More

    ಹುಳುಮಿಶ್ರಿತ ಅಡುಗೆಗೆ ಕಾರಣರಾದವರ ವಿರುದ್ಧ ಕ್ರಮ

    ಎಚ್.ಡಿ.ಕೋಟೆ: ಪಟ್ಟಣದ ಆದರ್ಶ ಶಾಲೆಯಲ್ಲಿ ಸೋಮವಾರ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ಮಾತನಾಡಿದ ಅವರು, ಹುಳುಮಿಶ್ರಿತ ಅಡುಗೆ ಮಾಡಲು ಕಾರಣರಾದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

    ಬೇಳೆ, ಅಕ್ಕಿಯಲ್ಲಿ ಹುಳು: ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳ ಜತೆ ಶಾಲೆಗೆ ಬಂದ ಜಿಲ್ಲಾಧಿಕಾರಿ ಸುಮಾರು 2 ತಾಸಿಗೂ ಅಧಿಕ ಕಾಲ ಪರಿಶೀಲನೆ ನಡೆಸಿ, ಅಲ್ಲಿನ ಸಿಬ್ಬಂದಿ ಹಾಗೂ ಮಕ್ಕಳಿಂದ ಮಾಹಿತಿ ಪಡೆದರು. ಆಹಾರ ಶೇಖರಣಾ ಕೊಠಡಿಗೆ ಭೇಟಿ ಕೊಟ್ಟಾಗ ಅಲ್ಲಿ ಬೇಳೆ ಹಾಗೂ ಅಕ್ಕಿಯಲ್ಲಿ ಹುಳು ಹಾಗೂ ಅವಧಿ ಮೀರಿದ ಹಾಲಿನ ಪೌಡರ್ ಕಂಡಬಂತು.

    ಬಳಿಕ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘ಇಷ್ಟೊಂದು ಹುಳುಗಳು ಇರುವ ಆಹಾರ ಪದಾರ್ಥಗಳನ್ನು ಯಾಕೆ ಅಡುಗೆಗೆ ಬಳಸುತ್ತಿದ್ದೀರಾ? ಮತ್ತು ಅವಧಿ ಮೀರಿದ ಹಾಲಿನ ಪೌಡರ್ ಏಕೆ ಇಟ್ಟುಕೊಂಡಿದ್ದೀರಾ’ ಎಂದು ಕಿಡಿಕಾರಿದರು.
    ನಂತರ ಅಡುಗೆ ಕೋಣೆಗೆ ತೆರಳಿ ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ‘ಬೇಳೆಕಾಳುಗಳಲ್ಲಿ ಹುಳುಗಳು ಇರುವ ಬಗ್ಗೆ ಮುಖ್ಯಶಿಕ್ಷಕರ ಗಮನಕ್ಕೆ ತರಲಾಗಿತ್ತು. ಆದರೆ ಅವರು ಅದನ್ನು ಶುಚಿಗೊಳಿಸಿ ಬಳಸುವಂತೆ ತಿಳಿಸಿದ್ದರು’ ಎಂದು ಹೇಳಿದರು. ನಂತರ ಏಳನೇ ತರಗತಿ ಕೊಠಡಿಗೆ ತೆರಳಿ, ಪ್ರಕರಣದ ಕುರಿತು ಮಕ್ಕಳಿಂದ ಮಾಹಿತಿ ಪಡೆದರು.

    ಪಾಲಕರೊಂದಿಗೆ ಸಭೆ: ನಂತರ ಜಿಲ್ಲಾಧಿಕಾರಿ ಪಾಲಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಪಾಲಕರಾದ ಸುರೇಂದ್ರ, ಮಹೇಶ್ ಮಾತನಾಡಿ, ಶಾಲೆಯಲ್ಲಿ ಮೊದಲಿನಿಂದಲೂ ಅಡುಗೆಗೆ ಕಳಪೆ ಆಹಾರ ಪದಾರ್ಥ ಬಳಸಲಾಗುತ್ತಿದೆ. ಇಲ್ಲಿನ ರುಚಿಕರ ಊಟ ನೀಡುತ್ತಿಲ್ಲ ಹಾಗೂ ವಾರಕ್ಕೊಮ್ಮೆ ತರಕಾರಿ ತಂದು ವಾರಪೂರ್ತಿ ಅಡುಗೆಗೆ ಅದನ್ನು ಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ನಮ್ಮ ಮಕ್ಕಳು ಮನೆಗೆ ಬಂದಾಗ ದೂರು ಹೇಳುತ್ತಿದ್ದರು. ಈ ಬಗ್ಗೆ ಶಾಲೆಗೆ ಭೇಟಿ ನೀಡಿ ತಿಳಿವಳಿಕೆ ನೀಡಿದ್ದರೂ ಬದಲಾವಣೆ ಮಾಡಿಕೊಳ್ಳದೆ ಸಿಬ್ಬಂದಿ ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.

    ನಂತರ ಸ್ಟಾಕ್ ಪುಸ್ತಕ ಪರಿಶೀಲನೆ ನಡೆಸಿದಾಗ ಡಿಸೆಂಬರ್ ತಿಂಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಜನವರಿ ತಿಂಗಳಲ್ಲಿ ಬಳಕೆ ಮಾಡಿರುವುದು ಕಂಡುಬಂತು. ಶಾಲೆಯಲ್ಲಿ ಶುಚಿತ್ವ ಕಾಪಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸದಸ್ಯ ವೆಂಕಟಸ್ವಾಮಿ, ಹುಣಸೂರು ಉಪವಿಭಾಗಾಧಿಕಾರಿ ವೀಣಾ, ಡಿಡಿಪಿಐ ಪಾಂಡುರಂಗ, ತಹಸೀಲ್ದಾರ್ ಆರ್.ಮಂಜುನಾಥ್, ಇಒ ರಾಮಲಿಂಗಯ್ಯ, ಬಿಇಒ ರೇವಣ್ಣ, ಡಾ.ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ವಿಜಯ್ ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಎಂ.ನಾಯಕ್, ಅಕ್ಷರ ದಾಸೋಹ ಎಡಿ ಸಿದ್ದರಾಜು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್ ಇದ್ದರು.

    ಆಸ್ಪತ್ರೆಯಿಂದ ಮಕ್ಕಳು ಬಿಡುಗಡೆ: ಹುಳುಮಿಶ್ರಿತ ಆಹಾರ ಸೇವಿಸಿ ಅಸ್ವಸ್ಥಗೊಂಡ 30ಕ್ಕೂ ಹೆಚ್ಚು ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೆಲ್ಲರೂ ಚೇತರಿಸಿಕೊಂಡು ಸೋಮವಾರ ರಾತ್ರಿಯೇ ಮನೆಗೆ ತೆರಳಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರು ಮಕ್ಕಳನ್ನು ಕೆ.ಆರ್.ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಇವರಲ್ಲಿ ವಿದ್ಯಾರ್ಥಿನಿ ಸುಜಾತಾ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನೊಬ್ಬ ಬಾಲಕ ಗುಣಮುಖನಾಗುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts