More

    ಕರೊನಾ ಲಸಿಕೆ ಅಗತ್ಯವಿದೆಯೇ ಎಂದು ಪ್ರಶ್ನಿಸಿ ಟೀಕೆಗೆ ಗುರಿಯಾದ ಕ್ರಿಕೆಟಿಗ ಹರ್ಭಜನ್ ಸಿಂಗ್

    ನವದೆಹಲಿ: ಕರೊನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸಿರುವ ಇಡೀ ಜಗತ್ತು ಈಗ ಅದರ ವಿರುದ್ಧ ಗೆಲುವು ದಾಖಲಿಸಲು ಲಸಿಕೆಯ ನಿರೀಕ್ಷೆಯಲ್ಲಿದೆ. ಆದರೆ ಈ ನಡುವೆ, ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಕೋವಿಡ್-19 ಲಸಿಕೆಯ ಅಗತ್ಯವಿದೆಯೇ ಎಂದು ಟ್ವಿಟರ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ. ಅದರ ಬೆನ್ನಲ್ಲಿಯೇ ಅವರು ನೆಟ್ಟಿಗರಿಂದ ಕಟುವಾದ ಟೀಕೆಗಳಿಗೂ ಗುರಿಯಾಗಿದ್ದಾರೆ.

    ಫೈಜರ್, ಬಯೋಟೆಕ್, ಮೋಡರ್ನಾ ಮತ್ತು ಆಕ್ಸ್​ಫರ್ಡ್ ಲಸಿಕೆಯ ಪರಿಣಾಮಕಾರಿಯ ಶೇಕಡಾವಾರು ಯಶಸ್ಸಿನ ಜತೆಗೆ ಭಾರತದಲ್ಲಿನ ಕರೊನಾ ಸೋಂಕಿತರ ಚೇತರಿಕೆಯ ಶೇಕಡವನ್ನು ಹೋಲಿಕೆ ಮಾಡಿರುವ ಹರ್ಭಜನ್ ಸಿಂಗ್, ದೇಶದಲ್ಲಿ ಕರೊನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಿರುವುದರಿಂದ ಲಸಿಕೆಯ ಅಗತ್ಯವಿಲ್ಲ. ಬದಲಾಗಿ ವೈರಸ್ ವಿರುದ್ಧ ಹೆಚ್ಚಿನ ಇಮ್ಯೂನಿಟಿ ಅಗತ್ಯವಿದೆ ಎಂಬ ವಾದ ಮಂಡಿಸಿದ್ದಾರೆ.

    ‘ಫೈಜರ್ ಮತ್ತು ಬಯೋಟೆಕ್ ಲಸಿಕೆ: ಶೇ. 94 ಪರಿಣಾಮಕಾರಿ, ಮೋಡರ್ನಾ ಲಸಿಕೆ: ಶೇ. 94.5 ಪರಿಣಾಮಕಾರಿ, ಆಕ್ಸ್​ಫರ್ಡ್ ಲಸಿಕೆ ಶೇ. 90 ಪರಿಣಾಮಕಾರಿ; ಭಾರತದಲ್ಲಿ ಲಸಿಕೆ ಇಲ್ಲದೆ ಚೇತರಿಕೆ: ಶೇ. 93.6; ಹೀಗಾಗಿ ನಮಗೆ ನಿಜಕ್ಕೂ ಲಸಿಕೆಯ ಅಗತ್ಯವಿದೆಯೇ?’ ಎಂದು ಹರ್ಭಜನ್ ಸಿಂಗ್ ಗುರುವಾರ ಟ್ವೀಟಿಸಿದ್ದರು. ಇದರ ಬೆನ್ನಲ್ಲೇ ಅವರ, ಬೇಜವಾಬ್ದಾರಿಯ ಟ್ವೀಟ್‌ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

    ಇಂಥ ಹುಡುಗಾಟದ ಟ್ವೀಟ್ ಬಗ್ಗೆ ಹರ್ಭಜನ್ ವಿರುದ್ಧ ಟೀಕೆಗಳನ್ನು ಮಾಡಿರುವ ನೆಟ್ಟಿಗರು, ‘ಶೇ. 93.6 ಚೇತರಿಕೆ ಅಂದರೆ, ಶೇ. 6.4 ಮಂದಿ ಸಾಯುತ್ತಿದ್ದಾರೆ. ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದರೆ ಶೇ. 6.4ರಷ್ಟು ಜನರು ಸಾಯದಿರುವ ಸಾಧ್ಯತೆ ಶೇ. 95ರಷ್ಟು ಇರುತ್ತದೆ’ ಎಂದು ಹೇಳಿದ್ದಾರೆ.

    ಕ್ರಿಕೆಟ್ ಮೈದಾನದಲ್ಲಿ ಕೇವಲ ಓರ್ವ ಬ್ಯಾಟ್ಸ್‌ಮನ್ ಸತ್ತಿದ್ದಕ್ಕೆ ಕ್ರಿಕೆಟಿಗರು ಹೆಲ್ಮೆಟ್, ಗಾರ್ಡ್‌ಗಳನ್ನು ಧರಿಸುವ ಅಗತ್ಯವಿದೆಯೇ ಎಂದು ಇನ್ನು ಕೆಲವರು ಹರ್ಭಜನ್‌ರನ್ನು ಟ್ರೋಲ್ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನಾಯಕ ಎಂಎಸ್ ಧೋನಿ ನಿಮಗೆ ಬದಲಾಗಿ ಜೋಗಿಂದರ್ ಶರ್ಮಗೆ ಕೊನೆಯ ಓವರ್ ಯಾಕೆ ನೀಡಿದರು ಎಂದು ಈಗ ಗೊತ್ತಾಗುತ್ತಿದೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, ಈಗ ಶ್ರೀಶಾಂತ್ ನಿಮಗೆ ಕಪಾಳಮೋಕ್ಷ ಮಾಡುವ ಸಮಯ ಬಂದಿದೆ ಎಂದಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts