More

    ಕಾರ್ಖಾನೆಗಳ ಆರಂಭಕ್ಕೆ ಆಗ್ರಹ

    ಹರಿಹರ: ತಾಲೂಕಿನ ಹನಗವಾಡಿ ಕೆಐಎಡಿಬಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಉದ್ದೇಶಿತ ಎಂಆರ್‌ಪಿಎಲ್ ಕಾರ್ಖಾನೆ ಹಾಗೂ ಕುರುಬರಹಳ್ಳಿ ಬಳಿ ಯೂರಿಯಾ ಉತ್ಪಾದನಾ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ನಿರುದ್ಯೋಗಿ ಯುವಕರು ಗುರುವಾರ ಪ್ರತಿಭಟನೆ ನಡೆಸಿದರು.

    ಉದ್ಯೋಗಕ್ಕಾಗಿ ಹೋರಾಟ ಪ್ರತಿಭಟನಾ ಮೆರವಣಿಗೆ ನಗರದ ನೀರಾವರಿ ಇಲಾಖೆಯಿಂದ ಪ್ರಮುಖ ರಸ್ತೆಗಳ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿ ಶಿರಸ್ತೇದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಿದರು.

    ಯುವ ಮುಖಂಡ ಶ್ರೀನಿವಾಸ್ ನಂದಿಗಾವಿ ಮಾತನಾಡಿ, ಹನಗವಾಡಿಯ ಎಂಆರ್‌ಪಿಎಲ್ ಕಾರ್ಖಾನೆ ಹಾಗೂ ಕುರುಬರಹಳ್ಳಿ ಬಳಿಯ ಯೂರಿಯಾ ಉತ್ಪಾದನಾ ಕಾರ್ಖಾನೆ ಆರಂಭಿಸುವ ಬಗ್ಗೆ ಹಲವು ವರ್ಷಗಳ ಹಿಂದೆ ಘೋಷಣೆಯಾಗಿದೆ. ಆದರೂ ಪ್ರಾರಂಭದ ಸುಳಿವಿಲ್ಲ. ನಗರದ ಕಿರ್ಲೋಸ್ಕರ್ ಕಾರ್ಖಾನೆ ಮುಚ್ಚುವಿಕೆ, ಕೋವಿಡ್-19ನಿಂದ ತಾಲೂಕಿನ ಆರ್ಥಿಕ ಶಕ್ತಿ ಕುಂದಿದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಪುನಶ್ಚೇತನ ಬೇಕಾಗಿದೆ. ಹೀಗಾಗಿ ಸರ್ಕಾರ ಘೋಷಣೆ ಮಾಡಿದಂತೆ ಎರಡೂ ಕಾರ್ಖಾನೆಗಳನ್ನು ಶೀಘ್ರವೇ ಆರಂಭಿಸಬೇಕು ಎಂದು ಆಗ್ರಹಿಸಿದರು.

    ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ವಿಳಂಬ ನೀತಿ ಅನುಸರಿಸಿದರೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಧರಣಿ ಕೂರಬೇಕಾಗುತ್ತದೆ ಎಂದರು.

    ಕರವೇ ಅಧ್ಯಕ್ಷ ನಾಗರಾಜ್ ಮೆಹರ‌್ವಾಡೆ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಕನ್ನಡ ಪರ ಸಂಘಟನೆಯ ಪ್ರವೀಣ್ ಹನಗವಾಡಿ, ಎಚ್.ಸುಧಾಕರ್, ಬಿ. ಮಂಜಪ್ಪ, ಬಿ.ಎನ್.ಮಂಜುನಾಥ್, ಜಿ.ಎಂ.ನಂದನ್, ಬಿ.ಮಂಜುನಾಥ್ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts