More

    ಹರೆಯ ಹುಷಾರು: ಮಕ್ಕಳಿಗೆ ಪ್ರೀತಿ ಮೂಲಕ ಭರವಸೆ ತುಂಬಿ…

    ಹರೆಯ ಹುಷಾರು: ಮಕ್ಕಳಿಗೆ ಪ್ರೀತಿ ಮೂಲಕ ಭರವಸೆ ತುಂಬಿ...ಹುಡುಗಿ ತನ್ನ ರೂಂನಲ್ಲಿ ಓದುತ್ತಿರುವಾಗ, ಅಪ್ಪ ಹಾಲಿನ ಗ್ಲಾಸ್ ತಂದಿಟ್ಟು ‘ಚೆನ್ನಾಗಿ ಓದುತ್ತಾ ಇದ್ದೀಯಮ್ಮಾ?’ ಎಂದು ಕೇಳಿದರೆ ಆ ಹುಡುಗಿ ಬಹಳ ಟಚಿಂಗ್ ಆಗಿ ಫೀಲ್ ಆಗುತ್ತಾಳೆ. ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಒಂದು ಸಣ್ಣ ಸ್ಪರ್ಶ ಸಾಕು. ಹದಿ ವಯಸ್ಸಿನಲ್ಲಿರುವವರಿಗೆ ‘ಸ್ಪರ್ಶ’ವು ಭದ್ರತಾ ಭಾವನೆ ಕೊಡುತ್ತದೆ.

    ಒಬ್ಬ ಹುಡುಗ ಬೆಳಗಿನ ಜಾವ ಎದ್ದು ಓದಬೇಕೆಂದು ಅಂದುಕೊಳ್ಳುತ್ತಾನೆ. ಎರಡು ದಿನ ಓದಿ ಬಿಟ್ಟುಬಿಡುತ್ತಾನೆ. ಮತ್ತೆ ಪ್ರಯತ್ನಿಸುತ್ತಾನೆ. ಕೊನೆಗೆ ಅದು ತನ್ನಿಂದ ಸಾಧ್ಯವಿಲ್ಲ ಎಂದು ನಿರ್ಧರಿಸುತ್ತಾನೆ. ಅದು ನೆಗೆಟಿವ್ ಫೀಲಿಂಗ್.

    ಸಾಧಾರಣವಾಗಿ ದೊಡ್ಡವರು ಮಕ್ಕಳಲ್ಲಿರುವ ನಕಾರಾತ್ಮಕ ಗುಣವನ್ನು ಹಿಡಿದುಕೊಂಡು ತಿದ್ದುವುದಕ್ಕೆ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಮಕ್ಕಳಲ್ಲಿರುವ ಪಾಸಿಟಿವ್ ಗುಣಗಳನ್ನು ಮೆಚ್ಚಿಕೊಳ್ಳಬೇಕು. ಅದೇ ರೀತಿ ಕೆಲ ಪಾಲಕರು ಮಕ್ಕಳನ್ನು ಬೇರೆಯವರ ಮುಂದೆ ಹೊಗಳುತ್ತಾರೆ, ಮುಖತಃ ಮಕ್ಕಳಿಗೆ ಮೆಚ್ಚುಗೆಯ ಮಾತು ಹೇಳುವುದಿಲ್ಲ. ‘ಹೊಗಳಿದರೆ ಆಯಸ್ಸು ಕ್ಷೀಣಿಸುತ್ತದೆ’ ಎಂಬ ನಾಣ್ಣುಡಿ ಬಹಳ ಹಳೆಯದು. ಸಾಧ್ಯವಾದಷ್ಟು ಮಿತಿಯಲ್ಲಿ ಮಕ್ಕಳನ್ನು ಹೊಗಳಿದರೆ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಮತ್ತಷ್ಟು ಸಾಧಿಸಬೇಕೆಂದು ತುಡಿತ ಹೆಚ್ಚಾಗುತ್ತದೆ.

    ಮಕ್ಕಳಲ್ಲಿರುವ ಸಕಾರಾತ್ಮಕ ಗುಣಗಳನ್ನು ಗುರುತಿಸದೆ, ಯಾವುದೋ ಸಣ್ಣ ಕಾರಣ ಹಿಡಿದುಕೊಂಡು ಅವರಿಗೆ ಹಿಂಸೆ ಕೊಡುವುದು, ಅವರಲ್ಲಿ ಅಸಹನೆ ಬೆಳೆಸುವುದು ಒಳ್ಳೆಯ ಲಕ್ಷಣವಲ್ಲ. ಸೆಲ್ಪ್ ಎಸ್ಟೀಮ್ ಇರದ ಮಕ್ಕಳನ್ನು ತಿದ್ದಿದರೂ, ಟೀಕಿಸಿದರೂ ತಾವು ಕೆಲಸಕ್ಕೆ ಬಾರದವರೆಂಬ ಭಾವನೆ ಬೆಳೆಸಿಕೊಳ್ಳುತ್ತಾರೆ. ಮಾದಕ ದ್ರವ್ಯಗಳು ಮೊದಲಾದ ಲಘು ಪರಿಹಾರಗಳ ಕಡೆ ಸಾಗಿಬಿಡುತ್ತಾರೆ. ನಕಾರಾತ್ಮಕ ಅಭಿಪ್ರಾಯಗಳಿರುವ ಮಕ್ಕಳಿಗೆ ಕೆಳಗೆ ಸೂಚಿಸಿರುವ ರೀತಿಯಲ್ಲಿ ನಂಬಿಕೆ ಕೊಡಿ.

    ಸಿನಿಮಾದಲ್ಲಿ ಹೀರೋ ಕಾಲೇಜ್ ವಿದ್ಯಾರ್ಥಿಯಾಗಿದ್ದರೆ ಯಾವಾಗಲೂ ಫಸ್ಟ್​ಕ್ಲಾಸ್​ನಲ್ಲಿ ಪಾಸಾಗುತ್ತಾನೆ. ಪೊಲೀಸಾಗಿದ್ದರೆ ನ್ಯಾಯ, ಧರ್ಮಕ್ಕಾಗಿ ಹೋರಾಡುತ್ತಾನೆ. ಅವನು ಯಾವ ಹುಡುಗಿಗೆ ಪ್ರಪೋಸ್ ಮಾಡಿದರೂ ಅವಳು ‘ನೋ’ ಅನ್ನುವುದಿಲ್ಲ. ‘ನೀನು ಆ ಹೀರೋನ ಅಭಿಮಾನಿ. ಆದರೆ ನಿಜಜೀವನದಲ್ಲಿ ಅವನ ಲೋಪದೋಷಗಳು ನಿನಗೆ ತಿಳಿದಿಲ್ಲ. ಅದೇ ರೀತಿ ನಿನ್ನ ಸ್ನೇಹಿತನಲ್ಲಿ ನೆಗೆಟಿವ್ ಅಂಶಗಳಿದ್ದರೆ ಟೀಕಿಸಿ, ಒಳ್ಳೆಯ ಗುಣಗಳನ್ನು ಮಾತ್ರ ಮೆಚ್ಚಿಕೊಳ್ಳುತ್ತೀಯ. ಇಷ್ಟವಾಗದ ಅಂಶಗಳನ್ನು ಮರೆಯುತ್ತೀಯ. ಅದೇ ರೀತಿ ನೀನು ನಿನ್ನ ಶಿಕ್ಷಕರನ್ನು ಗೌರವಿಸುತ್ತೀಯ. ಅವರ ಲೋಪಗಳನ್ನು ಗಮನಿಸುವುದಿಲ್ಲ. ನೀನು ಸಂಪೂರ್ಣವಾಗಿ ನಿನಗೆ ಸಂಬಂಧಿಸಿದವನೇ! ಮೇಲಿನ ಮೂರು ಸಂಬಂಧಗಳಿಗಿಂತ ನಿನಗಿರುವ ಬಂಧವು ಮತ್ತಷ್ಟು ಗಟ್ಟಿಯೂ, ಬಲಿಷ್ಠವೂ ಆಗಿದೆ. ಹೌದು, ಅಲ್ಲವಾ? ಮತ್ತೆ ನಿನಗೆ ನೀನೇ ಯಾಕೆ ಫ್ಯಾನ್ ಆಗುವುದಿಲ್ಲ? ನಿನ್ನಲ್ಲಿ ಹತ್ತು ತಪ್ಪುಗಳಿದ್ದರೇನಂತೆ, ಉಳಿದ 90 ಒಳ್ಳೆಯ ಲಕ್ಷಣಗಳನ್ನು ಏಕೆ ಗುರುತಿಸುವುದಿಲ್ಲ? ಅವುಗಳನ್ನು ಏಕೆ ಪ್ರೀತಿಸುವುದಿಲ್ಲ? ನೆಗೆಟಿವ್ ಚಿಂತನೆ ಬಿಡು, ಅದೇ ಆತ್ಮಾಭಿಮಾನ!’ ಅಂತ ತಿಳಿಸಿ ಹೇಳಿ.

    ಆತ್ಮಾಭಿಮಾನ v/s ಅಹಂಭಾವ: ಆತ್ಮಗೌರವದಿಂದ ಕೂಡಿದ್ದು ಆತ್ಮಾಭಿಮಾನ. ಅತಿಶಯದಿಂದ ಕೂಡಿದ್ದು ಅಹಂಭಾವ. ತನ್ನಲ್ಲಿರುವುದನ್ನು ಗುರುತಿಸಿದರೆ ಆತ್ಮಾಭಿಮಾನ, ಇಲ್ಲದಿರುವುದನ್ನು ಕಲ್ಪಿಸಿಕೊಂಡರೆ ಅಹಂಭಾವ. ಮಕ್ಕಳು ಆತ್ಮವಿಶ್ವಾಸದಿಂದ ಇದ್ದಾರಾ? ಅಹಂಭಾವದಿಂದ ಇದ್ದಾರಾ? ಎನ್ನುವುದು ಸ್ವಲ್ಪ ಪರಿಶೀಲಿಸಿದರೆ ಸುಲಭವಾಗಿ ತಿಳಿದುಬಿಡುತ್ತದೆ.

    ಸಣ್ಣವನಾಗಿದ್ದಾಗ ಹಿರಿಯರಿಂದ ಸಂಸ್ಕಾರರಹಿತವಾದ ಬೈಗಳನ್ನು ತಿಂದ ಹುಡುಗ ದೊಡ್ಡವನಾದಾಗ ಕೂಡ ಆ ‘ಅವಮರ್ಯಾದೆ’ ಮನಸ್ಥಿತಿ ಹಾಗೇ ಉಳಿದುಬಿಟ್ಟಿರುತ್ತದೆ. ನೀವು ಫೇಸ್​ಬುಕ್ ನೋಡಿ, ಯಾವುದಾದರೂ ವಿಷಯ ಪೋಸ್ಟ್ ಮಾಡಿದ ಕೂಡಲೇ ಕೆಲವರು ಅದನ್ನು ಟೀಕಿಸುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಆ ಟೀಕೆಯಲ್ಲಿ ಸ್ವಲ್ಪ ಅವಹೇಳನ, ಮತ್ತೆ ಕೆಲವು ಅನಾಗರಿಕ ಪದಗಳು, ಸಂಸ್ಕಾರಹೀನವಾದ ಬೈಗಳು ಇರುತ್ತವೆ. ಇಂತಹ ಕಾಮೆಂಟ್ಸ್ ಹಾಕುವವರು ಆತ್ಮಗೌರವವಿಲ್ಲದೆ ಬೆಳೆದವರೇ ಆಗಿರುತ್ತಾರೆ.

    ಆತ್ಮಗೌರವ ಇರುವವರು ಇತರರ ಬಗ್ಗೆಯೂ ಗೌರವ ತೋರಿಸುತ್ತಾರೆ. ನನಗೆ ಪರಿಚಯ ಇರುವ ಇಬ್ಬರು ಪ್ರಮುಖರಲ್ಲಿ ಒಬ್ಬರು ತಮ್ಮ ಕ್ಷೇತ್ರದಲ್ಲಿ ಬಹಳ ಪ್ರಸಿದ್ಧರು. ತಿಳಿವಳಿಕೆ ಇರುವವರು. ತಮಗಿಂತ ಹಿರಿಯರು ಬಂದರೆ ಎದ್ದು ನಿಲ್ಲುತ್ತಾರೆ. ಮಾಡಿದ ನಮಸ್ಕಾರಗಳಲ್ಲಿ ಆತ್ಮೀಯತೆ ಇರುತ್ತದೆ. ಎರಡನೇ ವ್ಯಕ್ತಿಯೂ ವಿದ್ಯಾವಂತನೇ, ಆಶುಕವಿ. ಆತನ ಪ್ರತಿ ಮಾತಿನಲ್ಲೂ ಅಹಂಭಾವ ಎದ್ದು ಕಾಣುತ್ತಿರುತ್ತದೆ.

    ಸುಳ್ಳುಗಳು: ಕೆಲ ಮಕ್ಕಳಿಗೆ ಸುಳ್ಳು ಹೇಳುವ ಅಭ್ಯಾಸ ಬಾಲ್ಯದಲ್ಲಿಯೇ ಆಗಿರುತ್ತದೆ. ದುಡ್ಡು ಬೇಕಾದಾಗಲೂ ಸುಳ್ಳು ಹೇಳಿ ಅಪ್ಪನಿಂದ ದುಡ್ಡು ಪೀಕಿಸುವುದುಂಟು. ಟೀನೇಜರ್ಸ್ ಕಳ್ಳತನ ಮಾಡುವುದೂ ಆಗಲೇ. ನ್ಯೂಕ್ಲಿಯಸ್ ಕುಟುಂಬಗಳು ಬಂದ ಮೇಲೆ ಮಕ್ಕಳನ್ನು ಅತಿಮುದ್ದಿನಿಂದ ನೋಡಿಕೊಳ್ಳುವ ಪಾಲಕರ ಸಂಖ್ಯೆ ಬೆಳೆಯುತ್ತಿದೆ. ಇದರಿಂದ ಮಕ್ಕಳಲ್ಲಿ ಕಳ್ಳತನದ ಅಭ್ಯಾಸ ಕಡಿಮೆಯಾಗಿರುವುದು ನಿಜವೇ. ಆದರೂ ಅವರ ಅಗತ್ಯಗಳು ಅತಿಯಾದಾಗ ಟೀನೇಜರ್ಸ್ ಕಳ್ಳತನ ಮಾಡುತ್ತಾರೆ. ಗರ್ಲ್​ಫ್ರೆಂಡ್​ನ ಎಂಟರ್​ಟೇನ್ ಮಾಡುವ ಸಲುವಾಗಿ ಮಕ್ಕಳು ಕಳ್ಳತನ ಮಾಡುವುದು ನಮಗೆಲ್ಲ ತಿಳಿದೇ ಇದೆ. ಮನೆಯಲ್ಲಿ ಲಕ್ಷಗಟ್ಟಲೆ ಕಳ್ಳತನ ಮಾಡಿ ಬಾಯ್ಫ್ರೆಂಡ್ ಜೊತೆ ಓಡಿಹೋದ ಹುಡುಗಿಯರ ಕಥೆಗಳನ್ನೂ ಕೇಳಿದ್ದೇವೆ.

    ಮಗ ಸುಳ್ಳು ಹೇಳಿದಾಗ ಅವನನ್ನು ದಂಡಿಸಬೇಡಿ. ವಿಚಾರಣೆ ಮಾಡುತ್ತಿರುವ ಹಾಗೆ ಮಾತಾಡಬೇಡಿ. ‘ನನಗೆ ಮೋಸ ಮಾಡಿಬಿಟ್ಟೆ’ ಎಂಬ ನಿಮ್ಮ ಭಾವನೆ ಅವರಿಗೆ ಅರ್ಥವಾಗುವ ಹಾಗೆ ಹೇಳಿ. ಕೆಲ ಕಾಲ ಅವರ ಜೊತೆ ಮಾತಾಡುವುದನ್ನು ಕಡಿಮೆ ಮಾಡಿ. ‘ನೀನು ತಪ್ಪು ಮಾಡಿದ್ದಕ್ಕಲ್ಲ, ನನಗೆ ಸುಳ್ಳು ಹೇಳಿದ್ದಕ್ಕೆ ಈ ಶಿಕ್ಷೆ’ ಎಂದು ತಿಳಿಸಿರಿ.

    ಮನೆ-ಹಾಸ್ಟಲ್: ‘ಲಂಗ ದಾವಣಿ ತೊಟ್ಟ ಒಬ್ಬಳು ಹುಡುಗಿ ನಡುಮನೆಯಲ್ಲಿ ಸಡಗರದಿಂದ ನಡೆದಾಡುತ್ತಿದ್ದರೆ ಬಹಳ ಚೆನ್ನಾಗಿರುತ್ತದೆ ಅಂತ ನಿಮ್ಮ ಪುಸ್ತಕಗಳಲ್ಲಿ ಬರೆದಿರಬಹುದು. ನಮ್ಮ ಮನೆಯಲ್ಲಿ ಹಾಗೆ ತಿರುಗಾಡುವುದಿಲ್ಲ, ಮಂಚದ ಮೇಲೆ ಮಲಗಿ ಟಿವಿ ನೋಡುತ್ತಿರುತ್ತಾಳೆ’ ಎಂದೊಬ್ಬ ತಾಯಿ ಬರೆದಿದ್ದಾರೆ. ಹಾಸ್ಟಲ್​ನಲ್ಲಿ ಸೇರಿಸುವುದೇ ಇದಕ್ಕಿರುವ ಏಕೈಕ ಪರಿಹಾರ ಎಂದು ಅನೇಕ ಪಾಲಕರು ನಂಬಿರುತ್ತಾರೆ. ‘ಹತ್ತು ವರ್ಷ ಕಳೆದ ಮೇಲೆ ಅತ್ತೆಮನೆಗೆ ಹೋಗುವ ಹುಡುಗಿ ಈಗಲಾದರೂ ನಿಮ್ಮ ಜೊತೆ ಇರಲಿ ಬಿಡಿ’ ಎಂದು ನಾವು ಸಲಹೆ ಕೊಡುತ್ತೇವೆ. ಸಣ್ಣ ವಯಸ್ಸಿನಲ್ಲೇ ಹಾಸ್ಟಲ್​ಗೆ ಸೇರಿಸಿದರೆ ಬೇಸಿಗೆ ರಜಾದಲ್ಲಿ ಮಾತ್ರ ಮನೆಗೆ ಬರುವ ಮಕ್ಕಳು ಬಳಗದವರನ್ನು ಸರಿಯಾಗಿ ಗುರುತಿಸುವುದಿಲ್ಲ. ತಾಯಿ-ತಂದೆ ಕೂಡ ಅತಿಥಿಗಳೇ ಎಂಬ ಮನೋಭಾವ ಬೆಳೆಯುತ್ತದೆ.

    ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಹಾಸ್ಟಲ್ ಓ.ಕೆ. ಆ ಊರಿನಲ್ಲಿ ಒಳ್ಳೆಯ ಸ್ಕೂಲ್ ಇಲ್ಲದಿದ್ದಾಗ, ಸಣ್ಣವಯಸ್ಸಿನಲ್ಲೇ ಪ್ರೇಮ ವ್ಯವಹಾರ ಪ್ರಾರಂಭಿಸಿದಾಗ, ಅತಿ ಮುದ್ದಿನಿಂದ ಸೊಕ್ಕು ಬೆಳೆಸಿಕೊಂಡಾಗ, ಮನೆಗೆ ಬಂದ ಮೇಲೆ ಪುಸ್ತಕ ಮುಟ್ಟದೆ ನಿರ್ಲಕ್ಷ್ಯ ಮಾಡಿದಾಗ, ಕ್ಷಣವೂ ಬಿಟ್ಟಿರಲಾರೆ ಎನ್ನುವಷ್ಟು ಇಂಟರ್​ನೆಟ್ ಗೀಳು ಬೆಳೆಸಿಕೊಂಡಾಗ, ಗಂಟೆಗಟ್ಟಲೇ ಸ್ನೇಹಿತರ ಜೊತೆ ತಿರುಗುತ್ತಿದ್ದಾಗ, ಬೆಡ್​ಷೀಟ್​ನ್ನು ಮಡಿಸಿಡದಷ್ಟು ಸೋಮಾರಿಯಾದಾಗ, ಮನೆಯ ವಾತಾವರಣ ಚೆನ್ನಾಗಿಲ್ಲದಿದ್ದಾಗ (ಅಂದರೆ ಜಗಳಗಳು), ಬಂಧುಗಳು ಹೆಚ್ಚಾಗಿ ಬರುತ್ತಿದ್ದಾಗ, ಗಂಡ-ಹೆಂಡತಿ ಇಬ್ಬರೂ ಕೆಲಸದಲ್ಲಿದ್ದಾಗ, ತಾತ, ಅಜ್ಜಿಯರ ಅಕ್ಕರೆ ಮೇರೆ ಮೀರಿದಾಗ… ಹೀಗೆ ಹಲವಾರು ಕಾರಣಗಳಿದ್ದಾಗ, ಹಾಸ್ಟಲ್​ಗೆ ಸೇರಿಸಬಹುದು. ಪ್ರತಿ ವಿದ್ಯಾರ್ಥಿ ಹನ್ನೆರಡು ವರ್ಷ ದಾಟಿದ ಮೇಲೆ ಕಡೇಪಕ್ಷ ಒಂದು ವರ್ಷ ಹಾಸ್ಟಲ್​ನಲ್ಲಿರಬೇಕೆಂದು ಕೆಲವರು ಹೇಳುತ್ತಾರೆ. ಅದು ನಿಜವೇ. ಪ್ರತಿ ವಿಷಯಕ್ಕೂ ಹಿರಿಯರನ್ನು ಅವಲಂಬಿಸುವುದು, ಅತ್ತು ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುವುದು, ಮೊದಲಾದ ವಿಷಯಗಳು ಅಭ್ಯಾಸ ಆಗುತ್ತವೆ. ಅದರೆ ನಾವು ಮಕ್ಕಳನ್ನು ಸೇರಿಸುವ ಹಾಸ್ಟಲ್ ಒಳ್ಳೆಯದಾಗಿರಬೇಕು.

    ಪ್ರೀತಿ ತೋರ್ಪಡಿಸುವುದು: ‘ನೀನು ಬರುವಾಗ ನಿನ್ನ ಕೈಯಲ್ಲಿ ಏನೂ ಇರದಿದ್ದರೂ, ಮಕ್ಕಳು ಕಿಲಕಿಲ ನಗುತ್ತ ನಿಮ್ಮ ಬಳಿಗೆ ಓಡಿ ಬಂದು ಅಪ್ಪಿಕೊಂಡರೆ ನೀನೇ ಧನವಂತ. ಅವರು ಹಾಗೆ ಮಾಡಬೇಕೆಂದರೆ ಬಗೆಬಗೆಯ ತಿಂಡಿ-ವಸ್ತುಗಳನ್ನು ಕೊಡಿಸಬೇಕು ಎಂದು ತಿಳಿಯುವುದು ನಿನ್ನ ಭ್ರಮೆ. ಅವರಿಗೆ ಕಾಣಿಕೆಯಾಗಿ ಕೊಡಬೇಕಾದುದು ಒಂದೇ-ಪ್ರೀತಿ!’

    ‘ನನ್ನ ಮಕ್ಕಳು ನನ್ನ ಜೊತೆ ಚೆನ್ನಾಗಿ ಮಾತಾಡುವುದಿಲ್ಲ, ಬೇರೆಯವರ ಜೊತೆ ಚೆನ್ನಾಗಿ ಬೆರೆಯುತ್ತಾರೆ’ ಎಂದು ಪ್ರತಿ ಪೇರೆಂಟ್ ಒಮ್ಮೆ ಅಲ್ಲ ಒಮ್ಮೆ ಅಂದುಕೊಂಡಿರುತ್ತಾರೆ. ಮಕ್ಕಳು ಹಿಂದಿನಂತೆ ಈಗ ಇಲ್ಲ ಎನ್ನುವುದು ಅವರ ದೂರು. ತಳಪಾಯ ಸರಿಯಿದ್ದರಲ್ಲವೇ ಭವನವು ಭದ್ರವಾಗಿ ನಿಲ್ಲುವುದು? ಟ್ವೀನೀಸ್ ಟೀನೇಜರ್ಸ್ ಆಗಿ ಬದಲಾಗುತ್ತಿರುವ ಸಮಯದಲ್ಲಿ ಅವರ ಜೊತೆ ನೀವು ಹೆಚ್ಚು ಸಮಯ ಕಳೆಯುತ್ತಿಲ್ಲ ಎನ್ನುವುದನ್ನು ಮರೆತು ಅವರನ್ನೇ ದೂಷಿಸುವುದು ಎಷ್ಟು ಸಮಂಜಸ? ಮಕ್ಕಳನ್ನು ಪ್ರೀತಿಸಿದರೆ ಸಾಲದು, ಆ ಪ್ರೀತಿ ಅವರಿಗೆ ತಿಳಿಯಬೇಕು.

    ಬಿಲಿಯನ್​ಗಟ್ಟಲೆ ವ್ಯವಹಾರ ಮಾಡುವ ಕಂಪನಿಯ ಚೇರ್ಮನ್, ತನ್ನೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ, ಮಾರನೇ ದಿನ ನಡೆಯಲಿರುವ ಕ್ರಿಕೆಟ್​ವ್ಯಾಚ್​ಗೆ ತನಗೆ, ತನ್ನ ಮಗನಿಗೆ ಟಿಕೆಟ್ ಬುಕ್ ಮಾಡಲು ತನ್ನ ಸೆಕ್ರೆಟರಿಗೆ ಸೂಚಿಸುತ್ತಾನೆ. ‘ನಿಮಗೆ ಕ್ರಿಕೆಟ್ ಅಂದರೆ ಇಷ್ಟವೇ?’ ಎಂದು ಸೆಕ್ರೆಟರಿ ಕೇಳಿದಾಗ ‘ಅಲ್ಲ, ನನ್ನ ಮಗನೆಂದರೆ ಇಷ್ಟ’ ಎಂದನು ಚೇರ್ಮನ್.

    ನಿಮ್ಮ ಮಕ್ಕಳ ಬಗ್ಗೆ ಎಷ್ಟು ಆಸಕ್ತಿ ವಹಿಸಿದ್ದೀರಿ ಎಂದು ತಿಳಿಸುವ ಒಂದು ಸಂಕೇತ ಆಲಿಸುವುದು. ಆಲಿಸುವುದು ಎಂದರೆ ಬರೀ ಮಾತನ್ನಲ್ಲ. ಟೀನೇಜರ್ಸ್ ಮಾತುಗಳಿಗಿಂತ ನಡವಳಿಕೆ-ಹಾವಭಾವಗಳಿಂದ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳುತ್ತಾರೆ. ‘ಆ ದಿನ ಹೇಗೆ ಕಳೆಯಿತು?’ ಎಂದು ಪ್ರತಿದಿನ ವಿಚಾರಿಸಿ. ಅವರ ದಿನಚರಿಯಲ್ಲಿ ನೀವೂ ಭಾಗವಹಿಸುತ್ತಿದ್ದೀರಿ ಎಂಬ ಭಾವನೆ ಅವರಿಗೆ ಒಳ್ಳೆಯ ಉತ್ತೇಜನ ಕೊಡುತ್ತದೆ. ‘ಸ್ಕೂಲ್​ನಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ತಿನ್ನುತ್ತೀರಾ?’ ‘ಬೇರೆ ಹುಡುಗರು ನಿನ್ನ ಜೊತೆ ಊಟ ಷೇರ್ ಮಾಡುತ್ತಾರಾ?’ ನಿಮ್ಮ ಇಂತಹ ಪ್ರಶ್ನೆಗಳು ಅವರಲ್ಲಿ ಉತ್ಸಾಹ ತುಂಬುತ್ತವೆ.

    ಹುಡುಗಿ ತನ್ನ ರೂಂನಲ್ಲಿ ಓದುತ್ತಿರುವಾಗ, ಅಪ್ಪ ಹಾಲಿನ ಗ್ಲಾಸ್ ತಂದಿಟ್ಟು ‘ಚೆನ್ನಾಗಿ ಓದುತ್ತಾ ಇದ್ದೀಯಮ್ಮಾ?’ ಎಂದು ಕೇಳಿದರೆ ಆ ಹುಡುಗಿ ಬಹಳ ಟಚಿಂಗ್ ಆಗಿ ಫೀಲ್ ಆಗುತ್ತಾಳೆ. ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಒಂದು ಸಣ್ಣ ಸ್ಪರ್ಶ ಸಾಕು. ಹದಿ ವಯಸ್ಸಿನಲ್ಲಿರುವವರಿಗೆ ‘ಸ್ಪರ್ಶ’ವು ಭದ್ರತಾ ಭಾವನೆ ಕೊಡುತ್ತದೆ. ತಲೆ ಸವರುವುದು, ಕಥೆ ಹೇಳುವುದು, ಅವರಲ್ಲಿರುವ ಭಯವನ್ನು ಕಾಂಪ್ಲೆಕ್ಸ್​ಗಳನ್ನು ದೂರ ಮಾಡುತ್ತವೆ. ನಿದ್ರಿಸುತ್ತಿದ್ದರೂ ಸರಿಯೇ ‘ಗುಡ್ ನೈಟ್ ಕಿಸ್’ ಕೊಡುವುದನ್ನು ಮರೆಯಬೇಡಿ.

    ಸಾಧಾರಣವಾಗಿ ಮಕ್ಕಳ ರೂಂಗಳು ಅಸ್ತವ್ಯಸ್ತವಾಗಿರುತ್ತವೆ. ಪುಸ್ತಕಗಳು ಎಲ್ಲೆಂದರೆಲ್ಲಿ ಬಿದ್ದಿರುತ್ತವೆ. ರೂಂ ಕ್ಲೀನ್ ಮಾಡುವುದು ಅಮ್ಮನೇ ಆದರೂ ಅಪ್ಪನೂ ಹಾಗೆ ಮಾಡಿದರೆ ಮಕ್ಕಳು ಹೆಮ್ಮೆ ಪಡುತ್ತಾರೆ. ಗಲ್ಲಿ ಕ್ರಿಕೆಟ್ ಆಡಿ ಬಂದು ಮಲಗಿದ ಮಗನ ಪಾದಗಳನ್ನು ನವಿರಾಗಿ ನಮ್ಮ ಅಂಕಲ್ ಹಿಸುಕುತ್ತ ಇದ್ದುದನ್ನು ಬಾಲ್ಯದಲ್ಲಿ ನೋಡಿದ್ದೆ. ಎಂದಿನದೋ ಅನುಭವ, ಇಷ್ಟು ವರ್ಷಗಳಾದರೂ ಜ್ಞಾಪಕ ಇರುವುದಕ್ಕೆ ಕಾರಣ-ಪ್ರೀತಿ. ಟೀನ್ಸ್ ಮಕ್ಕಳಿಗೆ ಅಪ್ಪ ಕೊಬ್ಬರಿ ಎಣ್ಣೆ ಹಚ್ಚುವಾಗ, ಮೊದ ಮೊದಲು ಮುಜುಗರವಾದರೂ ‘ಬಹಳ ಮಂದಿಗೆ ಸಿಗದ ಗೌರವ ನನಗೆ ಸಿಕ್ಕಿತು’ ಎಂಬ ಈ ಫೀಲಿಂಗ್​ಗಿಂತ ದೊಡ್ಡ ಆತ್ಮತೃಪ್ತಿ ಬೇರೊಂದಿಲ್ಲ.

    ‘ಈ ಹೊತ್ತು ಭಾನುವಾರ, ಬೆಳಗ್ಗೆ ಅಡಿಗೆಮನೇಲಿ ಅಕ್ಕನಿಗೆ ಸಹಾಯ ಮಾಡು, ನೇಲ್​ಕಟರ್​ನಿಂದ ಅಜ್ಜಿಯ ಉಗುರು ತೆಗೆ, ಸಾಯಂಕಾಲ ಷಾಪಿಂಗ್​ಗೆ ಕರೆದುಕೊಂಡು ಹೋಗುತ್ತೇನೆ’ ಎಂದು ನೀವು ಹೇಳಿದರೆ ಅದರಿಂದ ಎರಡು ಪ್ರಯೋಜನ.

    1) ಬೇರೆಯವರ ಕೆಲಸದಲ್ಲಿ ಸಹಾಯ ಮಾಡುವುದು ಕೂಡ ಪ್ರೀತಿಯ ಸಂಕೇತವೇ.

    2) ತಾವು ಮಾಡುವ ಒಳ್ಳೆಯ ಕೆಲಸಕ್ಕೆ ರಿವಾರ್ಡ್ ಸಿಗುತ್ತದೆ ಎನ್ನುವ ವಿಷಯ ಮಕ್ಕಳಿಗೆ ಮನವರಿಕೆಯಾಗುತ್ತದೆ.

    ಮಕ್ಕಳು, ಮುಖ್ಯವಾಗಿ ಗಂಡುಮಕ್ಕಳು, ಹದಿನಾಲ್ಕು ದಾಟಿದ ಮೇಲೆ ಅಪ್ಪ-ಅಮ್ಮನ ಜೊತೆ ಊಟ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ‘ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಸೇರಿ ವಾರದಲ್ಲಿ ಎಷ್ಟು ಬಾರಿ ಊಟ ಮಾಡುತ್ತೀರಿ?’ ಒಂದು ಸಮೀಕ್ಷೆಯಲ್ಲಿ ಈ ಪ್ರಶ್ನೆಗೆ ‘ಮೂರು ದಿನಕ್ಕಿಂತ ಹೆಚ್ಚು’ ಎಂದು ಹೇಳಿದವರು ಶೇಕಡ 2 ಮಾತ್ರ. ತಿಂಗಳಿಗೊಂದು ಬಾರಿ ಹೋಟೆಲ್​ಗೆ ಕರೆದೊಯ್ದು ಜವಾಬ್ದಾರಿ ಮುಗಿಯಿತು ಎಂದು ತಿಳಿಯದೆ, ಎಲ್ಲರೂ ಸೇರಿ ತಿಂಗಳಲ್ಲಿ ಐದಾರು ಬಾರಿಯಾದರೂ ಒಟ್ಟಿಗೆ ಊಟ ಮಾಡಬೇಕು. ಮಕ್ಕಳ ಬಾಯಲ್ಲಿ ತುತ್ತಿಡುವ ಅಗತ್ಯವಿಲ್ಲ ಬಿಡಿ, ಆದರೆ ತಮಾಷೆಯಾಗಿ ಮಾತಾಡುತ್ತ ಅವರ ಜೊತೆ ಊಟ ಮಾಡಿ.

    (ಲೇಖಕರು ಖ್ಯಾತ ಕಾದಂಬರಿಕಾರರು, ವ್ಯಕ್ತಿತ್ವ ವಿಕಸನ ತರಬೇತುದಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts