More

    ಗಾಯರಾಣ ಜಮೀನಲ್ಲೂ ಗಣಿಗಾರಿಕೆ!

    ಬೆಳಗಾವಿ: ಗಡಿಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ‘ಲಂಚದಾಸೆ’ಯಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಆಳ, ಬಗೆದಷ್ಟೂ ಹೆಚ್ಚುತ್ತಲೇ ಇದೆ..! ನಿಯಮ ಪಾಲನೆಯಾಗದಿದ್ದರೂ ತಮ್ಮ ಜೇಬು ತುಂಬಿಸಿಕೊಳ್ಳಲೆಂದೇ ಪರವಾನಗಿ ನವೀಕರಿಸುತ್ತಿರುವ ಅಧಿಕಾರಿಗಳು, ಸತತ ಹತ್ತು ವರ್ಷಗಳಿಂದ ತಹಸೀಲ್ದಾರರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ.

    ಅಧಿಕಾರಿಗಳು ಸರ್ಕಾರಿ ಗಾಯರಾಣ ಜಮೀನಿನಲ್ಲಿಯೂ ಖಾಸಗಿ ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರಕರಣ ಮಾಹಿತಿ ಹಕ್ಕಿನಿಂದ ಬಯಲಾಗಿದೆ.

    ಗೋಕಾಕ ತಾಲೂಕಿನ ಕೌಜಲಗಿ ಹೋಬಳಿಯ ಬಿಲಕುಂದಿ ಗ್ರಾಮದ ಸರ್ವೇ ನಂ. 02ರಲ್ಲಿ 113.25 ಎಕರೆ ಗಾಯರಾಣ ಜಮೀನು ಇದೆ. ಈ ಜಮೀನನಲ್ಲಿಯೇ ಹಲವು ವರ್ಷದಿಂದ ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರಿ ಜಮೀನು ಯಾವುದಕ್ಕೆಲ್ಲ ಬಳಕೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಹೊಂದಿರಬೇಕಿದ್ದ ಕಂದಾಯ ಇಲಾಖೆಯ ದಾಖಲೆಗಳು, ಗಾಯರಾಣ ಜಮೀನಿನಲ್ಲಿ ಗಣಿಗಾರಿಕೆ ನಡೆಯುವುದರಲಿ, ಯಾರೂ ಒತ್ತುವರಿ ಸಹ ಮಾಡಿಲ್ಲ ಎಂದು ದೃಢಪಡಿಸುತ್ತಿವೆ.

    ಸರ್ಕಾರಿ ಕಾಮಗಾರಿಗಳಿಗೆ ಬಳಕೆ: ಗಾಯರಾಣ ಜಮೀನುಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿಚಾರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾ ಉಪನಿರ್ದೇಶಕರು ನೀಡಿರುವ ಮಾಹಿತಿಯಂತೆ, ಆ ಪ್ರದೇಶದಲ್ಲಿ 6 ಗಣಿಗಾರಿಕೆ ನಡೆಯುತ್ತಿದೆ. ಅವುಗಳಿಂದಲೇ ಜಿಲ್ಲೆಯಲ್ಲಿ ಅತಿಹೆಚ್ಚು ಗಣಿಗಾರಿಕೆ ಉತ್ಪನ್ನದ ಮಾರಾಟ ನಡೆಯುತ್ತಿದ್ದು, ಅಥಣಿ ಹಾಗೂ ಚಿಕ್ಕೋಡಿ ಪ್ರದೇಶ ಎಲ್ಲ ಸರ್ಕಾರಿ ಕಾಮಗಾರಿಗಳಿಗೆ ಬಳಸಲಾಗುತ್ತಿದೆ.

    ಜನಪ್ರತಿನಿಧಿಗಳ ಒತ್ತಡ?: ‘ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳು ಕಣ್ಣಿಗೆ ಕಾಣುವಂತೆ ಕಾಗದಗಳಲ್ಲಿಲ್ಲ. ದಾಖಲೆಗಳಿರುವಂತೆ ಕಣ್ಣಿಗೂ ಕಾಣುತ್ತಿಲ್ಲ. ಆದರೆ, ಅವೆಲ್ಲವನ್ನೂ ಪ್ರಶ್ನಿಸಬೇಕಿದ್ದ ಜನಪ್ರತಿನಿಧಿಗಳು ಮೌನ ವಹಿಸಿರುವುದೇಕೆ?’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಪ್ರತಿಕ್ರಿಯೆಗೆ ನಕಾರ: ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿ, ಸಂಘ-ಸಂಸ್ಥೆಗಳು ಹಾಗೂ ಸರ್ಕಾರದ ವಸತಿ ಯೋಜನೆ ಮತ್ತು ಇನ್ನಿತರ ಯಾವುದೇ ಇಲಾಖೆಯೂ ಸಹ ಜಮೀನು ಬಳಸಿಕೊಳ್ಳಬೇಕೆಂದರೂ ಮೊದಲು ಸಂಬಂಧಿಸಿದ ತಹಸೀಲ್ದಾರ್‌ರಿಗೆ ಎನ್‌ಒಸಿಗಾಗಿ ಅರ್ಜಿ ಸಲ್ಲಿಸಬೇಕು. ಎನ್‌ಒಸಿ ದೊರೆತ ಬಳಿಕವೇ ಉಲ್ಲೇಖಿಸಿದ ಕಾರಣಕ್ಕೆ ಮಾತ್ರ ಬಳಸಿಕೊಳ್ಳಬೇಕು. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಳೆದ 10 ವರ್ಷದಿಂದಲೂ ಗಣಿಗಾರಿಕೆಗೆ ಅನುಮತಿ ನೀಡುತ್ತಿದ್ದು, ಇದು ಕಾನೂನುಬಾಹಿರ ಎನ್ನುತ್ತಾರೆ ತಹಸೀಲ್ದಾರ್ ಕಚೇರಿ ಸಿಬ್ಬಂದಿ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಉಮೇಶ ಬಗರಿ ಅವರನ್ನು ಸಂಪರ್ಕಿಸಿದರೆ, ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

    ಅಧಿಕಾರಿಗಳಿಂದಲೇ ದ್ವಂದ್ವ ಮಾಹಿತಿ: ಗೋಕಾಕ ತಹಸೀಲ್ದಾರ್ ನೀಡಿರುವ ಅಧಿಕೃತ ಮಾಹಿತಿಯಂತೆ, ಬಿಲಕುಂದಿ ಗ್ರಾಮದ ಸರ್ವೇ ನಂಬರ್ 02ರಲ್ಲಿ 113.25 ಎಕರೆ ಗಾಯರಾಣ ಜಮೀನಿನಲ್ಲಿ ಒಂದು ಗುಂಟೆ ಜಾಗವನ್ನೂ ಯಾವುದೇ ಖಾಸಗಿ ವ್ಯಕ್ತಿ ಹಾಗೂ ಸಂಘ-ಸಂಸ್ಥೆಗಳು ಮತ್ತು ಸರ್ಕಾರದ ಯಾವುದೇ ವಸತಿ ಯೋಜನೆಗಳಿಗೂ ಮಂಜೂರು ಮಾಡಿಲ್ಲ. ಜತೆಗೆ ಖಾಸಗಿಯವರಿಂದ ಅತಿಕ್ರಮಣ ಆಗಿರುವ ಬಗ್ಗೆಯೂ ದಾಖಲೆಗಳಿಲ್ಲ ಎಂದಿದ್ದಾರೆ. ಇನ್ನು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು ನೀಡಿರುವ ದಾಖಲೆಗಳ ಪ್ರಕಾರ, ಸರ್ವೇ ನಂ. 02ರಲ್ಲಿ ಒಟ್ಟು 6 ಮಾಲೀಕರಿಗೆ ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. 1509, 1566, 1603, 1609, 1751 ಹಾಗೂ 1752 ಹೀಗೆ 6 ಗುತ್ತಿಗೆ ಸಂಖ್ಯೆ ಪಡೆದು ಗಣಿಗಾರಿಕೆ ನಡೆಯುತ್ತಿದೆ ಎಂದು ದೃಢಪಡಿಸಿದ್ದಾರೆ.

    ತಹಸೀಲ್ದಾರರು ಸರ್ಕಾರಿ ಜಮೀನಲ್ಲಿ ಯಾವುದೇ ಗಣಿಗಾರಿಕೆಗೆ ನಡೆಯುತ್ತಿಲ್ಲ ಹಾಗೂ ಅತಿಕ್ರಮಣವೂ ಆಗಿಲ್ಲ ಎಂದು ಅಧಿಕೃತ ಮಾಹಿತಿ ನೀಡಿದ್ದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಲ್ಲಿ 6 ಜನರಿಗೆ ಗಣಿಗಾರಿಕೆ ಪರವಾನಗಿ ನೀಡಿದ್ದೇವೆ ಎನ್ನುತ್ತಾರೆ. ಈ ಬಗ್ಗೆ ಇಲಾಖೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿ, ಸರ್ಕಾರಿ ಸುತ್ತೋಲೆಗಳನ್ನು ಮರೆಮಾಚಿ ನಕಲಿ ದಾಖಲೆಗಳ ಸೃಷ್ಟಿಸಿದವರ ವಿರುದ್ಧ ಕ್ರಮ ಜರುಗಿಸಬೇಕು.
    | ಭೀಮಪ್ಪ ಗಡಾದ ಮಾಹಿತಿ ಹಕ್ಕು ಕಾರ್ಯಕರ್ತ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts