More

    ತೆಂಕಹಳ್ಳಿ ಶ್ರೀ ಶನೈಶ್ಚರಸ್ವಾಮಿ 26ನೇ ವರ್ಷದ ಜಾತ್ರೆ ವೈಭವ

    ಮಳವಳ್ಳಿ: ತಾಲೂಕಿನ ತೆಂಕಹಳ್ಳಿ ಸಮೀಪದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶನಿವಾರ 26ನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.


    ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗಿನಿಂದ ದೇವಸ್ಥಾನದ ಆವರಣದ ಗರ್ಭಗುಡಿಯಲ್ಲಿರುವ ಶ್ರೀ ಶನೈಶ್ಚರ, ಮಹಾಗಣಪತಿ, ಆಂಜನೇಯಸ್ವಾಮಿ ಮೂರ್ತಿಗಳಿಗೆ ಅಭಿಷೇಕ, ಹೋಮ, ಹವನಗಳನ್ನು ಆಗಮಿಕರ ತಂಡದಿಂದ ನೆರವೇರಿಸಲಾಯಿತು.


    ಶನಿವಾರ ಶೋಭಕೃತ್ ನಾಮಸಂವತ್ಸರ ಉತ್ತರಾಯಣೇ ಪಾಲ್ಗುಣ ಮಾಸ ಶುಕ್ಲ ಸಪ್ತಮಿ ಸಮಯದಲ್ಲಿ ಶನೈಶ್ಚರಸ್ವಾಮಿಗೆ ಪ್ರಧಾನ ಅರ್ಚಕ ನಂಜುಂಡಸ್ವಾಮಿ ನೇತೃತ್ವದಲ್ಲಿ ವಿಶೇಷ ಅಭಿಷೇಕ, ಪೂಜೆಗಳು ನಡೆದವು. ನಂತರ ಸನ್ನಿಧಾನದಲ್ಲಿ ಮಂಗಳವಾದ್ಯದೊಡನೆ ಹಾಲರವಿಯೊಂದಿಗೆ ಸ್ವಾಮಿಯ ಉತ್ಸವಮೂರ್ತಿ ಮತ್ತು ಬಸಪ್ಪನ ಮೆರವಣಿಗೆ ನಡೆಸಲಾಯಿತು.


    ವೀರಗಾಸೆ, ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಸಾಗಿತು. ದೇವಸ್ಥಾನದ ಆವರಣದಲ್ಲಿ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಹರಿಕಥಾ ವಾಚಕ ಶಿವಕುಮಾರ ಶಾಸ್ತ್ರಿ ನೇತೃತ್ವದ ತಂಡದವರು ಜಾನಪದ ಮತ್ತು ಭಕ್ತಿಗೀತೆಗಳನ್ನು ಹಾಡುವ ಮೂಲಕ ನೆರೆದವರು ಭಕ್ತಿಪರವಶರಾಗುವಂತೆ ಮಾಡಿದರು.


    ರಾತ್ರಿ ಕೊಳ್ಳೇಗಾಲ ವೆಂಕಟೇಶ್ವರ ಡ್ರಾಮಾ ಸೀನರಿಯಲ್ಲಿ ಮೈಸೂರಿನ ನಾದಸಂಗಮ ಕಲಾ ಸಂಘ ಕಲಾವಿದರಿಂದ ಬಬ್ರುವಾಹನ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.


    ತಾಲೂಕು ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ನೆರೆದ ಸಮೂಹಕ್ಕೆ ದೇವಸ್ಥಾನದ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts