More

    ಮೂಲಸೌಕರ್ಯ ಒದಗಿಸುವಂತೆ ಆಗ್ರಹ

    ಹನೂರು : ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಜತೆಗೂಡಿ ಭಾನುವಾರ ರಸ್ತೆ ಸಂಚಾರ ತಡೆ ಹಾಗೂ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದರು.

    ಮ.ಬೆಟ್ಟ ತಪ್ಪಲಿನ ಕಾಡಂಚಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು ಹಾಗೂ ರೈತರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮ.ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುವ ಚೆಕ್‌ಪೋಸ್ಟ್‌ನಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅರಣ್ಯ ಇಲಾಖೆ ಕಚೇರಿ ಮುಂಭಾಗ ಆಗಮಿಸಿ ಪ್ರತಿಭಟನೆ ನಡೆಸಿದರು.

    ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮ.ಬೆಟ್ಟದ ಸುತ್ತಮುತ್ತಲಿನ ಕಾಡಂಚಿನ ಗ್ರಾಮದ ಜನರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು ಹಾಗೂ ಇನ್ನಿತರೆ ಮೂಲಸೌಕರ್ಯ ಕಲ್ಪಿಸಿಲ್ಲ. ಇದರಿಂದ ಇಲ್ಲಿನ ಜನರು ಕಷ್ಟದ ನಡುವೆ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸಬೇಕಾಗಿದೆ. ಮೂಲಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಕಳೆದ ವರ್ಷ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದ ವೇಳೆ ಅಧಿಕಾರಿಗಳು ಅಗತ್ಯ ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಲ್ಲ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಿ ಲೋಕಸಭೆ ಚುನಾವಣೆಗೂ ಮುನ್ನ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಕಲ್ಪಿಸಬೇಕು. ಇನ್ನು ಮ.ಬೆಟ್ಟದಿಂದ ಕಾಡಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳೆಯೂರಿನ ಬಳಿ ಇರುವ ಅರಣ್ಯ ಇಲಾಖೆಯ ಗೇಟ್ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವೆ ತೆರೆವುಗೊಳಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಎಸಿಎಫ್ ಚಂದ್ರಶೇಖರ್ ಪಾಟೀಲ್ ಮಾತನಾಡಿ, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರು ಸೌಕರ್ಯವನ್ನು ಕಲ್ಪಿಸಬೇಕಾದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ. ಆದರೆ, ಅಧಿಕಾರಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದಿರುವುದು ಮುಖ್ಯ ಕಾರಣ. ಆದರೆ, ಅರಣ್ಯ ಇಲಾಖೆ ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು ಎಂದರು. ಇದನ್ನೊಪ್ಪದ ಗ್ರಾಮಸ್ಥರು ಹಾಗೂ ರೈತರು ಇಲ್ಲಿಂದ ತೆರಳಿ ಗ್ರಾಪಂ ಕಚೇರಿ ಮುಂಭಾಗ ಧರಣಿ ಕುಳಿತಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

    ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಪುಟ್ಟಪ್ಪ, ರವಿ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts