More

    ಮಕ್ಕಳು ಹಿರಿಯರಿಗೆ ಪ್ರೀತಿ ಹಂಚಬೇಕು…

    ಮಾವನನ್ನು ಸಾಯಿಸಲು ಸೊಸೆ ಮಾಡುವ ಪ್ರಯತ್ನಗಳನ್ನು, ರಕ್ತಸಂಬಂಧಿಗಳ ನಡುವೆ ಕಿಚ್ಚು ಹಚ್ಚುವ ವಿಲನ್​ಗಳಿರುವ ಕಥೆಗಳನ್ನು ನೋಡುತ್ತ ಸ್ಯಾಡಿಸ್ಟಿಕ್ ಭಾವನೆ ಬೆಳೆಸುವ ಟಿ.ವಿ.ಯಿಂದ ಹೊರಬಂದು ಮಕ್ಕಳಿಗೆ ಒಂದು ಹದಿನೈದು ನಿಮಿಷ (ಮಾನವ ಸಂಬಂಧಗಳ ಕುರಿತ, ಪ್ರೀತಿ ಮಮತೆ ಕುರಿತ) ಕಥೆಗಳನ್ನು ಹೇಳುವುದಕ್ಕೆ ವಿನಿಯೋಗಿಸಿದರೆ ಚೆನ್ನಾಗಿರುತ್ತದೆ.

    ‘ನೀವು ನಿಮ್ಮ ತಂದೆ-ತಾಯಿ ಬಗ್ಗೆ ಹೇಗೆ ಪ್ರೀತಿ ತೋರಿಸುತ್ತೀರಿ?’ ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಬಹಳ ಮಂದಿ ‘ಕಷ್ಟಪಟ್ಟು ಓದುತ್ತೇವೆ, ಅವರ ಕನಸು ನನಸು ಮಾಡುತ್ತೇವೆ’ ಎನ್ನುತ್ತಾರೆ. ಅದು ಪ್ರೀತಿಯಲ್ಲ ಜವಾಬ್ದಾರಿ.

    ಮಕ್ಕಳು ಹಿರಿಯರಿಗೆ ಪ್ರೀತಿ ಹಂಚಬೇಕು...ಪ್ರೀತಿಯನ್ನು ತೋರ್ಪಡಿಸಬೇಕಾ? ಅರ್ಥ ಮಾಡಿಕೊಳ್ಳಲಾಗುತ್ತದೆಯಾ? ಎಂದು ಮೋಟಿವೇಷನ್ ಕ್ಲಾಸ್​ಗಳಲ್ಲಿ ಕೇಳಿದರೆ ಬಹಳ ಮಂದಿ ‘ಅರ್ಥ ಮಾಡಿಕೊಳ್ಳಲಾಗುತ್ತದೆ’ ಎಂದು ಉತ್ತರಿಸುತ್ತಾರೆ. ಹಾಸ್ಟಲ್​ನಿಂದ ಮನೆಗೆ, ಬೇಸಿಗೆ ರಜೆಯಲ್ಲಿ ಹೋದಾಗ, ಆಟೋ ಶಬ್ದ ಕೇಳಿ, ಹಿಟ್ಟು ರುಬ್ಬುತ್ತಿದ್ದ ನಿಮ್ಮಮ್ಮ ಕೈ ಕೂಡ ತೊಳೆಯದೆ ಓಡುತ್ತ ಬಂದು ‘ಏನಪ್ಪಾ …ಬೆಳಗ್ಗೆಯಿಂದ ಕಾಯ್ತಾ ಇದ್ದೀನಿ ಯಾಕಿಷ್ಟು ಲೇಟ್ ಮಾಡಿದೆ? ಇದೇನೋ ಇಷ್ಟು ಬಡವಾಗಿದ್ದೀಯ?’ ಎಂದು ಹೆಗಲ ಮೇಲೆ ಕೈ ಹಾಕಿ ಒಳಗೆ ಕರೆದೊಯ್ದರೆ ಚೆನ್ನಾಗಿರುತ್ತದೆಯೇ? ಆಥವಾ ಅಲ್ಲಿಂದಲೇ ಇಣುಕಿ ನೋಡಿ ‘ನೀನಾ? ಒಳಗೆ ಹೋಗಿ ಸ್ನಾನ ಮಾಡಿ ಬಾ’ ಅಂದರೆ ಚೆನ್ನಾಗಿರುತ್ತದೆಯಾ?’ ಎಂದು ಕೇಳಿದಾಗ ಅವರಿಗೆ ಅರ್ಥವಾಗುತ್ತದೆ.

    ಉತ್ತಮ ವ್ಯಕ್ತಿತ್ವ ಇರುವ ಹುಡುಗ ಪ್ರೀತಿಯನ್ನು ಸರಿಯಾಗಿ ತೋರ್ಪಡಿಸುತ್ತಾನೆ. ಅಮ್ಮನ ಬೆರಳಿಗೆ ಗೋರಂಟಿ ಹಚ್ಚುವುದು, ತಂಗಿ ರಂಗೋಲಿ ಹಾಕುವಾಗ ಪಕ್ಕದಲ್ಲಿ ಕುಳಿತಿರುವುದು, ನಲವತ್ತು ವರ್ಷ ತುಂಬಿದ ಮೇಲೂ ತನ್ನಪ್ಪನ ಪಕ್ಕದಲ್ಲಿ ಕುಳಿತು ಮಾತಾಡುವುದು. ಇವೆಲ್ಲ ಉತ್ತಮ ಸಂಸ್ಕಾರದಿಂದ ಬಂದಿರುವ ಪ್ರೀತಿಯ ತೋರ್ಪಡಿಕೆಗಳು.

    ಪ್ರೀತಿಯನ್ನು ಹೇಗೆ ತೋರ್ಪಡಿಸಬೇಕೆಂದು ಮಕ್ಕಳಿಗೆ ಪಾಲಕರು ಕಲಿಸಬೇಕು. ಒಬ್ಬ ತಂದೆ ತನ್ನ ಆರು ವರ್ಷದ ಮಗನಿಗೆ ‘ನಾವು ಈ ಬೇಸಿಗೆ ರಜೆಯಲ್ಲಿ ತಾತನ ಮನೆಗೆ ಹೋದಾಗ ನಮ್ಮ ತಂದೆಗೆ ನೀನೇ ತಲೆಬಾಚಬೇಕು. ಅಜ್ಜಿ ಜೊತೆ ಕ್ರಿಕೆಟ್ ಆಡಬೇಕು’ ಎಂದು ಹೇಳಿದರೆ ಆ ಹುಡುಗ ಸಂತೋಷದಿಂದ ‘ಎಸ್’ ಎನ್ನುತ್ತಾನಲ್ಲವೇ? ಟೀನೇಜ್ ಮಗನಿಂದ ನಿಮ್ಮ ತಂದೆಗೆ ಪತ್ರ ಬರೆಸಿರಿ. ಈಗೀಗ ಪತ್ರ ಬರೆಯುವುದು ತುಂಬ ಕಡಿಮೆಯಾಗಿದೆ. ‘ಫೋನ್​ನಲ್ಲಿ ವಿಷಯ ಹೇಳಿದರೆ ಸಾಕು, ಅನಗತ್ಯವಾಗಿ ಏಕೆ ಟೈಂ ವೇಸ್ಟ್ ಮಾಡಬೇಕು?’ ಎಂದು ಹೇಳುವ ಮಕ್ಕಳೇ ವಾಟ್ಸಾಪ್​ನಲ್ಲಿ, ಚಾಟ್​ನಲ್ಲಿ ಗಂಟೆಗಟ್ಟಲೇ ಸಮಯ ಕಳೆಯುತ್ತಾರೆ. ಫೋನ್​ನಲ್ಲಿ ಹೇಳಲಾಗದ್ದು, ಮಾತಿನಲ್ಲಿ ವಿವರಿಸಲಾಗದ್ದು, ಎಷ್ಟೋ ಇವೆ. ಆ ಭಾವನೆಗಳನ್ನು ಪತ್ರದ ಮೂಲಕ ಕಮ್ಯುನಿಕೇಟ್ ಮಾಡಬಹುದು. ಮೊಮ್ಮಗನಿಂದಲೋ, ಮೊಮ್ಮಗಳಿಂದಲೋ ಪತ್ರ ಬಂದರೆ ಆ ಹಿರಿಯ ಜೀವಗಳಿಗೆ ಬಹಳ ಸಂತೋಷವಾಗುತ್ತದೆ.

    ತಾತ, ಅಜ್ಜಿಯನ್ನು ಷಾಪಿಂಗ್​ಗೆ, ಸಿನಿಮಾಗೆ ಕರೆದೊಯ್ಯುವ ಜವಾಬ್ದಾರಿಯನ್ನು ಟೀನೇಜ್ ಮಕ್ಕಳಿಗೆ ವಹಿಸಬೇಕು. ಮೊಮ್ಮಕ್ಕಳ ಜೊತೆ ಸಿನಿಮಾಗೆ ಹೋಗಿದ್ದು ಅವರ ಪಾಲಿಗೆ ಬಹಳ ದೊಡ್ಡ ಅನುಭವವಾಗುತ್ತದೆ. ಆದರೆ ಈ ರೀತಿ ಹೊರಗೆ ಹೋದಾಗ ಹಿರಿಯರು ನಿಮ್ಮ ಬಗ್ಗೆ, ನಿಮ್ಮ ಬಾಲ್ಯದ ಬಗ್ಗೆ ನಿಮ್ಮ ಮಕ್ಕಳಿಗೆ ಮಾತನಾಡದ ಹಾಗೆ ನೋಡಿಕೊಳ್ಳಿ.

    ಟೀನೇಜ್ ಮಕ್ಕಳ ನಡವಳಿಕೆಯಲ್ಲಿ ಸ್ವಲ್ಪ ಅಹಂಭಾವ ಬೆರೆತಿರುತ್ತದೆ. ತಮ್ಮ ವಾರಗೆಯವರ ಜೊತೆಗಲ್ಲದೆ ಬೇರೆಯವರ ಜೊತೆ ಬೆರೆಯುವುದಿಲ್ಲ. ತಂದೆ-ತಾಯಿ ಮಾತನಾಡುವಾಗಲೂ ಅವರ ಕಡೆ ನೋಡದೆ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ.

    ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಹೇಳಿರಿ-‘ಬೇರೆಯವರು ಮಾತನಾಡುತ್ತಿರುವಾಗ ಶ್ರದ್ಧೆಯಿಂದ ಕೇಳಿಸಿಕೊಳ್ಳಿ’ ಎಂದು. ಇಲ್ಲದಿದ್ದರೆ ಅವರು ಅನ್ಯಮನಸ್ಕರಾಗಿರುವ ಭಾವನೆ ಬರುತ್ತದೆ. ಹಾಗೆಂದು ರೆಪ್ಪೆ ಬಡಿಯದೆ ನೋಡುತ್ತ ಇದ್ದರೆ ಅವರನ್ನು ಅನುಮಾನದಿಂದ ಶೋಧಿಸುತ್ತಿರುವ ಭಾವನೆ ಕಂಡುಬರುತ್ತದೆ. ಬೇರೆಯವರು 10 ನಿಮಿಷ ಮಾತನಾಡಿದರೆ 5 ನಿಮಿಷ ಅವರ ಕಡೆ ನೋಡಬೇಕು. ಮಾತನಾಡುವಾಗಲೂ ಅಷ್ಟೇ. ಒಟ್ಟಿನಲ್ಲಿ ಎದುರಿಗಿರುವವರನ್ನು ನೋಡುತ್ತ ಮಾತನಾಡಿದರೆ ಅವರನ್ನು ವಿಚಾರಣೆ ಮಾಡಿದ ಹಾಗಿರುತ್ತದೆ. ನೋಡದೇ ಇದ್ದರೆ ನಿರ್ಲಕ್ಷ್ಯ ಮಾಡಿದ ಹಾಗಿರುತ್ತದೆ. ಇದೇ ‘ಆರ್ಟ್ ಆಫ್ ಲಿಸನಿಂಗ್ ಆಂಡ್ ಸ್ಪೀಕಿಂಗ್’.

    ಐ ಲವ್ ಯೂ ಡಿಯರ್: ನರಸಾಪುರದಿಂದ ಪಾಲಕೊಲ್ಲುಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸಮಯ ಆರು ಗಂಟೆ-ಗೋಧೂಳಿ ಸಮಯವಾದ್ದರಿಂದ ಕಿಟಕಿ ಮೂಲಕ ಹೊಲಗಳು, ಸುಂದರ ಪ್ರಕೃತಿ, ಸ್ವಚ್ಛವಾದ ಗಾಳಿ, ಅಲ್ಲಲ್ಲಿ ಹೆಂಚಿನ ಮನೆಗಳು, ಡಾಬಾಗಳು… ಇಂತಹ ಸುಂದರ ಪ್ರಕೃತಿಗೇ ಅಂದವನ್ನು ಕೊಡುವ ಅದ್ಭುತ ದೃಶ್ಯವೊಂದು ಕಣ್ಣಿಗೆ ಬಿತ್ತು.

    ಮನೆಯ ಹಿತ್ತಿಲಿನಲ್ಲಿ ಮರಗಳ ನಡುವೆ ಕಟ್ಟೆಯ ಮೇಲೆ ಕುಳಿತಿರುವ ಅಪ್ಪ, ಪಕ್ಕದಲ್ಲಿ ನಿಂತು ಅವನ ತಲೆ ತೊಳೆಯುತ್ತಿರುವ ಅಮ್ಮ, ಚೆಂಬಿನಲ್ಲಿ ನೀರು ತುಂಬಿ ಕೊಡುತ್ತಿರುವ ಮಗ, ಸೀಗೆಪುಡಿ ಗಿಂಡಿ ಹಿಡಿದು ನಿಂತಿರುವ ಮಗಳು… ಇಂತಹ ದೃಶ್ಯವನ್ನು ಕಂಡು ಎಷ್ಟೋ ವರ್ಷವಾಗಿತ್ತು. ಒಂದು ಕೆಲಸದಲ್ಲಿ ಹೀಗೆ ಮನೆಮಂದಿ ಎಲ್ಲ ಸೇರುವುದು ಚೆಂದವಾಗಿ ಕಾಣಬಹುದು. ಇದೆಲ್ಲ ಹಳೇ ಹುಣಸೇಕಾಯಿ ತೊಕ್ಕು, ಎರಡು ರೂಪಾಯಿ ಷಾಂಪೂದಿಂದ ಎರಡು ನಿಮಿಷದಲ್ಲಿ ಮಾಡಿ ಮುಗಿಸುವ ಕೆಲಸಕ್ಕೆ ಮನೆಮಂದಿಯೆಲ್ಲ ಕೆಲಸ ಬಿಟ್ಟು ಸೇರಿದ್ದಾರಲ್ಲ, ಎಂದೆಲ್ಲ ಹೇಳುವವರು ಇಲ್ಲದಿಲ್ಲ. ಆದರೆ ಬದುಕಿನಲ್ಲಿ ಅಳಿಸಿಹೋಗದ ಸಂಪತ್ತು ಈ ಮಧುರಾನುಭವಗಳೇ ಅಲ್ಲವೇ?

    ಮಾವನನ್ನು ಸಾಯಿಸಲು ಸೊಸೆ ಮಾಡುವ ಪ್ರಯತ್ನಗಳನ್ನು, ರಕ್ತಸಂಬಂಧಿಗಳ ನಡುವೆ ಕಿಚ್ಚು ಹಚ್ಚುವ ವಿಲನ್​ಗಳಿರುವ ಕಥೆಗಳನ್ನು ನೋಡುತ್ತ ಸ್ಯಾಡಿಸ್ಟಿಕ್ ಭಾವನೆ ಬೆಳೆಸುವ ಟಿ.ವಿ.ಯಿಂದ ಹೊರಬಂದು ಮಕ್ಕಳಿಗೆ ಒಂದು ಹದಿನೈದು ನಿಮಿಷ (ಮಾನವ ಸಂಬಂಧಗಳ ಕುರಿತ, ಪ್ರೀತಿ ಮಮತೆ ಕುರಿತ) ಕಥೆಗಳನ್ನು ಹೇಳುವುದಕ್ಕೆ ವಿನಿಯೋಗಿಸಿದರೆ ಚೆನ್ನಾಗಿರುತ್ತದೆ. ಎಷ್ಟೋ ಒಳ್ಳೆಯ ಕಥೆಗಳಿವೆ. ಉದಾಹರಣೆಗೆ ಈ ಕೆಳಗಿನ ಜಪಾನೀಸ್ ಕಥೆ ಓದಿರಿ.

    ಒಬ್ಬ ಯುವಕ ಹುಟ್ಟಿದ ಹಬ್ಬದ ದಿನ ತನ್ನ ಎಂಬತ್ತರ ತಾತನನ್ನು ಡಿನ್ನರ್​ಗೆ ಕರೆದೊಯ್ದನು. ಊಟದ ನಡುವೆ, ಆ ವೃದ್ಧನು ಸರಿಯಾಗಿ ಹಿಡಿದುಕೊಳ್ಳಲಾಗದೆ ಗ್ಲಾಸನ್ನು ಕೈ ಬಿಟ್ಟಿದ್ದರಿಂದ ಗಲಿಬಿಲಿಗೊಂಡನು. ಆಗ ತುತ್ತು ಜಾರಿ ಅವನ ಬಟ್ಟೆಗಳ ಮೇಲೆ ಬಿದ್ದಿತು. ಸಾಂಬಾರ್ ಕಲೆಯಿಂದ ಬಟ್ಟೆಗಳು ಅಸಹ್ಯವಾಗಿ ಕಾಣಲಾರಂಭಿಸಿದವು. ಗ್ಲಾಸ್ ಬಿದ್ದ ಸಪ್ಪಳಕ್ಕೆ ಇತ್ತ ತಿರುಗಿದ ಉಳಿದ ಕಸ್ಟಮರ್ಸ್ ಇವರ ಕಡೆ ಜಿಗುಪ್ಸೆಯಿಂದ ನೋಡುತ್ತಿದ್ದರು.

    ಇದೇನನ್ನೂ ಗಮನಿಸದವನ ಹಾಗೆ, ತಾತನ ಊಟ ಪೂರ್ತಿಯಾಗುವುವವರೆಗೆ ಸುಮ್ಮನಿದ್ದು, ಆ ನಂತರ ವಾಷ್​ಬೇಸಿನ್ ಹತ್ತಿರಕ್ಕೆ ಕರೆದೊಯ್ದು, ಅನ್ನದ ಅಗಳುಗಳನ್ನು ಒರೆಸಿ ಹಾಕಿ, ಕರ್ಚೀಫ್ ಒದ್ದೆ ಮಾಡಿ, ಸಾಂಬಾರ್ ಕಲೆಗಳನ್ನು ಶುಭ್ರವಾಗಿ ಒರೆಸಿದನು. ನಂತರ ಬಾಚಣಿಕೆಯಿಂದ ತಾತನ ತಲೆ ಬಾಚಿ ಟೇಬಲ್ ಬಳಿಗೆ ಕರೆತಂದನು.

    ಅಷ್ಟು ಹೊತ್ತು ಶಬ್ದದ ಮಳೆಯಲ್ಲಿ ಮುಳುಗಿ ಹೋಗಿದ್ದ ರೆಸ್ಟಾರೆಂಟು, ಒಂದು ರೀತಿಯ ಅಪರಾಧ ಪ್ರಜ್ಞೆಯಿಂದ ನಿಶ್ಯಬ್ದವಾಯಿತು. ಬಿಲ್ ಪೇ ಮಾಡಿ ಇಬ್ಬರೂ ಹೊರಟಿದ್ದಾಗ, ಹಿಂಭಾಗದಿಂದ ಒಬ್ಬ ಗ್ರಾಹಕ ‘ಮಗೂ, ನೀನಿಲ್ಲಿ ಏನೋ ಬಿಟ್ಟು ಹೋಗುತ್ತಿದ್ದೀಯ’ ಎಂದನು. ಆ ಯುವಕನು ಹಿಂದಕ್ಕೆ ತಿರುಗಿ ಟೇಬಲ್ ಕಡೆ ನೋಡಿ, ‘ಏನೂ ಇಲ್ಲವಲ್ಲಾ!’ ಎಂದ. ‘ಪ್ರತಿ ಹುಡುಗನಿಗೆ ಒಂದು ಪಾಠ, ಪ್ರತಿ ವೃದ್ಧನಿಗೆ ಒಂದು ನಂಬಿಕೆ’ ಎಂದನು ಆ ಗ್ರಾಹಕ.

    ಮನೆಯ ಕಷ್ಟಗಳು-ಹೊರಗಿನ ಆಕರ್ಷಣೆಗಳು: ಒಬ್ಬ ಸಾಫ್ಟ್​ವೇರ್ ಇಂಜಿನಿಯರ್ ಮನೆಯಲ್ಲಿ ಕಂಪ್ಯೂಟರ್​ನಲ್ಲಿ ಕೆಲಸ ಮಾಡಿಕೊಳ್ಳುತ್ತ, ಮಗನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಓದಿಸುತ್ತಿದ್ದ. ಆದರೆ ಅವನಿಗೆ ಓದಿನಲ್ಲಿ ಆಸಕ್ತಿ ಇರುತ್ತಿರಲಿಲ್ಲ. ಮಾತು ಮಾತಿಗೆ ಎದ್ದುಹೋಗಲು ಪ್ರಯತ್ನಿಸುತ್ತಿದ್ದ.

    ‘ನಿನಗೋಸ್ಕರ ಆಫೀಸ್ ಕೆಲಸಾನ ಮನೆಗೆ ತರುತ್ತಿದ್ದೇನೆ. ಒಂದು ಕಡೆ ಕೂತು ಓದಲಿಕ್ಕೆ ನಿನಗೇನೋ ಕಷ್ಟ? ಒಮ್ಮೆ ಜೋರಾಗಿ ಉಸಿರು ಎಳೆದುಕೋ, ಧ್ಯಾನ ಮಾಡು’ ಎಂದು ಬಗೆ ಬಗೆಯಾಗಿ ಹೇಳಿದರೂ ಅವನಲ್ಲಿ ಬದಲಾವಣೆ ಬರಲಿಲ್ಲ. ಕಡಿಮೆ ಮಾರ್ಕ್ಸ್ ಬರುತ್ತಿದ್ದವು. ತಂದೆ-ತಾಯಿಗೆ ಏನು ಮಾಡಬೇಕೋ ತೋಚಲಿಲ್ಲ. ಇಬ್ಬರೂ ವಿದ್ಯಾವಂತರೇ, ಬುದ್ಧಿವಂತರೇ, ಆದರೂ ಮಗ ಏಕೆ ಹೀಗಾದನೋ ತಿಳಿಯಲಿಲ್ಲ.

    ಅದೇ ಸಮಯಕ್ಕೆ ಅವನ ಕಂಪನಿ ಆರು ತಿಂಗಳ ಮಟ್ಟಿಗೆ ಅಮೆರಿಕಕ್ಕೆ ಕಳಿಸಿತು. ಅಮೆರಿಕದಿಂದ ಅವನು ಮರಳಿ ಬಂದಾಗ ಅಚ್ಚರಿ ಕಾದಿತ್ತು. ಮಗ ಚೆನ್ನಾಗಿ ಓದುತ್ತಿದ್ದಾನೆ, ಉತ್ತಮ ಅಂಕಗಳೂ ಬರುತ್ತಿವೆ. ಅವನಿಗೆ ನಂಬಲು ಸಾಧ್ಯವಾಗಲಿಲ್ಲ. ಆರು ತಿಂಗಳಲ್ಲಿ ಈ ಬದಲಾವಣೆ ಹೇಗೆ ಸಾಧ್ಯ? ಮಾರನೇ ದಿನ ಮಗ ಡೈನಿಂಗ್ ಟೇಬಲ್ ಮುಂದೆ ಓದುತ್ತ ಕುಳಿತಿದ್ದ. ಸ್ವಲ್ಪವೂ ಅಲುಗಾಡಲಿಲ್ಲ. ಎದ್ದು ಹೋಗದೇ ಏಕಾಗ್ರತೆಯಿಂದ ಓದುತ್ತಿದ್ದ.

    ಆಗ ಅಪ್ಪನಿಗೊಂದು ಸತ್ಯ ತಿಳಿಯಿತು. ಮಗನಿಗೆ ಓದಿನಲ್ಲಿ ಆಸಕ್ತಿಯಿದೆ. ಆದರೆ ಧ್ಯಾನದ ಹೆಸರಿನಲ್ಲಿ ತಾನು ಅವನನ್ನು ನೆಲದ ಮೇಲೆ ಕೂರಿಸುತ್ತಿದ್ದ ವಿಧಾನ (ಚಕ್ಕಳಮಕ್ಕಳ) ಅವನಿಗೆ ಕಷ್ಟವಾಗುತ್ತಿತ್ತು. ಮೊಳಕಾಲಿನ ನೋವಾದಾಗಲೆಲ್ಲ ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದ. ಅದನ್ನು ನೋಡಿ ಅವನಿಗೆ ಏಕಾಗ್ರತೆ ಇಲ್ಲ ಎಂದು ಅಪ್ಪ ಭಾವಿಸಿದ್ದ.

    ಎರಡು ರೀತಿಯ ಮೋಟಿವೇಷನ್: ದೊಡ್ಡವರಿಗೆ ಬೇಕಾಗಿರುವುದು ಮಕ್ಕಳ ಯಶಸ್ಸು-ಅಷ್ಟೇ ಅಲ್ಲವೇ? ಅದಕ್ಕೇ ಎಷ್ಟೋ ಮಾರ್ಗಗಳಿರಬಹುದು. ಮಕ್ಕಳು ‘ಬೇರೊಂದು ಮಾರ್ಗ’ ಹಿಡಿದು ತಮ್ಮ ಗುರಿಯತ್ತ ಸಾಗಿದಾಗ ಹಿರಿಯರು ಗಮನಿಸುತ್ತಿರಬೇಕು. ತಮ್ಮ ದಾರಿಯಲ್ಲೇ ಸಾಗಬೇಕೆಂದು ಹೇಳಬಾರದು. ಒಳ್ಳೆಯದನ್ನು ಹೇಳಿದರೆ ಮಕ್ಕಳು ತಪ್ಪದೇ ಕೇಳುತ್ತಾರೆ. ಅವರಿಗೆ ಮಾತ್ರ ತಾವು ಚೆನ್ನಾಗಿ ಬದುಕಬೇಕೆಂದೂ, ಬದುಕಿನಲ್ಲಿ ಮೇಲೆ ಬರಬೇಕೆಂದೂ ಇರುವುದಿಲ್ಲವೇ? ಆದರೆ ‘ಅವರಿಗೇನು ಬೇಕು?’ ಎಂದು ಅವರ ದೃಷ್ಟಿಕೋನದಲ್ಲಿ ಯೋಚಿಸಬೇಕು, ನಮ್ಮ ದೃಷ್ಟಿಯಿಂದಲ್ಲ. ಹಾಗೆ ಯೋಚಿಸದೆ ಹೋದವರು ಮಾನಸಿಕ ಆರೋಗ್ಯಕ್ಕೆ ದೂರವಾಗುತ್ತಾರೆ. ಸೋಷಿಯಲ್ ಸ್ಕಿಲ್ಸ್ ಕಡಿಮೆಯಾಗುತ್ತವೆ. ಆಗ ಮಕ್ಕಳ ಗುಂಪಿನಲ್ಲಿ ಅವರು ಗೇಲಿಗೆ ಗುರಿಯಾಗುತ್ತಾರೆ. ದೃಢವಾಗಿರುವ ಮಕ್ಕಳು ಇವರನ್ನು ಡಾಮಿನೇಟ್ ಮಾಡುತ್ತ, ಸೇವೆ ಸ್ವೀಕರಿಸುತ್ತಾರೆ.

    ಆಂತರಿಕ ಮತ್ತು ಬಾಹ್ಯ ಎಂದು ಎರಡು ಬಗೆಯ ಮೋಟಿವೇಷನ್​ಗಳಿವೆ. ‘ನಿನ್ನ ರೂಂನ ಕ್ಲೀನ್ ಮಾಡಿ ಒದ್ದೆ ಬಟ್ಟೆಯಿಂದ ಒರೆಸು’ ಎಂದು ಒಬ್ಬ ತಾಯಿ ಹೇಳಿದಳು. ‘ಏಕೆ?’ ಎಂದು ಕೇಳಿದ ಹುಡುಗ. ‘ಯಾಕೇಂದ್ರೇನು? ನಾನು ಹೇಳಿದಷ್ಟು ಮಾಡು’ ಎಂದಳು ತಾಯಿ. ಇದು ಬಾಹ್ಯ ಮೋಟಿವೇಷನ್. ತಾಯಿ ಹೇಳಿದ್ದರಿಂದ ಆ ಕೆಲಸ ಮಾಡಿ ಓದುತ್ತ ಕುಳಿತ. ಅದರ ಬದಲು ತಾಯಿ ಅಂತಹ ವಾತಾವರಣದಲ್ಲಿ ಓದಿದರೆ ‘ನೀನು ಹೆಚ್ಚು ಓದಬೇಕಾಗಿಲ್ಲ. ಓದಿದ್ದು ಬೇಗ ತಲೆಗೆ ಹತ್ತುತ್ತದೆ. ಒಂದು ಸಾರಿ ಪ್ರಯತ್ನ ಮಾಡಿ ನೋಡು’ ಎಂದು ಹೇಳಿದ್ದರೆ ‘ಓದುವುದು ಬೇಗ ಮುಗಿಯುತ್ತದೆ’ ಎಂಬ ಸಂತೋಷದಲ್ಲಿ ಅಮ್ಮ ಹೇಳಿದ ಕೆಲಸವನ್ನು ಖುಷಿಯಿಂದ ಮಾಡುತ್ತಾನೆ. ಇದು ಆಂತರಿಕ ಮೋಟಿವೇಷನ್.

    ಒಳ್ಳೆಯ ತಂದೆ: ಮಕ್ಕಳನ್ನು ಗುರಿ ಮುಟ್ಟಿಸುವ ವಾಹನ ‘ಶಿಸ್ತು’ ಆದರೆ ಅದಕ್ಕೆ ಪೆಟ್ರೋಲ್ ‘ಪ್ರೀತಿ’. ದೇವರು ಎಲ್ಲ ಕಡೆಗೆ ಇರಲು ಸಾಧ್ಯವಿಲ್ಲದ್ದರಿಂದ ‘ಅಮ್ಮ’ನನ್ನು ಸೃಷ್ಟಿಸಿದ ಎಂದು ನಾಣ್ಣುಡಿಯಿದೆ. ಪ್ರತಿ ಜಾಗದಲ್ಲಿ ದೀಪವಿಟ್ಟು ದಾರಿ ತೋರಲು ಸಾಧ್ಯವಿಲ್ಲ. ಅದಕ್ಕೇ ‘ಅಪ್ಪ’ನನ್ನು ಸೃಷ್ಟಿ ಮಾಡಿದ-ಇದು ಹೊಸ ಗಾದೆ. ಅಮ್ಮ ಮಮತೆಯನ್ನು ತೋರಿದರೆ, ಅಪ್ಪ ಧೈರ್ಯ ಕೊಡುತ್ತಾನೆ. ಬೆನ್ನುಮೂಳೆ ಗಟ್ಟಿಯಾಗುವುದಕ್ಕೆ ಸಹಾಯ ಮಾಡುತ್ತಾನೆ.

    ಪ್ರೀತಿಯಿಂದ ಎಬ್ಬಿಸಿ, ಕಮಿಟ್​ವೆುಂಟ್​ನೊಂದಿಗೆ ಕೆಲಸಗಳನ್ನು ಮಾಡಿಸಿ, ಕಥೆ ಹೇಳಿ ನಿದ್ದೆ ಬರಿಸುವುದು ತಾಯಿಯಾದರೆ; ಮಾರ್ಗದರ್ಶಿಯಾಗಿ ಪ್ರಾರಂಭಿಸಿ, ಗುರುವಾಗಿ ಶಿಸ್ತು ಕಲಿಸಿ, ಮುಂದೆ ಸ್ನೇಹಿತನಾಗಿ ಬದಲಾಗಿ ತಿದ್ದುವುದು ಅಪ್ಪನ ‘ಹೊಣೆ’. ‘ಯಥಾ ರಾಜಾ ತಥಾ ಪ್ರಜಾ’ ಎಂದಿದ್ದಾರೆ. ಆದರೆ ಬಹಳ ಸಂದರ್ಭಗಳಲ್ಲಿ ‘ಯಥಾ ತಂದೆ, ತಥಾ ಮಗ’ ಅನಿಸುತ್ತದೆ. ತಂದೆ ಆಗುವುದು ಸುಲಭ. ಒಳ್ಳೆಯ ಮಕ್ಕಳಿಗೆ ತಂದೆಯಾಗುವುದು ಕಷ್ಟ. ಮನೆಯಲ್ಲಿ ಅಪ್ಪ ಚೆನ್ನಾಗಿದ್ದರೆ ಐನ್​ಸ್ಟೀನ್​ಗಳು, ಅಮ್ಮ ಚೆನ್ನಾಗಿದ್ದರೆ ಆನಿ ಬೆಸೆಂಟ್​ಗಳು ಸೃಷ್ಟಿಯಾಗುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts