More

    ಹರೆಯ ಹುಷಾರು| ಓದುವ ವಯಸ್ಸಲ್ಲಿ ಪ್ರೀತಿ-ಪ್ರೇಮದ ಬಂಧನವೇಕೆ?

    ಹರೆಯ ಹುಷಾರು| ಓದುವ ವಯಸ್ಸಲ್ಲಿ ಪ್ರೀತಿ-ಪ್ರೇಮದ ಬಂಧನವೇಕೆ? ಯುಕ್ತ ವಯಸ್ಸು ಬಂದಾಗ ಹದಿಹರೆಯದವರ ಕೆಮಿಸ್ಟ್ರಿ ವಿವರಣೆಗೆ ಎಟುಕದ ವಾಸ್ತವದ ಹಾಗಿರುತ್ತದೆ. ಆಪೋಸಿಟ್ ಸೆಕ್ಸ್ ಮೇಲಿನ ಆಕರ್ಷಣೆ ಯಾವ ವಿಶ್ಲೇಷಣೆಯ ಅಗತ್ಯವೂ ಇರದೇನೇ ಉಂಟಾಗುತ್ತದೆ. ನಿಮ್ಮ ಮಕ್ಕಳು ಸಣ್ಣ ವಯಸ್ಸಿನಲ್ಲೇ ರೋಮಾನ್ಸ್ ಮಾಡುತ್ತಿದ್ದಾರೆಂದು ತಿಳಿದಾಗ ಅವರಿಗೆ ‘ಪ್ರೇಮ ಒಂದು ಕಲೆ’ ಪುಸ್ತಕವನ್ನು ಕೊಡಿರಿ. ಅದರಲ್ಲಿ ಮೊದಲನೆ ಅಧ್ಯಾಯ ಹೀಗೆ ಪ್ರಾರಂಭವಾಗುತ್ತದೆ.

    ಒಬ್ಬ ತಾಯಿ ತನ್ನ ಹದಿಮೂರನೇ ವಯಸ್ಸಿನ ಮಗಳಿಗೆ ‘ನಿಮ್ಮಪ್ಪಂದೂ, ನನ್ನದೂ ಪ್ರೇಮವಿವಾಹ ಕಣಮ್ಮಾ. ಕಾಲೇಜ್​ನಲ್ಲಿದ್ದಾಗಲೇ ನಿಮ್ಮಪ್ಪ ಧೈರ್ಯವಾಗಿ ಬಂದು ನಮ್ಮ ತಂದೆಯನ್ನು ಕೇಳಿದರು. ದೊಡ್ಡ ಗಲಾಟೆಯಾಯ್ತು. ನಾಲ್ಕು ವರ್ಷ ತಡೆದು ನಿಮ್ಮ ತಂದೆಗೆ ಜಾಬ್ ಸಿಕ್ಕ ಮೇಲೆ ನಾವು ಮದುವೆ ಆದೆವು. ನೀನು ನನ್ನ ಬಸಿರಿನಲ್ಲಿದ್ದಾಗ ನಿಮ್ಮ ತಾತ ರಾಜಿಗೆ ಬಂದರು’ ಎಂದು ಹೇಳಿದಳು. ಎಂಟನೆಯ ತರಗತಿಯಲ್ಲಿ ಓದುತ್ತಿರುವ ಮಗಳು ಆಗ ‘ಅಮ್ಮಾ ನೀನೇ ನನಗೆ ಸ್ಪೂರ್ತಿ. ನಾನು ಕೂಡ ನಮ್ಮ ಕ್ಲಾಸ್​ವೆುೕಟ್​ನ ಲವ್ ಮಾಡ್ತಿದೇನೆ. ನಾವು ಕೂಡ ಇನ್ನು ಹತ್ತು ವರ್ಷ ತಡೆದು ಮದುವೆ ಆಗುತ್ತೇವೆ’ ಎಂದಳು.

    ಸಣ್ಣ ವಯಸ್ಸಿನಲ್ಲೇ ಪ್ರೀತಿಸುವುದರಿಂದ ಆಗುವ ಅನರ್ಥಗಳ ಬಗ್ಗೆ ಈ ರೀತಿಯಲ್ಲಿ ಒಂದಿಡೀ ಅಧ್ಯಾಯವೇ ಇದೆ. ಊಹಿಸದ ರೀತಿಯಲ್ಲಿ ಮಕ್ಕಳು ರೋಮಾನ್ಸ್​ನಲ್ಲಿ ಬಿದ್ದರೆ ಬದುಕು ಹೇಗಿರುತ್ತದೆ ಎಂದು ‘ಲೇಡಿಸ್ ಹಾಸ್ಟೆಲ್’ ಎಂಬ ಇನ್ನೊಂದು ಪುಸ್ತಕದಲ್ಲಿ ಬರೆದಿದ್ದೇನೆ. ತಂದೆ ಎದುರೇ ಮಗಳು ಹಾಸ್ಟೆಲ್ ಆವರಣದಲ್ಲಿ ಬಾಯ್ಫ್ರೆಂಡ್ ಜೊತೆ ರೋಮಾನ್ಸ್ ಮಾಡುತ್ತಾಳೆ. ಅದನ್ನು ಕಂಡ ತಂದೆಗೆ ಹೇಗಾಗಿರಬಹುದು? ಅದೇ ರೀತಿ ‘ನಾಚಿಕೆಯಾಗುತ್ತಿದೆ’ ಎಂಬ ನನ್ನ ಇನ್ನೊಂದು ಪುಸ್ತಕದಲ್ಲಿ ಸಣ್ಣ ಮಕ್ಕಳನ್ನು ದೊಡ್ಡವರು ಹೇಗೆ ಟ್ರಾಪ್ ಮಾಡುತ್ತಾರೆ ಎಂದು ವಿವರವಾಗಿ ಬರೆದಿದ್ದೇನೆ. ಒಂದು ವಿಷಯವನ್ನು ನೆನಪಿಡಿ. ಭವಿಷ್ಯದ ಬಗ್ಗೆ ಚಿಂತೆ ಮಾಡದ ಮಕ್ಕಳು ಕತ್ತಲಿನಲ್ಲಿರುವಾಗ ಯಾವುದೇ ಸಣ್ಣ ಕಿರಣವನ್ನು ಕಂಡರೂ ಅತ್ತ ಸಾಗುತ್ತಾರೆ. ಕೆಲ ಬಾರಿ ಅದು ಉನ್ನತ ಶಿಖರಗಳಿಗೆ ಕೊಂಡೊಯ್ಯಬಹುದು, ಆದರೆ ಬಹಳಷ್ಟು ಸಲ ಪಾತಾಳಕ್ಕೆ ತಳ್ಳುತ್ತದೆ.

    ಇದನ್ನೂ ಓದಿ: ಈ ಗ್ರಾಮದಲ್ಲಿ ಆನ್​ಲೈನ್ ಕ್ಲಾಸ್​ ಫೇಲಾಯಿತು- ಶಾಲೆಯೇ ಮೊಬೈಲ್ ಆಯಿತು ನೋಡಿ!

    ಬದುಕಿನಲ್ಲಿ ಸೌಖ್ಯ ಬೇಕೆಂದರೆ ದುಡ್ಡು ಬೇಕು. ಸರ್ಕಾರಿ ನೌಕರಿ ಮಾಡಬೇಕೆಂದರೂ, ವ್ಯಾಪಾರ ಪ್ರಾರಂಭಿಸಬೇಕೆಂದರೂ ಬುದ್ಧಿ ಇರಬೇಕು. ವಿದ್ಯೆಯಿಂದ ಬುದ್ಧಿ ಬರುತ್ತದೆ. ಓದುವ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಬಗ್ಗೆ ಯೋಚಿಸಲಾರಂಭಿಸಿದರೆ, ಬದುಕು ಹಳಿ ತಪು್ಪತ್ತದೆ. ಇರಲಿ. ಆ ವಯಸ್ಸಿನಲ್ಲಿ ಆಪೋಸಿಟ್ ಸೆಕ್ಸ್ ಬಗ್ಗೆ ಆಕರ್ಷಣೆ ಬೆಳೆಯಲಿಲ್ಲ ಎಂದರೆ ಹುಟ್ಟಿನಿಂದಲೇ ಏನೋ ದೋಷವಿದೆ ಎಂದರ್ಥ. ಆದರೆ ಮಿತಿ ಮೀರಿದರೆ ಮಾತ್ರ ಅಪಾಯ. ಅಂತಹ ಪರಿಸ್ಥಿತಿ ಬಾರದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕೆಲವು ಮಾರ್ಗಗಳಿವೆ. ನೀವು ಕೋಣೆಯೊಳಗೆ ಹೋದ ತಕ್ಷಣ ಮಗ ಫೋನ್ ಸಂಭಾಷಣೆಯನ್ನು ನಿಲ್ಲಿಸಿದರೆ, ಆಗ ತೀರಾ ಸಿ.ಐ.ಡಿಯ ಹಾಗೆ ಮಾಡದೆ ಅವನ ಸ್ನೇಹಿತರ ಮೂಲಕ ವಿಷಯ ತಿಳಿದುಕೊಳ್ಳಬೇಕು. ಅವನ ಸ್ನೇಹಿತರ ಪೇರೆಂಟ್ಸ್ ಪರಿಚಯ ಮಾಡಿಕೊಳ್ಳುವುದು, ಅಗಾಗ ಮೇಲ್ ಚೆಕ್ ಮಾಡುವುದು, ಒಂದು ದಿನ ಅವರ ಮೊಬೈಲ್ ಫೋನ್ ನಿಮ್ಮಲ್ಲೇ ಇಟ್ಟುಕೊಂಡು ಚೆಕ್ ಮಾಡುವುದು ಇವೆಲ್ಲ ಉಪಯುಕ್ತವೇ.

    ಯಾವುದಾದರೂ ಟೂರ್ ಹೋಗುವ ಸಂದರ್ಭದಲ್ಲಿ(ತೊಂದರೆಯಾಗದ ಪಕ್ಷದಲ್ಲಿ) ಮಕ್ಕಳ ಟೀನೇಜ್ ಸ್ನೇಹಿತರಲ್ಲಿ ಒಂದಿಬ್ಬರನ್ನು ಜೊತೆಯಲ್ಲಿ ಕರೆದೊಯ್ಯಬೇಕು. ಆಗ ಅವರ ನಡವಳಿಕೆ/ಟಾಪಿಕ್ಸ್/ಸ್ನೇಹದ ಗಾಢತೆ ಇವೆಲ್ಲ ನಿಮಗೆ ಅರಿವಾಗುತ್ತವೆ. ಅವರ ಪ್ರಪಂಚ ಹೇಗಿರುತ್ತದೆಂದು ನಿಮಗರ್ಥವಾಗುತ್ತದೆ.

    ಯುದ್ಧಕ್ಕೆ ಹೊರಟ ವೀರನಿಗೆ ಅವನ ಪತ್ನಿ ತನ್ನ ಕುಂಕುಮಭಾಗ್ಯ ಉಳಿಸಿಕೊಳ್ಳುವುದಕ್ಕೆ ಆರತಿ ಎತ್ತಿ, ತಿಲಕವಿಟ್ಟು ಕಳಿಸುತ್ತಾಳೆ. ತೀರಾ ಭಾವುಕಳಾದರೆ ರಕ್ತ ತಿಲಕವಿಟ್ಟು ಕಳಿಸಬಹುದು. ನಗುತ್ತ ಹೂವಿನ ಬಾಣ, ಬಿಲ್ಲುಗಳನ್ನು ಗಂಡನಿಗೆ ಕೊಡುವುದು ರತಿದೇವಿ ಮಾತ್ರವೇ. ಅದೂ ಕಬ್ಬಿನ ಬಿಲ್ಲು. ಹೆಂಡತಿ ಇತ್ತ ಹೂಗಳು ಹುಡುಗಿಯರ ಜಡೆಗಳಲ್ಲಿ, ಬಾಣಗಳು ಹುಡುಗರ ಹೃದಯಗಳಲ್ಲಿ ಚುಚ್ಚುವಂತೆ ಹೊಡೆಯುತ್ತಾನೆ ರತಿಯ ಪತಿ ಮನ್ಮಥ. ಪುರಾಣ ಕಾಲದಲ್ಲಿ ದೇವ-ದೇವತೆಗಳಿಗೆ, ನವಯುವಕ-ಯುವತಿಯರಿಗೆ ಈತ ಬಾಣವೆಸೆಯುತ್ತಿದ್ದ.

    ಇದನ್ನೂ ಓದಿ: ಸ್ಮಾರಕ ರಕ್ಷಣೆಗೆ ವಾಟರ್ ಪ್ರೂಫ್​ ತಂತ್ರಜ್ಞಾನದ ಮೊರೆ!

    ಆ ಮನ್ಮಥನ ಮತ್ತೊಂದು ಹೆಸರೇ ಇಂಟರ್ನೆಟ್. ಹದಿಹರೆಯ ಬಂದಾಗ ಮಕ್ಕಳಲ್ಲಿ ರೊಮ್ಯಾಂಟಿಕ್ ಭಾವನೆಗಳು ಹುಟ್ಟುವುದು ಸಹಜವೇ. ಆದರೆ ಇಂಟರ್ನೆಟ್ ಹರಡಿಕೊಂಡ ಮೇಲೆ ಮಕ್ಕಳಲ್ಲಿ ಆ ಭಾವನೆಗಳು ಬಹಳ ಸಣ್ಣ ವಯಸ್ಸಿನಲ್ಲೇ ಬರುತ್ತಿವೆ. ಆ ನಿಟ್ಟಿನಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಅವರ ನಡವಳಿಕೆ ಇತರ ಮಕ್ಕಳಿಗೆ ಅಥವಾ ಕುಟುಂಬ ಸದಸ್ಯರಿಗೆ ಮುಜುಗರ ಮಾಡುತ್ತಿದೆ ಎನಿಸಿದಾಗ ‘ನೀಟ್​ನೆಸ್ ಲೋಪವಾಗಿದೆ’ ಎನಿಸಿದಾಗ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ. ‘ಯಾವಾಗ ಪ್ರತಿಕ್ರಿಯೆ ನೀಡಬೇಕು?’ ‘ಯಾವಾಗ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ’ ಎಂಬ ವಿಷಯದಲ್ಲಿ ನಿಮಗೆ ಸ್ಪಷ್ಟವಾದ ತಿಳಿವಳಿಕೆ ಇರಬೇಕು. ಅವರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದು ಬೈಯುವುದು, ಲೆಕ್ಚರ್ ಕೊಡುವುದು ಇದೆಲ್ಲ ಇಂತಹ ಪರಿಸ್ಥಿತಿಯಲ್ಲಿ ಮಾಡಬೇಡಿ. ಮಕ್ಕಳಲ್ಲಿ ಈ ರೀತಿಯ ಲೈಂಗಿಕ ಇಚ್ಛೆ ತೀರಾ ಹೆಚ್ಚಾಗಿದೆ ಅನಿಸಿದಾಗ, ವಿಪರೀತದ ಲಕ್ಷಣಗಳು ಕಂಡಾಗ ಸೈಕಾಲಜಿಸ್ಟರನ್ನು ಸಂರ್ಪಸಿರಿ.

    ಹದಿಹರೆಯದವರ ಜೊತೆ ಕೆಲ ಬಾರಿ ಬಹಳ ಮುಜುಗರದ ವಾದವನ್ನು ಎದುರಿಸಬೇಕಾಗುತ್ತದೆ. ಅವರು ಹೇಳಿದ್ದು ಸರಿಯೆಂದು ಅನಿಸಿದರೂ, ಎಲ್ಲಿಯೋ ಯಾವುದೋ ಅಪಶ್ರುತಿ ಇರುತ್ತದೆ. ನಮ್ಮ ಜೀವನಕ್ರಮಕ್ಕೂ, ಬದಲಾಗುತ್ತಿರುವ ಯುವಜನಾಂಗದ ಯೋಚನಾ ಕ್ರಮಕ್ಕೂ ಇರುವ ವ್ಯತ್ಯಾಸ ಅದು. ಈ ಕೆಳಗಿನ ಘಟನೆ ನಮ್ಮ ಮುಂದೆಯೇ ನಡೆಯಿತು.

    ಒಬ್ಬ ತಂದೆ ಪಿಯುಸಿ ಎರಡನೇ ವರ್ಷದ ಮಗಳನ್ನು ಕರೆತಂದ. ‘ಸ್ನೇಹಿತರನ್ನು ಮನೆಗೆ ಕರೆತರುತ್ತೇನೆ, ಎಂದು ಹಟ ಮಾಡ್ತಾಳೆ ಸಾರ್’, ಎಂದನು ತಂದೆ. ಅದರಲ್ಲಿ ತಪ್ಪೇನೂ ಇಲ್ಲವಾದರೂ ಇಬ್ಬರು ಹುಡುಗರು, ಮತ್ತೆ ಮೂವರು ಹುಡುಗಿಯರು ಬರುತ್ತಾರೆಂದೂ, ತನ್ನ ರೂಂನಲ್ಲಿ ಡ್ರಿಂಕ್ ಮಾಡುತ್ತಾರೆಂದೂ, ಅಮ್ಮನಿಗೆ ಚಿಕನ್ ಬೇಯಿಸಲು ಕೇಳುತ್ತಾಳೆಂದೂ ದೂರಿತ್ತನು ಆ ತಂದೆ. ಇಂತಹ ಸಮಸ್ಯೆ ನಮ್ಮ ಬಳಿಗೆ ಹಿಂದೆಂದೂ ಬಂದಿರಲಿಲ್ಲ. ಆ ಹುಡುಗಿಯ ವಾದವೇ ಮತ್ತೊಂದು ರೀತಿಯಾಗಿತ್ತು. ‘ನನ್ನ ಸ್ನೇಹಿತರನ್ನು ಸೀಕ್ರೆಟ್ಟಾಗಿ ಯಾವುದೋ ಹೋಟೆಲ್​ಗೆ ಕರೆದೊಯ್ದಿದ್ದರೆ ವಿಷಯ ಯಾರಿಗೂ ತಿಳಿಯುತ್ತಿರಲಿಲ್ಲ. ಆ ಹುಡುಗರು ನನಗೆ ಒಳ್ಳೆಯ ಸ್ನೇಹಿತರು ಮಾತ್ರ. ಎಲ್ಲಿಯೋ ಹೊರಗೆ ತಿಂದು ಕುಡಿಯುವ ಬದಲು, ಮನೆಯಲ್ಲೆ ಪಾರ್ಟಿ ಏರ್ಪಾಟು ಮಾಡುತ್ತಿದ್ದೇನೆ. ಮೇಲಾಗಿ ನಾನು ಕುಡಿಯುವುದಿಲ್ಲ. ಇಷ್ಟು ಪ್ರಾಮಾಣಿಕವಾಗಿ ಈ ವಿಷಯ ಹೇಳ್ತಿದ್ದರೂ ನನ್ನಪ್ಪ ಏಕೆ ಒಪ್ಪಿಕೊಳ್ಳುತ್ತಿಲ್ಲವೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಆ ಹುಡುಗಿ ಹೇಳಿದಳು. ಸಮಾಜ ಬದಲಾದ ಹಾಗೆ ಪಾಲಕರಿಗೆ ಎಂತಹ ಹೊಸ ಸಮಸ್ಯೆಗಳು ಬರುತ್ತಿವೆ ಎನ್ನುವುದಕ್ಕೆ ಇದೊಂದು ಉದಾಹರಣೆ.

    ಇದನ್ನೂ ಓದಿ: ಸ್ಮಾರ್ಟ್​ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…

    ಮಕ್ಕಳಿಗೆ ಅವರ ಸ್ನೇಹಿತರೆಂದರೆ ಬಹಳ ಇಷ್ಟ. ಅವರ ಬಗ್ಗೆ ಹರ್ಟ್ ಆಗುವಂತೆ ಏನೂ ಹೇಳಬೇಡಿ, ‘ನಿನ್ನ ಫ್ರೆಂಡ್ ಟಿಂಟೂ ತಲೆ ಮೇಲೆ ರೂಪಾಯಿ ಇಟ್ಟರೂ ನಯಾ ಪೈಸೆಗೆ ಮಾರಾಟ ಆಗೋದಿಲ್ಲ, ಅಂತಹವನ ಜೊತೆ ನಿನಗೆ ಸ್ನೇಹ ಎಂತಹುದೋ’ ಎಂದು ನೀವು ಹೇಳಿದರೆ ಕೂಡಲೇ ಮಗ ಅವನಿಗೆ ಸಪೋರ್ಟ್ ಮಾಡುತ್ತಾನೆ. ಯುದ್ಧದಲ್ಲಿ ಸೀಳಿ ಚೆಂಡಾಡಿದ ಹಾಗೆ ನಿಮ್ಮನ್ನು ಮಾತಿನಲ್ಲೇ ಎದುರಿಸುತ್ತಾನೆ. ನಿಮಗೊಂದು ವಿಷಯ ಗೊತ್ತಾ? ಹೊರಗಿನವರು ನಿಮ್ಮನ್ನು ಟೀಕಿಸಿದರೂ ಅವನು ಅದೇ ರೀತಿ ನಿಮಗೆ ಸಪೋರ್ಟ್ ಮಾಡುತ್ತಾನೆ. ಸ್ನೇಹಿತರ ಪ್ರಸ್ತಾಪ ಬಂದಿರುವುದರಿಂದ ಇನ್ನೊಂದು ಮಾತು. ನಿಮ್ಮ ಮಕ್ಕಳ ಸ್ನೇಹಿತರು ನಿಮಗೆ ಇಷ್ಟವಾಗದಿದ್ದರೆ ಆ ವಿಷಯವನ್ನು ನಯವಾಗಿ ಹೇಳಿರಿ. ಇಲ್ಲದಿದ್ದರೆ ಮಕ್ಕಳನ್ನು ಬೇರೆ ಸ್ನೇಹಿತರ ವಲಯದೊಳಗೆ ಸೇರಿಸಲು ಪ್ರಯತ್ನಿಸಿರಿ.

    ಮಕ್ಕಳು ದೊಡ್ಡವರಿಗೆ ದೂರವಾಗಿ ಸ್ನೇಹಿತರಿಗೆ ಹತ್ತಿರವಾಗುವುದಕ್ಕೆ ಕಾರಣ- ಸ್ನೇಹಿತರು ಇಷ್ಟವಾದರೆ ಕೇಳುತ್ತಾರೆ, ಇಷ್ಟವಾಗದಿದ್ದರೆ ವಾಗ್ವಾದ ಮಾಡುತ್ತಾರೆ! ತಂದೆ-ತಾಯಿ ಕೇಳುವುದಿಲ್ಲ, ಇಷ್ಟವಾಗದಿದ್ದರೆ ಅಧಿಕಾರ ಚಲಾಯಿಸಿ ಮಕ್ಕಳ ವಿಚಾರಕ್ಕೆ ತಡೆ ಹಾಕುತ್ತಾರೆ. ಮಕ್ಕಳೊಂದಿಗಿನ ಸಂಬಂಧ ಅಲ್ಲಿಂದ ಹಳಸಲಾರಂಭಿಸುತ್ತದೆ. ವಯಸ್ಸು ಬೆಳೆದಂತೆಲ್ಲ ವ್ಯಕ್ತಿತ್ವ ಬದಲಾಗುತ್ತದೆ. ತನ್ನ ಅಭಿಪ್ರಾಯಗಳನ್ನೇ ಬಲವಾಗಿ ನಂಬುತ್ತ, ತನ್ನ ಸಿದ್ಧಾಂತಗಳನ್ನು ಬಿಡದೇ ಇರುವುದನ್ನು ‘ಇಂಡಿವಿಜುಯಾಲಿಟಿ’ ಎನ್ನುತ್ತಾರೆ. ಇಂಡಿವಿಜುಯಾಲಿಟಿ ಬೆಳೆದಂತೆ ವಿಚಾರಗಳಲ್ಲಿ ಆಗುವ ಬದಲಾವಣೆಯೇ ಸ್ನೇಹಿತರು/ಪ್ರೇಮಿಗಳು/ದಂಪತಿ ಬೇರೆಯಾಗುವುದಕ್ಕೆ ಕಾರಣ. ಈ ಮನೋಭಾವವು ಕೆಲ ಬಾರಿ ಪಾಸಿಟಿವ್ ಫಲಿತಾಂಶವನ್ನೂ, ಕೆಲ ಬಾರಿ ನೆಗೆಟಿವ್ ಫಲಿತಾಂಶವನ್ನೂ ಕೊಡುತ್ತದೆ.

    ಇದನ್ನೂ ಓದಿ: ಜಿರಾಫೆ ಅಂದ್ರೇನೇ ಎತ್ತರ- ಅದ್ರಲ್ಲೂ ಗಿನ್ನೆಸ್ ದಾಖಲೆ ಅಂದ್ರೆ ಇನ್ನೆಷ್ಟು ಎತ್ತರ ಇರಬಹುದು ಅದು…!

    ವಯಸ್ಸು ಬೆಳೆದಾಗ ಹದಿಹರೆಯ ಮಕ್ಕಳು ತಂದೆ-ತಾಯಿ ಬಗ್ಗೆ ಪ್ರೀತಿ ತೋರಿಸುವುದು ಮುಜುಗರದ ವಿಷಯ, ಜೊತೆಗೆ ‘ಅವರಿಗೆ ವಯಸ್ಸಾಯ್ತು’ ಎಂದು ತಿಳಿಯುತ್ತಾರೆ. ಸ್ಕೂಲ್​ನಿಂದ ಮನೆಗೆ ಬಂದ ಕೂಡಲೇ ಪುಸ್ತಕಗಳನ್ನು ಎಸೆದು, ತಾಯಿ ಪಕ್ಕ ಕುಳಿತು ಸ್ಕೂಲ್ ವಿಷಯಗಳನ್ನೆಲ್ಲ ಕೂಲಂಕಷವಾಗಿ ಹೇಳುತ್ತಿದ್ದ ಹುಡುಗ, ಕಾಲೇಜ್ ಸೇರಿದ ಮೇಲೆ ಏನೂ ಹೇಳುವುದಿಲ್ಲ. ಅದು ತನ್ನ ವಯಸ್ಸಿಗೆ ತಕ್ಕ ಕೆಲಸವಲ್ಲ ಎಂದು ತಿಳಿಯುತ್ತಾನೆ. ಈ ಸಂದಿಗ್ಧಗಳಿಗೆ ಪರಿಹಾರವೇನು?, ಪಾಲಕರ ಜವಾಬ್ದಾರಿ ಏನು? ಈ ಬಗ್ಗೆ ಮುಂದಿನ ಅಂಕಣದಲ್ಲಿ ಚರ್ಚಿಸೋಣ.

    (ಲೇಖಕರು ಖ್ಯಾತ ಕಾದಂಬರಿಕಾರರು, ವ್ಯಕ್ತಿತ್ವ ವಿಕಸನ ತರಬೇತುದಾರರು)

    ‘ನಂಗೆ ಕಾಲಲ್ಲೆಲ್ಲ ಏನೋ ಒಂಥರಾ ಫೀಲಿಂಗ್​…’ ಎಂದು ಹೇಳ್ತಾ ಇರೋ ಮಹಿಳೆಯ ಕೇಸ್ ಈಗ ವೈದ್ಯಲೋಕದ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts