More

    ದ್ರಾಕ್ಷಿಗೆ ಬಂಪರ್, ರೇಷ್ಮೆ ಹೊರೆ ; ಅನ್‌ಲಾಕ್ ಬಳಿಕ ದ್ರಾಕ್ಷಿ ಬೆಲೆ ಕೆಜಿ 80-145 ರೂ.ಗೆ ಏರಿಕೆ, ಮಿಶ್ರತಳಿ ಗೂಡು 250-300 ರೂ.ಗೆ ಬಿಕರಿ

    ಚಿಕ್ಕಬಳ್ಳಾಪುರ : ಲಾಕ್‌ಡೌನ್ ಅವಧಿಯಲ್ಲಿ ಸೂಕ್ತ ಬೆಲೆ ಮತ್ತು ಬೇಡಿಕೆ ಇಲ್ಲದೆ ತೋಟದಲ್ಲೇ ಕೊಳೆತು ರೈತರ ಪಾಲಿಗೆ ಹುಳಿಯಾಗಿದ್ದ ದ್ರಾಕ್ಷಿಗೆ ಈಗ ಬಂಪರ್ ಬೆಲೆ ಬಂದಿದೆ. ಹಲವು ದಿನಗಳ ಬಳಿಕ ಬೆಲೆ ಏರಿಕೆಯಾಗಿದೆ. ಆದರೆ ಹವಾಮಾನ ವೈಪರಿತ್ಯದಿಂದಾಗಿ ರೇಷ್ಮೆಗೂಡಿನ ದರ ಕುಸಿತವಾಗಿ ನಿರ್ವಹಣೆ ವೆಚ್ಚವೂ ಕೈ ಸೇರದೆ ಬೆಳೆಗಾರರ ಕೈ ಸುಡುತ್ತಿದೆ.

    ಲಾಕ್‌ಡೌನ್ ನಲ್ಲಿ ಸರಿಯಾದ ಮಾರುಕಟ್ಟೆ ಹಾಗೂ ಸಾಗಣೆ ವೆಚ್ಚವೂ ಕೈ ಸೇರದ ಹಿನ್ನೆಲೆಯಲ್ಲಿ ರೈತರು ದ್ರಾಕ್ಷಿಯನ್ನು ತಿಪ್ಪೆಗೆ ಎಸೆದಿದ್ದರು. ಇದೀಗ ಬೆಲೆ ಹೆಚ್ಚಾಗಿದ್ದು, ವರ್ತಕರೇ ತೋಟಕ್ಕೆ ಬಂದು 1 ಕೆ.ಜಿ ಕನಿಷ್ಠ 80 ರಿಂದ 145 ರೂ. ನೀಡಿ ಖರೀದಿಸುತ್ತಿದ್ದಾರೆ.

    ತೋಟಗಾರಿಕೆ ಇಲಾಖೆ ಮತ್ತು ನುರಿತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕೆಲ ರೈತರು ಅನ್ ಸೀಜನ್‌ನಲ್ಲಿ ಗುಣಮಟ್ಟದ ದ್ರಾಕ್ಷಿ ಬೆಳೆದಿರುವುದು ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲದೆ ಈಶಾನ್ಯ ರಾಜ್ಯಗಳು, ನೇಪಾಳ, ಬಾಂಗ್ಲಾದೇಶ ಸೇರಿ ಇತರ ದೇಶಗಳಿಗೆ ರಫ್ತಾಗುತ್ತಿರುವುದು ಬೆಲೆ ಮತ್ತು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

    ಜಿಲ್ಲೆಯಲ್ಲಿ 2,500 ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ದಿಲ್‌ಖುಷ್, ಬೆಂಗಳೂರು ಬ್ಲೂ ತಳಿ ಹೆಸರುವಾಸಿ. ಇಲ್ಲಿನ ಬಹುತೇಕ ರೈತರು ದ್ರಾಕ್ಷಿ ಕೃಷಿಯನ್ನೇ ನೆಚ್ಚಿಕೊಂಡಿದ್ದು ಆಗಾಗ ಸ್ವಲ್ಪ ಪ್ರಮಾಣದ ನಷ್ಟದ ನಡುವೆಯೂ ಲಾಭ ಗಳಿಸಿದ್ದಾರೆ.

    ಫೆಬ್ರವರಿ, ಮಾರ್ಚ್‌ನಲ್ಲಿ ದ್ರಾಕ್ಷಿ ಕಟಿಂಗ್ ಮಾಡಿದ್ದ ತೋಟಗಳಲ್ಲಿ ಈಗ ಉತ್ತಮ ಬೆಳೆ ಬಂದಿದೆ. ಸಾಮಾನ್ಯವಾಗಿ ಒಂದು ಹೆಕ್ಟೇರ್‌ಗೆ 10ರಿಂದ 15ಟನ್ ಬೆಳೆಯಲಾಗುತ್ತದೆ. ಹಲವೆಡೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಒಂದೇ ಎಕರೆಯಲ್ಲಿ 5 ರಿಂದ 10 ಟನ್ ಬೆಳೆದಿರುವುದು ಕಳೆದ ಬಾರಿಗಿಂತಲೂ ಹೆಚ್ಚಿನ ಆದಾಯದ ಸಂತಸ ಬೆಳೆಗಾರರಲ್ಲಿ ಮೂಡಿದೆ.

    ರೇಷ್ಮೆಗೂಡಿಗೆ ಬೆಲೆ ಕುಸಿತ: ಕರೊನಾ ಸೋಂಕು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೇಷ್ಮೆಗೂಡಿನ ಗುಣಮಟ್ಟ ಮತ್ತು ಬೆಲೆ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣ, ಆಗಾಗ ಮಳೆಯಾಗುತ್ತಿರುವುದು ಗೂಡಿನ ಗುಣಮಟ್ಟ ಮತ್ತು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಶಿಡ್ಲಘಟ್ಟ, ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ರೇಷ್ಮೆ ಮಾರುಕಟ್ಟೆಗೆ ನಿತ್ಯ 35 ಟನ್ ಗೂಡು ಆವಕವಾಗುತ್ತಿದೆಯಾದರೂ ಸೂಕ್ತ ಬೆಲೆ ಇಲ್ಲವಾಗಿದೆ. ಈ ಹಿಂದೆ 370ರಿಂದ 420ರವರೆಗೆ ಮಾರಾಟವಾಗುತ್ತಿದ್ದ ಮಿಶ್ರತಳಿ ಗೂಡು ಪ್ರಸ್ತುತ 250 ರಿಂದ 300 ರೂ.ಗೆ ಬಿಕರಿಯಾಗುತ್ತಿದೆ. ಗೂಡಿನ ನಿರ್ವಹಣೆ ವೆಚ್ಚ ಹೆಚ್ಚಾಗಿದೆ, ಆದರೆ ಇದಕ್ಕೆ ಅನುಗುಣವಾಗಿ ದರ ಸಿಗುತ್ತಿಲ್ಲ ಎನ್ನುವುದು ಬೆಳೆಗಾರರ ಅಳಲು. ಇದರ ನಡುವೆ ಮಾರುಕಟ್ಟೆ ಸಮಸ್ಯೆ, ಹವಾಮಾನ ಬದಲಾವಣೆ, ಬೇಡಿಕೆ ಮತ್ತು ಬೆಲೆ ಕುಸಿತದಿಂದ ನಿರೀಕ್ಷೆಗೆ ತಕ್ಕಂತೆ ಆದಾಯ ಕೈ ಸೇರುತ್ತಿಲ್ಲ. 14,158 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ.

    ಹೆಚ್ಚಿನ ಪ್ರೋತ್ಸಾಹ ಅಗತ್ಯ: ಮಳೆ ಅಭಾವ, ಅಂತರ್ಜಲಮಟ್ಟ ಕುಸಿತ, ಕೊಳವೆಬಾವಿ ವೈಫಲ್ಯ, ನೀರಾವರಿ ಸೌಲಭ್ಯದ ಕೊರತೆಯ ನಡುವೆಯೂ ಬಯಲುಸೀಮೆ ಜಿಲ್ಲೆಯು ರೇಷ್ಮೆ, ಹಾಲು, ಹೂವು, ಹಣ್ಣು ತರಕಾರಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ರೈತರು ಅಲ್ಪಸ್ವಲ್ಪ ನೀರಿನಲ್ಲೇ ಬಂಗಾರದ ಬೆಳೆ ಬೆಳೆಯುತ್ತಿದ್ದು, ಗುಣಮಟ್ಟದ ದ್ರಾಕ್ಷಿ, ಗುಲಾಬಿ, ರೇಷ್ಮೆ ಸೇರಿ ನಾನಾ ಉತ್ಪನ್ನಗಳು ದೇಶ-ವಿದೇಶಗಳಿಗೆ ರಫ್ತಾಗುತ್ತವೆ. ಜಿಲ್ಲೆಯು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತಷ್ಟು ಪ್ರೋತ್ಸಾಹದಾಯಕ ವಿಶೇಷ ಕ್ರಮಗಳನ್ನು ಸರ್ಕಾರ ಕೈಗೊಂಡಾಗ ರೈತರಿಗೆ ಅನುಕೂಲವಾಗಲಿದೆ.

    5 ಎಕರೆ ಪ್ರದೇಶದದಲ್ಲಿ ರೆಡ್ ಗ್ಲೋಬ್ ತಳಿ ದ್ರಾಕ್ಷಿ ಬೆಳೆದಿದ್ದೇನೆ, ಈ ಬಾರಿ ಉತ್ತಮ ಇಳುವರಿ ಬಂದಿದೆ. ವರ್ತಕರು ತೋಟಕ್ಕೆ ಬಂದು 1 ಕೆ.ಜಿ ದ್ರಾಕ್ಷಿಗೆ 145 ರೂ. ನೀಡಿ ಖರೀದಿಸುತ್ತಿದ್ದಾರೆ.
    ಕೆ.ಆರ್.ರೆಡ್ಡಿ, ದ್ರಾಕ್ಷಿ ಬೆಳೆಗಾರ, ಅಜ್ಜವಾರ

    ಹವಾಮಾನ ಆಧಾರಿತ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಿರ್ದಿಷ್ಟ ಯೋಜನೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡಾಗ ಲಾಭ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ.
    ಆಂಜನೇಯರೆಡ್ಡಿ, ದ್ರಾಕ್ಷಿ ಬೆಳೆಗಾರ, ನಾಯನಹಳ್ಳಿ

    ಕಳೆದ ಒಂದೂವರೆ ತಿಂಗಳಿಂದ ಮೋಡ ಮುಸುಕಿದ ವಾತಾವರಣ ಇರುವುದರಿಂದ ರೇಷ್ಮೆಗೂಡು ಉತ್ಪಾದನೆಯ ಗುಣಮಟ್ಟ ಕುಸಿದು ಬೆಲೆ ಇಳಿಕೆಯಾಗಿದೆ. ಇದು ಪ್ರತಿ ಮಳೆಗಾಲದಲ್ಲೂ ಸಾಮಾನ್ಯ. ಮುಂಬರುವ ದಿನಗಳಲ್ಲಿ ಚೇತರಿಕೆಯ ನಿರೀಕ್ಷೆ ಇದೆ.
    ಭೈರಪ್ಪ, ಜಂಟಿ ನಿರ್ದೇಶಕ, ರೇಷ್ಮೆ ಇಲಾಖೆ

    ಮೊದಲೇ ಲಾಕ್‌ಡೌನ್ ಅವಧಿಯಲ್ಲಿ ಉತ್ಪನ್ನಗಳ ಬೆಲೆ ಕುಸಿದು ನಷ್ಟ ಅನುಭವಿಸಿದ್ದೇವೆ, ಇದೀಗ ರೇಷ್ಮೆಗೂಡು ದರ ಕಡಿಮೆಯಾಗಿ ನಿರ್ವಹಣೆ ವೆಚ್ಚವೂ ಸಹ ಸಿಗದಂತಾಗಿದೆ.
    ಆನಂದ್, ದ್ರಾಕ್ಷಿ ಬೆಳೆಗಾರ, ಶಿಡ್ಲಘಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts