More

    ಜಿಲ್ಲೆಯಲ್ಲಿ 439 ಗುಡ್ಡ ಕುಸಿತ ಪ್ರದೇಶಗಳು

    ಕಾರವಾರ: ಜಿಲ್ಲೆಯ ಕೊಡಸಳ್ಳಿ ಹಾಗೂ ಕಳಚೆ ಭಾಗದಲ್ಲಿ ವಿಸ್ತ್ರತ ಅಧ್ಯಯನ ನಡೆಸಲು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಜಿಎಸ್‌ಐ) ಸಿದ್ಧತೆ ನಡೆಸಿದೆ.
    2019 ಹಾಗೂ 2021 ರಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಯಲ್ಲಾಪುರ ತಾಲೂಕಿನ ಕಳಚೆ ಎಂಬ ಒಂದು ಊರೇ ಸರ್ವನಾಶವಾಗಿತ್ತು. ಕೊಡಸಳ್ಳಿ ಅಣೆಕಟ್ಟೆಯ ಇಕ್ಕೆಲಗಳಲ್ಲೂ ಕುಸಿತವಾಗಿತ್ತು.
    ಘಟನೆ ನಡೆದ ತಿಂಗಳ ಬಳಿಕ ಭೇಟಿ ನೀಡಿದ್ದ ಜಿಎಸ್‌ಐ ಭೂಗರ್ಭ ಶಾಸ್ತ್ರಜ್ಞರು ಕೆಲ ತಿಂಗಳ ಬಳಿಕ ಪ್ರಾಥಮಿಕ ವರದಿ ನೀಡಿದ್ದರು. ಇನ್ನೊಮ್ಮೆ ಹೊನ್ನಾವರ, ಭಟ್ಕಳ ಹಾಗೂ ಇತರೆಡೆಯೂ ಭೇಟಿ ನೀಡಿ ಪರಿಶೀಲನೆ ನಡೆಸಿ 2023 ರ ಜನವರಿಯಲ್ಲಿ ವರದಿ ನೀಡಿದ್ದರು. ವಿಸ್ತ್ರತ ಅಧ್ಯಯನ ಮಾಡಿ ವರದಿ ನೀಡುವಂತೆ ಜಿಲ್ಲಾಡಳಿತ ಜಿಎಸ್‌ಐ ಗೆ ಮನವಿ ಮಾಡಿತ್ತು.

    ಇದನ್ನೂ ಓದಿ:ತಾಯಿ ಭುವನೇಶ್ವರಿಗೆ ಚರಂಡಿ ನೀರಿನ ಅಭಿಷೇಕ!!
    ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಡಸಳ್ಳಿ ಅಣೆಕಟ್ಟೆಯ ಭಾಗ ಹಾಗೂ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ತಲಾ 10 ಚರದ ಕಿಮೀ ವಿಸ್ತೀರ್ಣದ ಸ್ಥಳ ಗುರುತು ಮಾಡಲಾಗಿದೆ. ಅಲ್ಲಿ ಸುಮಾರು 1 ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಮಣ್ಣಿನ ಗುಣಧರ್ಮ, ಕುಸಿತಕ್ಕೆ ಕಾರಣಗಳು ಮುಂತಾದ ಅಂಶಗಳನ್ನು ಅಧ್ಯಯನ ನಡೆಸಲು ಸಿದ್ಧತೆ ನಡೆಸಿದ್ದು, ಸೆಪ್ಟೆಂಬರ್‌ನಿಂದ ಅಧ್ಯಯ ಶುರುವಾಗುವ ಸಾಧ್ಯತೆ ಇದೆ.

    34 ಸೂಕ್ಷ್ಮ ಸ್ಥಳಗಳು:

    ಜಿಲ್ಲೆಯ 439 ಸ್ಥಳಗಳಲ್ಲಿ ಗುಡ್ಡ ಕುಸಿತ ಉಂಟಾಗುವ ಸಂಭವವಿದೆ ಎಂದು ಜಿಎಸ್‌ಐ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ. ಅದರಲ್ಲಿ ನಾಲ್ಕು ವಿಭಾಗ ಮಾಡಲಾಗಿದ್ದು, ಹೊನ್ನಾವರ, ಯಲ್ಲಾಪುರ ಸೇರಿ ಒಟ್ಟು 34 ಸ್ಥಳಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.
    ಉಳಿದಂತೆ ತಕ್ಷಣ ಜನವಸತಿ ಇರುವ ಸ್ಥಳಗಳಲ್ಲಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಜಿಐಎಸ್ ಪಟ್ಟಿ ಮಾಡಿದೆ. ತಕ್ಷಣ ಬಾಧಿತ ಸ್ಥಳಗಳಲ್ಲಿ ಜಿಎಸ್‌ಐ ಸೂಚಿಸಿದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಅಲ್ಲದೆ, ಉಳಿದಂತೆ ಹಲವು ಬಹು ವಾರ್ಷಿಕ ಯೋಜನೆಗಳಿದ್ದು, ಅವುಗಳಲ್ಲಿ ಭೂ ಕುಸಿತ ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ (ಅರಣ್ಯ, ಎನ್‌ಎಚ್‌ಎಐ, ಪಿಡಬ್ಲುಡಿ) ವಿಸ್ತ್ರರ ಯೋಜನಾ ವರದಿ ತಯಾರಿಸಿಕೊಡಲು ಪತ್ರ ಬರೆಯಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    15 ಸ್ಥಳಗಳ 416 ಜನ ಬಾಧಿತ

    ಭಟ್ಕಳದಲ್ಲಿ ಕೊಪ್ಪ ಮುಟ್ಟಳ್ಳಿಯಲ್ಲಿ 27 ಕುಟುಂಬಗಳ ಒಟ್ಟು 80 ಜನ, ಹೊನ್ನಾವರದ ಅಪ್ಸರಕೊಂಡ, ಬಳೆಮಠದಲ್ಲಿ 59 ಕುಟುಂಬದ 269 ಜನ, ಕಾರವಾರದ ಕೊಳಗೆ ಗ್ರಾಮದಲ್ಲಿ 2 ಕುಟುಂಬಗಳ 8 ಜನ, ಕುಮಟಾ ದೀವಗಿ ರಾಮನಗಿಂಡಿಯ 8 ಕುಟುಂಬಗಳ 26 ಜನ, ಸಿದ್ದಾಪುರ ತ್ಯಾಗ್ಲಿ ಹೆಗಡೆಮನೆಯ 5 ಕುಟುಂಬಗಳ 13 ಜನ, ಶಿರಸಿಯ ಜಾಜಿಗುಡ್ಡೆಯ 27 ಕುಟುಂಬಗಳ 35 ಜನ, ಯಲ್ಲಾಪುರ ಡಬ್ಗುಳಿಯ 22 ಕುಟುಂಬಗಳ ಸುಮಾರು 65 ಜನ ಗುಡ್ಡ ಕುಸಿತದಿಂದ ಬಾಧಿತವಾಗಲಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ.

    ಇದರಲ್ಲಿ ಕೆಲವು ಮನೆಗಳ ಮೇಲೆ ನೇರವಾಗಿ ಗುಡ್ಡ ಕುಸಿತ ಉಂಟಾಗುವ ಸ್ಥಳಗಳನ್ನು ಗುರುತಿಸಿ ಅಂಥ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ರಸ್ತೆ ಕುಸಿತ ಉಂಟಾಗಿ ಸಂಪರ್ಕ ಕಡಿತವಾಗುವ ಗ್ರಾಮಗಳೂ ಕೆಲವು ಇವೆ ಎಂದು ಜಿಲ್ಲೆಯ ವಿಪತ್ತು ನಿರ್ವಹಣಾ ಕೋಶದ ವರದಿ ಹೇಳಿದೆ.




    ಸದ್ಯ ನಾವು ಮಳೆಯ ಕಾರಣಕ್ಕೆ ಗುಡ್ಡ ಕುಸಿಯಬಹುದಾದ ಹಾಗೂ ಜನರಿಗೆ ತೊಂದರೆ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಸುರಕ್ಷತೆಯ ಕ್ರಮ ವಹಿಸಲಾಗಿದೆ. ಗುಡ್ಡ ಕುಸಿತಕ್ಕೆ ಕಾರಣಗಳ ಬಗ್ಗೆ ಜಿಎಸ್‌ಐ ವಿಸ್ತ್ರತ ವರದಿ ನೀಡಬೇಕಿದೆ.
    ಗಂಗುಬಾಯಿ ಮಾನಕರ್
    ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts