More

    ಸರ್ಕಾರಿ ಆಸ್ಪತ್ರೆಗಳಲ್ಲಿ ತಾಂತ್ರಿಕ ಬಡತನ – ಕಾರ್ಪೋರೆಟ್ ಸಂಸ್ಥೆಗಳಿಂದ ಸಹಾಯ ಮಹಾಪೂರ

    |ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಕರೊನಾ ಸಾಂಕ್ರಾಮಿಕ ಎರಡನೇ ಅಲೆಯಲ್ಲಿ ಪರಿಸ್ಥಿತಿ ಕೈಮೀರಿದ ವೇಳೆ ವಿವಿಧ ದೇಶಗಳು, ಕಾರ್ಪೆರೇಟ್ ಕಂಪನಿಗಳು ರಾಜ್ಯದ ನೆರವಿಗೆ ನಿಂತವು. ಆರೋಗ್ಯ ವ್ಯವಸ್ಥೆ ಸುಧಾರಿಸಲು ಅಗತ್ಯವಾಗಿದ್ದ ವೆಂಟಿಲೇಟರ್ ಸೇರಿ ವಿವಿಧ ಆಧುನಿಕ ವೈದ್ಯಕೀಯ ಸಲಕರಣೆ ನೀಡಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವ ಹೊಣೆಗಾರಿಕೆ ಈಗ ಸರ್ಕಾರದ ಮೇಲಿದೆ.

    ಈ ಹಿಂದೆ ಪಿಎಂ ಕೇರ್ಸ್​ನಿಂದ ರಾಜ್ಯಕ್ಕೆ ಬಂದಿದ್ದ ವೆಂಟಿಲೇಟರ್​ಗಳನ್ನು ವಿವಿಧೆಡೆ ಸರಿಯಾಗಿ ಬಳಕೆ ಮಾಡಿಕೊಳ್ಳದೆ ಧೂಳು ಹಿಡಿದು ಕೂರುವುದಕ್ಕೆ ಕಾರಣವಾಗಿದ್ದು ಟೀಕೆಗೆ ಒಳಗಾಗಿತ್ತು. ಇದೀಗ ಮತ್ತೆ ಖಾಸಗಿ ಕ್ಷೇತ್ರ ಮತ್ತು ವಿವಿಧ ದೇಶಗಳಿಂದ ವೈದ್ಯಕೀಯ ಉಪಕರಣ ಬಂದಿದ್ದು, ಅವುಗಳನ್ನು ವ್ಯವಸ್ಥಿತವಾಗಿ ಕಾಪಿಟ್ಟುಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಈ ವೆಂಟಿಲೇಟರ್ ಸೇರಿ ವಿವಿಧ ಉಪಕರಣಗಳನ್ನು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಲು ಸರ್ಕಾರ ಆಸಕ್ತಿ ಹೊಂದಿದ್ದರೂ, ಅದನ್ನು ಬಳಕೆ ಮಾಡಬೇಕಾದ ತಾಂತ್ರಿಕ ಸಿಬ್ಬಂದಿ ಕೊರತೆ ಎದುರಾಗಿದೆ. ಅನೇಕ ಜಿಲ್ಲೆ ಆಸ್ಪತ್ರೆಗಳಲ್ಲೂ ಇದೇ ಸಮಸ್ಯೆ ಇದೆ.

    ಎನ್​ಜಿಒ, ಸಿಎಸ್​ಒ, ಸಿಎಸ್​ಆರ್ ಕಡೆಯಿಂದ ನೆರವು ಸ್ವೀಕರಿಸಲು, ಅವರಿಗೆ ಅಗತ್ಯ ಮಾಹಿತಿ ನೀಡಲು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಐಎಎಸ್ ಅಧಿಕಾರಿ ಉಮಾ ಮಹದೇವನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಲಭ್ಯ ಮಾಹಿತಿ ಪ್ರಕಾರ, ವಿವಿಧ ಮಾದರಿಯ 868 ವೆಂಟಿಲೇಟರ್​ಗಳು, ತುರ್ತು ಸಂದರ್ಭದಲ್ಲಿ ಬಳಸಬಹುದಾದ 6 ಸಾವಿರಕ್ಕೂ ಅಧಿಕ ವೆಂಟಿಲೇಟರ್​ಗಳು ಸರ್ಕಾರಕ್ಕೆ ಲಭ್ಯವಾಗಿವೆ. ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭ ನೆರವು ಸಿಕ್ಕಿದ್ದನ್ನು ಅವಶ್ಯಕತೆ ಇರುವ ಜಿಲ್ಲೆಗಳಿಗೆ ಕಳಿಸಿಕೊಡಲಾಗಿದೆ. ಇನ್ನುಳಿದಂತೆ ವೆಂಟಿಲೇಟರ್ ಹಾಗೂ ಅದಕ್ಕೆ ಸಂಬಂಧಪಟ್ಟ ಮಾನಿಟರ್​ಗಳು, ವಿವಿಧ ರೀತಿಯ ಉಪಕರಣ ಸರ್ಕಾರದ ಬಳಿ ಲಭ್ಯವಿದೆ.

    ಯಾರಿಂದ ನೆರವು ಸಿಕ್ಕಿದೆ?: ಅಮೆರಿಕೇರ್ ಫೌಂಡೇಶನ್, ಜೀವ್ ಇಂಟಿಯಾ, ಹನಿವೆಲ್ ಫೌಂಡೇಷನ್, ಪ್ಲಿಫ್​ಕಾರ್ಟ್, ಬ್ರಿಟಿಷ್ ಹೈಕಮೀಷನ್, ಬವೇರಿಯನ್ ಸರ್ಕಾರ, ಯುಎಸ್​ಎ ಪಿ2ಜಿ, ಕುವೈತ್, ಯುಎಇ ಎಂಬೆಸಿ, ಸೇಲ್ಸ್ ಫೋರ್ಸ್ ಯುಎಸ್​ಎ, ಸಿಂಗಾಪುರ, ಯುಎಸ್ ಏಡ್, ಯುಕೆ-ಬಿಒಸಿ, ಜೆಫ್ರಾಗ್, ಕ್ಯಾಪಿಟಲ್ ಹೋಪ್ ಫೌಂಡೇಷನ್, ಯುನಿಸೆಫ್ ಸೇರಿ ಹಲವು ಸಂಸ್ಥೆಗಳು ನೆರವು ನೀಡಿವೆ.

    ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲು ಸಿಎಂ ಯಡಿಯೂರಪ್ಪ ನೀಡಿದ ಕರೆಗೆ ಪೂರಕವಾಗಿ ಅನೇಕ ಕಂಪನಿಗಳು, ಸಂಘ, ಸಂಸ್ಥೆ, ಎನ್ ಜಿಒಗಳು ಮುಂದೆ ಬಂದು ದೇಣಿಗೆ ನೀಡಿವೆ. ಅನೇಕ ವೈದ್ಯಕೀಯ ಸಾಧನ, ಉಪಕರಣ ಕೊಡುಗೆಯಾಗಿ ಸಿಕ್ಕಿವೆ. ಇದನ್ನು ಬಳಸಲು ಎಲ್ಲ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಯಾವುದೇ ದೇಣಿಗೆ ವ್ಯರ್ಥವಾಗದಂತೆ ಎಚ್ಚರ ವಹಿಸಲಾಗಿದೆ ಎನ್ನುತ್ತಾರೆ ಆರೋಗ್ಯ ಸಚಿ  ಡಾ.ಕೆ.ಸುಧಾಕರ್.

    ಆಂಬುಲೆನ್ಸ್ ಮೇಲ್ದರ್ಜೆಗೆ: ತುರ್ತು ಬಳಕೆಗೆ ಬಳಸಬಹುದಾದ ವೆಂಟಿಲೇಟರ್ ಮತ್ತು ಮಾನಿಟರ್ ನೆರವಿನ ರೂಪದಲ್ಲಿ ಸರ್ಕಾರಕ್ಕೆ ಬಂದಿದೆ. ಅದನ್ನು ಆರೋಗ್ಯ ಇಲಾಖೆಯ ಅಂಬುಲೆನ್ಸ್​ನಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿಗೆ ಇದರ ಬಳಕೆ ಬಗ್ಗೆ ತರಬೇತಿ ನೀಡುವ ಮೂಲಕ ಆಂಬುಲೆನ್ಸ್ ಮೇಲ್ದರ್ಜೆಗೇರಿಸುವ ಉದ್ದೇಶವಿದೆ.

    ವೈವಿಧ್ಯತೆ ವೆಂಟಿಲೇಟರ್: ವೆಂಟಿಲೇಟರ್, ಐಸಿಯು ವೆಂಟಿಲೇಟರ್ ಸಲಿಸಾ 500, ಐಸಿಯು ಪ್ಯಾರಾ ಮಾನಿಟರ್, ಟ್ರೂಸ್ಕನ್ ಎಸ್500- ಪೇಶೆಂಟ್ ಮಾನಿಟರ್, ಕ್ಲಾಸ್ 1 ವೆಂಟಿಲೇಟರ್, ಮಲ್ಟಿಪಾರಾ ಮಾನಿಟರ್ ಕ್ಯಾಪ್ನೋಮೀಟರ್ ಅಲ್ಟಿಮಾ ಡಿ ಇಟಿಸಿಒ2ಎಸ್​ಎಸ್, ಜೆರಾಕ್ಸ್ ವೋರ್ಟ್ರಾನ್ ಮಾನಿಟರ್, ಜೆರಾಕ್ಸ್ ವೋರ್ಟ್ರಾನ್ ಸಿಂಗಲ್ ಯೂಸ್, ಸಿಪಿಎಪಿ, ಹೈ ಎಂಡ್, ಎನ್​ಐವಿ, ಅಡಲ್ಟ್, ಐಸಿಯು ವೆಂಟಿಲೇಟರ್​ಗಳು ರಾಜ್ಯಕ್ಕೆ ಕೊಡುಗೆಯಾಗಿ ಸಿಕ್ಕಿದೆ.

    ಬಗೆಬಗೆಯ ಉಪಕರಣ: ವೆಂಟಿಲೇಟರ್ ಜತೆ ಬೈಪ್ಯಾಪ್ ಮಷೀನ್, ಪೋರ್ಟಬಲ್ ಸಕ್ಷನ್, ಇನ್​ಫ್ಯೂಷನ್ ಪಂಪ್, ಯೂನಿವರ್ಸಲ್ ಪವರ್ ಅಡಾಪ್ಟರ್, ಯುವಿಸಿಸಿ 200 80 ವಿನ್(ಕ್ರಿಮಿಗಳನ್ನು ಕೊಲ್ಲುವ ಯುವಿ ಯಂತ್ರ), ಲಾರಿಂಗೋ ಸ್ಕೋಪ್​ನಂತಹ ವಿವಿಧ ಹೈಎಂಡ್ ಉಪಕರಣ ಸಹ ನೆರವಿನ ರೂಪದಲ್ಲಿ ಬಂದಿದೆ.

    ಪಿಎಚ್​ಸಿಗಳಿಗೆ ಕಾನ್ಸನ್​ಟ್ರೇಟರ್: ಎಲ್ಲ ಜಿಲ್ಲಾ ಹಾಗೂ 100ಕ್ಕೂ ಹೆಚ್ಚು ತಾಲೂಕು ಆಸ್ಪತ್ರೆಗಳಿಗೆ ಆಕ್ಸಿಜನ್ ಉತ್ಪಾದನಾ ಘಟಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ವೇಳೆ ನೆರವಿನ ರೂಪದಲ್ಲಿ ಸಿಕ್ಕಿರುವ ಹತ್ತಾರು ಸಾವಿರ ಕೃತಕ ಆಕ್ಸಿಜನ್ ಸರಬರಾಜು ಮಾಡುವ ಕಾನ್ಸನ್​ಟ್ರೇಟರ್​ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲಿ ಬಳಸಿಕೊಳ್ಳಲು ಸರ್ಕಾರ ಬಯಸಿದ್ದು, ಬಳಕೆ ಈ ಕುರಿತು ಯೋಜನೆ ರೂಪಿಸುತ್ತಿದೆ. 8 ಸಾವಿರ ಮಂದಿಗೆ ತರಬೇತಿಯನ್ನೂ ಯೋಜಿಸಿದೆ.

    36 ಸಾವಿರ ಗಡಿಯತ್ತ ಸಾವು: ರಾಜ್ಯದಲ್ಲಿ ಬುಧವಾರ ಚಿಕಿತ್ಸೆ ಫಲಿಸದೆ 45 ಕರೊನಾ ಸೋಂಕಿತರಲ್ಲಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 36 ಸಾವಿರ ಗಡಿ ತಲುಪಿದೆ. ಈವರೆಗೂ ಶೇ.1.25 ಮಂದಿ ಸೋಂಕಿನ ತೀವ್ರತೆಯಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಸೇರಿ 17 ಜಿಲ್ಲೆಗಳಲ್ಲಿ ಸಾವು ಸಂಭವಿಸಿದ್ದರೆ, 13 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಶೂನ್ಯವಿದೆ. ಕಳೆದ 24 ಗಂಟೆಗಳಲ್ಲಿ 1,990 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 28.76 ಲಕ್ಷ ಮೀರಿದೆ. 2,537 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 28.06 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33,642ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರು ನಗರ 400 (8 ಸಾವು), ದಕ್ಷಿಣ ಕನ್ನಡ 219 (6), ಮೈಸೂರು 211 (6), ಹಾಸನ 175 (2), ಬೆಳಗಾವಿ 140 (4) ಮತ್ತು ಉಡುಪಿ 120 ಪ್ರಕರಣಗಳು ವರದಿಯಾಗಿವೆ. 17 ಜಿಲ್ಲೆಗಳಲ್ಲಿ ಕೇಸ್​ಗಳ ಸಂಖ್ಯೆ ಎರಡಂಕಿಗೆ ಹಾಗೂ 6 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ.

    ಬೆಳಗಾವೀಲಿ ಡೆಲ್ಟಾ ಪ್ಲಸ್ ಆತಂಕ: ಬೆಳಗಾವಿ: ಮಹಾರಾಷ್ಟ್ರದಲ್ಲಿ ದಿನೇದಿನೆ ಕರೊನಾ ಡೆಲ್ಟಾ ಪ್ಲಸ್ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಬೆಳಗಾವಿ ಜಿಲ್ಲಾಡಳಿತ, ಜಿಲ್ಲೆ ಪ್ರವೇಶಿಸುವ ಹಾಗೂ ಇಲ್ಲಿಂದ ಅಲ್ಲಿಗೆ ಹೋಗುವ ಜನರಿಗೆ ಕರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.

    ಪ್ರತಿ ತಿಂಗಳು 60 ಲಕ್ಷ ಜನರಿಗೆ ಲಸಿಕೆ: ಕೇಂದ್ರ ಸರ್ಕಾರವು ಮಾಸಿಕ 60 ಲಕ್ಷ ಡೋಸ್ ಲಸಿಕೆ ಹಂಚುತ್ತಿದೆ. ಅಷ್ಟೂ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಲಸಿಕೆ ವಿತರಣೆ ವೇಗ ಹೆಚ್ಚಿಸಲೆಂದು ಲಸಿಕೆ ಕೋಟಾ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೆ, ಲಸಿಕೆ ಉತ್ಪಾದಿಸುವ ಕಂಪನಿಗಳಿಗೂ ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ವಿನಂತಿಸಲಾಗಿದೆ ಎಂದು ತಿಳಿಸಿದರು.

    ಸರ್ಕಾರದ ಮುಂದೆ ಸವಾಲು?: 1. ಲಭ್ಯ ವೆಂಟಿಲೇಟರ್​ಗಳನ್ನು ಬಳಸಿಕೊಳ್ಳಲು ಸರ್ಕಾರ ಜಿಲ್ಲೆ ಮತ್ತು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ತಾಂತ್ರಿಕತೆ ಹೆಚ್ಚಿಸಬೇಕಿದೆ.

    2. ಈಗಿರುವ ಸಿಬ್ಬಂದಿಗೆ ತುರ್ತಾಗಿ ತರಬೇತಿ ಆಯೋಜಿಸಬೇಕಿದೆ. ಇಲ್ಲವಾದರೆ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗಿದೆ.

    3. ಯಂತ್ರಗಳು ಬಳಕೆಯಾಗದ ಸಂದರ್ಭ ಧೂಳು ಹಿಡಿಯದಂತೆ ನೋಡಿಕೊಳ್ಳಲು ವಿಶೇಷ ಜವಾಬ್ದಾರಿ ನೀಡಬೇಕಾಗಿದೆ.

    4. ಕಾಲಕಾಲಕ್ಕೆ ಈ ಉಪಕರಣಗಳನ್ನು ಪರಿಶೀಲಿಸಿ ಸದಾ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಬೇಕಾಗಿದೆ.

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts