More

    ಹರಿಹರದಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಕ್ಕೆ ಆಗ್ರಹ

    ಹರಿಹರ: ಶಾಲಾ ಅವಧಿಯಲ್ಲಿ ನಗರದೊಳಗೆ ಭಾರಿ ವಾಹನ ಸಂಚಾರ ಸ್ಥಗಿತ ಹಾಗೂ ಹರಿಹರದಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು. ನಗರ ಠಾಣೆಗೆ ಸೋಮವಾರ ಭೇಟಿ ನೀಡಿದ್ದ ಎಸ್‌ಪಿಗೆ ಮನವಿ ನೀಡಿದರು.

    ಕದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಹರಿಹರ ನಗರದಲ್ಲಿ ಹೊಸಪೇಟೆ- ಶಿವಮೊಗ್ಗ ಮತ್ತು ಬೀರೂರು- ಸಮ್ಮಸಗಿ ಎರಡು ಹೆದ್ದಾರಿಗಳು ಹಾದು ಹೋಗಿವೆ. ಈ ಎರಡೂ ರಸ್ತೆಗಳಲ್ಲಿ ನಗರದ ಬಹುತೇಕ ಶಾಲಾ, ಕಾಲೇಜುಗಳಿವೆ. ಈ ಶಾಲಾ- ಕಾಲೇಜುಗಳಿಗೆ ನಿತ್ಯ ಈ ಹೆದ್ದಾರಿಗಳ ಮೂಲಕ ಸಹಸ್ರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ ಎಂದು ತಿಳಿಸಿದರು.

    ಭಾರಿ ವಾಹನಗಳ ಅಪಘಾತದಲ್ಲಿ ಹಲವು ಅಮಾಯಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಾಣ ಬಿಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲೆಗಳ ಆರಂಭ ಹಾಗೂ ಮುಕ್ತಾಯದ ಅವಧಿಯಲ್ಲಿ ದಾವಣಗೆರೆಯ ಮಾದರಿಯಲ್ಲಿ ಹರಿಹರದಲ್ಲೂ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಬೇಕಿದೆ ಎಂದು ಆಗ್ರಹಿಸಿದರು.

    ಈ ಕುರಿತು ಸಂಘಟನೆಯಿಂದ ತಾಲೂಕು, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರೂ ಈವರೆಗೆ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಪೂರಕವಾಗಿ ಸ್ಪಂದಿಸಿರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಹರಿಹರದಲ್ಲಿ ಮೇಲೆ ತಿಳಿಸಿದಂತೆ ಎರಡು ಹೆದ್ದಾರಿಗಳು ಹಾದು ಹೋಗಿರುವುದು ಹಾಗೂ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಸಹಜವಾಗಿ ನಗರದೊಳಗೆ ಭಾರಿ ಹಾಗೂ ಲಘು ವಾಹನಗಳ ಸಂಚಾರ ದಟ್ಟಣೆ ಅತ್ಯಧಿಕವಾಗಿದೆ. ಇದರೊಂದಿಗೆ ಹರಿಹರಕ್ಕೆ ನಿತ್ಯ 1400 ಕೆಎಸ್‌ಆರ್‌ಟಿಸಿ ಬಸ್‌ಗಳು ಬಂದು ಹೋಗುತ್ತವೆ. ಈಗಿರುವ ನಗರ ಸಿವಿಲ್ ಪೊಲೀಸ್ ಠಾಣೆ ಸಿಬ್ಬಂದಿ ತಮ್ಮದೇ ಆದ ಕಾರ್ಯ ಒತ್ತಡದಲ್ಲಿರುವುದರಿಂದ ವಾಹನ ಸಂಚಾರ ನಿಯಂತ್ರಣ ಕಷ್ಟಕರವಾಗಿದೆ. ಹರಿಹರದ ಜನತೆಯ ದಶಕಗಳ ಬೇಡಿಕೆಯಾದ ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆಗೆ ತಾವು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

    ವೇದಿಕೆಯ ಎಂ.ಮಲ್ಲೇಶ್ ಗುತ್ತೂರು, ಪುಟ್ಟರಾಜು, ಕೇಶವ, ಆಸಿಫ್ ಅಲಿ ಪೈಲ್ವಾನ್, ಖಾಲಿದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts