೇಕೆಂದರು.

    ಮೆಕ್ಯಾನಿಕ್ ಅಲಿ ಮಾತನಾಡಿ, ಯುಜಿಡಿಎ ಡ್ರೈನೇಜ್ ನೀರು ತುಂಬಿ ರಸ್ತೆಗೆ ಹರಿಯುತ್ತಿದೆ. ಆಗಾಗ ಸಕ್ಕಿಂಗ್ ಮಿಷನ್‌ನಿಂದ ಸ್ವಚ್ಛ ಮಾಡಬೇಕು ಹಾಗೂ ಕೇಶವ ನಗರ ಟಿಪ್ಪು ನಗರಗಳಲ್ಲಿ ರಸ್ತೆಗಳು ಬೀದಿ ದೀಪಗಳ ಸಮಸ್ಯೆ ಇದ್ದು ಇದರ ನಿವಾರಣೆಗೆ ಬಜೆಟ್‌ನಲ್ಲಿ ಒತ್ತು ನೀಡಬೇಕೆಂದರು.

    ಪೌರಾಯುಕ್ತ ಬಸವರಾಜ್ ಐಗೂರ್ ಮಾತನಾಡಿ, ಹಿಂದು ರುದ್ರಭೂಮಿ ಜಮೀನು ಖರೀದಿ ಬಗ್ಗೆ ಈಗಾಗಲೇ ನಗರಸಭೆಯಿಂದ ಎಲ್ಲ ದಾಖಲೆ ಸರ್ಕಾರಕ್ಕೆ ತಲುಪಿಸಲಾಗಿದೆ. ನಗರೋತ್ಥಾನ ಯೋಜನೆಯ ಕಾಮಗಾರಿಗಳು ಈಗಾಗಲೇ ಹಲವು ವಾರ್ಡುಗಳಲ್ಲಿ ಪ್ರಗತಿಯಲ್ಲಿವೆ. ಇನ್ನೂ ಹಲವು ವಾರ್ಡ್‌ಗಳಲ್ಲಿ ಕಾಮಗಾರಿಗೆ ಚಾಲನೆ ನೀಡಬೇಕಿದೆ ಎಂದರು.

    ಸಭೆಯಲ್ಲಿ ನಗರಸಭೆ ಸದಸ್ಯರಾದ ವಿರೂಪಾಕ್ಷ, ದಾದಾ ಖಲಂದರ್, ಸದಸ್ಯೆ ಸುಮಿತ್ರಮ್ಮ, ನಾಗರತ್ನಾ, ಪತ್ರಕರ್ತ ಚಿದಾನಂದ ಕಂಚಿಕೇರಿ ಸೇರಿದಂತೆ ಸಾರ್ವಜನಿಕರು ಹಲವಾರು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts