More

    ಹಾಲಕೆರೆ ಅಜ್ಜನ ಅಕ್ಷರ ಜಾತ್ರೆ 13ರಿಂದ

    ನರೇಗಲ್ಲ: ಸಮೀಪದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ 173ನೇ ಜಾತ್ರಾ ಮಹೋತ್ಸವ ಜ.13, 14ರಂದು ಜರುಗಲಿದೆ ಎಂದು ಶ್ರೀ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

    ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ ನೀಡಲು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಾಲೆಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠಕ್ಕೆ 600 ವರ್ಷಗಳ ಇತಿಹಾಸವಿದೆ. ಶ್ರೀ ಮಠದ ಪರಂಪರೆಯಲ್ಲಿ ಎಲ್ಲ ಪೂಜ್ಯರು ಅನ್ನದಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಜ್ಞಾನದಾನ ಮಾಡಿ ಭಕ್ತರನ್ನು ಧರ್ಮನಿಷ್ಠರನ್ನಾಗಿಸಲು ತಮ್ಮ ಪೂಜಾಶಕ್ತಿ, ತಪಃಶಕ್ತಿಗಳನ್ನು ಧಾರೆಯರೆದರು. ಸ್ವಾತಂತ್ರ್ಯೂರ್ವದಲ್ಲಿಯೇ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣವೆಂಬುದು ಮರೀಚಿಕೆಯಾಗಿ, ಶಿಕ್ಷಣ ಎಲ್ಲರಿಗೂ ದುಸ್ತರವಾದ ಸಂದರ್ಭದಲ್ಲಿ (1913) ಲಿಂ.ಗುರು ಅನ್ನದಾನ ಶ್ರೀಗಳು ಧರ್ಮಪ್ರಸಾರದೊಂದಿಗೆ ಸಮಾಜದ ಸರ್ವಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.

    ವಿದ್ಯೆಯ ಜತೆಗೆ ಅನ್ನ, ಆಶ್ರಯಗಳನ್ನು ಜಾತಿ-ಮತ- ಪಂಥ ಎಣಿಸದೆ ಸರ್ವಜನಾಂಗದ ಏಳಿಗೆಗಾಗಿ ಉಚಿತವಾಗಿ ನೀಡುವ ಮೂಲಕ ಈ ಭಾಗದ ಶೈಕ್ಷಣಿಕ ರಂಗದ ಹೆಬ್ಬಾಗಿಲು ಎನ್ನಿಸಿಕೊಂಡಿದೆ. ಲಿ.ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಅಕ್ಷರ ಕಲಿಕೆಯ ವ್ಯವಸ್ಥೆಯನ್ನು ಗುಣಾತ್ಮಕ ಶಿಕ್ಷಣವನ್ನಾಗಿಸಿದರು. ಧರ್ಮ- ಶಿಕ್ಷಣ-ಸಮಾಜ-ಪ್ರಕೃತಿ ಸಂರಕ್ಷಣೆ ಈ ನಾಲ್ಕು ಕ್ಷೇತ್ರಗಳಲ್ಲಿ ಸುಧಾರಣೆ, ಬದಲಾವಣೆ ತರುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ನೂರಾರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯುತ್ತಿದ್ದು, ಜಾತ್ರೆ ಎಂದರೆ ಕೇವಲ ಡೊಳ್ಳು-ಕುಣಿತ, ಮೋಜು-ಮಜಲಿಗೆ ಸೀಮಿತಗೊಳಿಸದೆ ಜಾತ್ರೆಯನ್ನು ಜಾಗೃತಿ ಉತ್ಸವಗಳನ್ನಾಗಿಸಿದ ಶ್ರೇಯಸ್ಸು ಲಿಂ. ಅಭಿನವ ಅನ್ನದಾನ ಶ್ರೀಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

    ಸುಸ್ಥಿರ, ಸಮೃದ್ಧ ಭಾರತ, ಸ್ವಚ್ಛಭಾರತ, ಆರೋಗ್ಯ ಭಾರತ, ಸ್ವಾವಲಂಬಿ ಭಾರತದ ಪರಿಕಲ್ಪನೆಯನ್ನು ಈ ’ಅಕ್ಷರ’ ಜಾತ್ರೆಯು ಒಳಗೊಂಡಿದೆ. 173ನೇ ಜಾತ್ರಾ ಮಹೋತ್ಸವ ಹಿನ್ನೆಲೆ 13, 14ರಂದು ಜರುಗುವ ವಿನೂತನ ‘ಹಾಲಕೆರೆ ಅಜ್ಜನ ಅಕ್ಷರ ಜಾತ್ರೆಯಲ್ಲಿ’ ಸಾವಿರಾರು ವಿದ್ಯಾರ್ಥಿಗಳೊಂದಿಗೆ ರೈತರು, ಸಮಾಜದ ಹಿತಚಿಂತಕರು, ಬುದ್ಧಿಜೀವಿಗಳು ಮಾರ್ಗದರ್ಶನ ಮಾಡಲಿದ್ದಾರೆ. ಈ ಜಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕು ಎಂದರು.

    ಜಾತ್ರಾ ಮಹೋತ್ಸವದ ಪ್ರಚಾರಪತ್ರ ಬಿಡುಗಡೆ ಮಾಡಲಾಯಿತು. ಎಸ್​ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಎಂ.ವಿ. ವೀರಾಪುರ, ಎಂ.ವಿ. ಬಿಂಗಿ, ರಾಜಶೇಖರಗೌಡ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಗೇರ, ಹೊನ್ನಪ್ಪಗೌಡ್ರ ಪೊಲೀಸ್​ಪಾಟೀಲ, ಶರಣಪ್ಪ ಕರಮುಡಿ, ಅಶೋಕ ಮಾಳಗೌಡ್ರ, ಬಸವರಾಜ ಕೆಂಚರೆಡ್ಡಿ, ಹನಮರಡ್ಡಿ ಹಳ್ಳಿ, ಬಸವರಾಜ ಮೇಟಿ ಸೇರಿ ಮಠದ ಭಕ್ತರು ಇದ್ದರು. ಉಪನ್ಯಾಸಕ ಎಫ್.ಎನ್. ಹುಡೇದ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts