More

    ಇಡಿ ಸಿಬ್ಬಂದಿ ಮೇಲೆ ಹಲ್ಲೆ ಘಟನೆ ಕುರಿತು ಮಮತಾ ಸರ್ಕಾರಕ್ಕೆ ಖಡಕ್​ ಎಚ್ಚರಿಕೆ ನೀಡಿದ ರಾಜ್ಯಪಾಲ: ಏನಿದು ಪಡಿತರ ಹಗರಣ?

    ಕೊಲ್ಕತಾ: ಪಡಿತರ ವಿತರಣಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಉತ್ತರ 24 ಪರಗಣ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ನಾಯಕ ಷಹಜಹಾನ್ ಶೇಖ್ ಅವರ ನಿವಾಸದಲ್ಲಿ ದಾಳಿಗೆ ಮುಂದಾದ ಸಂದರ್ಭದಲ್ಲಿ ಶೇಖ್​ ಅವರ ಬೆಂಬಲಿಗರು ಕೆಲವು ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ವಾಹನಗಳನ್ನು ಹಾನಿಗೊಳಿಸಿದ್ದಾರೆ.

    ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಸದಸ್ಯರ ಮೇಲಿನ ದಾಳಿಯನ್ನು “ಘೋರ” ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಟೀಕಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ರಾಜ್ಯ ಮುಖ್ಯ ಕಾರ್ಯದರ್ಶಿ ಬಿ.ಪಿ.ಗೋಪಾಲಿಕಾ ಅವರನ್ನು ಕರೆಸಿ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಭ್ರಷ್ಟಾಚಾರದ ಪಡಿತರ ವಿತರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ 15 ಸ್ಥಳಗಳಲ್ಲಿ ಶೋಧದ ಭಾಗವಾಗಿ ಇಡಿ ಅಧಿಕಾರಿಗಳು ತೃಣಮೂಲ ನಾಯಕ ಶೇಖ್ ಸಾಜಹಾನ್ ಮನೆಯನ್ನು ಶೋಧಿಸಲು ಹೋಗಿದ್ದರು.

    ಶೇಖ್​ ಅವರ ಮನೆಗೆ ಬಂದ ಇಡಿ ಅಧಿಕಾರಿಗಳು ಹಾಗೂ ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯ ತೃಣಮೂಲ ನಿಷ್ಠಾವಂತರು ಸುತ್ತುವರಿದರು. ಹೀಗಾಗಿ, ಇಡಿ ಅಧಿಕಾರಿಗಳು ತಮ್ಮ ವಾಹನಗಳನ್ನು ಬಿಟ್ಟು ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತಲುಪಬೇಕಾಯಿತು.

    “ಈ ರೀತಿಯ ದಾಳಿಯು ಅಭೂತಪೂರ್ವವಾಗಿದೆ. ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಮ್ಮ ಅಧಿಕಾರಿಗಳು ಪ್ರದೇಶದಿಂದ ಪಲಾಯನ ಮಾಡಬೇಕಾಯಿತು. ನಮ್ಮ ಮತ್ತು ಕೇಂದ್ರ ಪಡೆಗಳ ವಾಹನಗಳಿಗೆ ಹಾನಿಯಾಗಿದೆ. ಕೇಂದ್ರ ಪಡೆಗಳ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಲಾಗಿದೆ” ಎಂದು ಇಡಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯಪಾಲ ಬೋಸ್, ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಯುವ ಏಕೈಕ ಜವಾಬ್ದಾರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.

    “ಬಂಗಾಳವು ಬನಾನಾ ಗಣರಾಜ್ಯವಲ್ಲ. ಹಿಂಸಾಚಾರವನ್ನು ತಡೆಗಟ್ಟುವ ಏಕೈಕ ಜವಾಬ್ದಾರಿ ಸರ್ಕಾರದ್ದಾಗಿದೆ. ಸರ್ಕಾರವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಅಥವಾ ಪರಿಣಾಮಗಳನ್ನು ಎದುರಿಸಬೇಕು” ಎಂದು ಬೋಸ್ ಎಚ್ಚರಿಕೆ ನೀಡಿದರು.

    “ಇದು (ಇ.ಡಿ. ತಂಡದ ಮೇಲೆ ದಾಳಿ) ಘೋರ ಘಟನೆಯಾಗಿದೆ. ಇದು ಆತಂಕಕಾರಿ ಮತ್ತು ಶೋಚನೀಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಸುಸಂಸ್ಕೃತ ಸರ್ಕಾರವು ಅನಾಗರಿಕತೆ ಮತ್ತು ವಿಧ್ವಂಸಕತೆ ನಿಲ್ಲಿಸಬೇಕು” ಎಂದು ಅವರು ಹೇಳಿದರು.

    ಬಂಗಾಳದಲ್ಲಿ “ಚುನಾವಣೆ ಪೂರ್ವ” ಹಿಂಸಾಚಾರ ಕೊನೆಗೊಳ್ಳಬೇಕು. ಸರ್ಕಾರವು ತನ್ನ ಮೂಲಭೂತ ಕರ್ತವ್ಯದಲ್ಲಿ ವಿಫಲವಾದರೆ, ಭಾರತದ ಸಂವಿಧಾನವು ತನ್ನ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಸೂಕ್ತ ಕ್ರಮಕ್ಕಾಗಿ ನನ್ನ ಎಲ್ಲಾ ಸಾಂವಿಧಾನಿಕ ಆಯ್ಕೆಗಳನ್ನು ನಾನು ಕಾಯ್ದಿರಿಸುತ್ತೇನೆ” ಎಂದು ಅವರು ಹೇಳಿದರು.

    ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. “ಭಯಾನಕ ಆಕ್ರಮಣಕಾರರು,” (sic) ಅವರು ಎಕ್ಸ್ ಸೋಷಿಯಲ್​ ಮೀಡಿಯಾದಲ್ಲಿ ಬರೆದಿದ್ದಾರೆ.

    ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ತಿಂಗಳುಗಳಿಂದ ದಾಳಿ ನಡೆಸುತ್ತಿದೆ. ತನಿಖಾ ಸಂಸ್ಥೆಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯ ಅಂದಾಜು 30 ಪ್ರತಿಶತ ಪಡಿತರವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಪಡಿತರ ಕಳ್ಳತನದಿಂದ ಉತ್ಪತ್ತಿಯಾದ ಅಪರಾಧದ ಆದಾಯವನ್ನು ಗಿರಣಿದಾರರು ಮತ್ತು ಪಿಡಿಎಸ್ ವಿತರಕರ ನಡುವೆ ಹಂಚಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

    ಜಪಾನ್​ನಲ್ಲಿದೆ ನಿರಾಶಾವಾದಿಗಳಿಗೊಂದು ರೆಸ್ಟೋರೆಂಟ್​: ಇಲ್ಲಿನ ಕಾಕ್‌ಟೇಲ್​ಗಳ ಹೆಸರು ಕೇಳಿದರೆ ಹುಚ್ಚು ಹಿಡಿಯಬಹುದು!!

    ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಔಷಧ: ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ

    15 ಭಾರತೀಯರಿರುವ ಸರಕು ಸಾಗಣೆ ಹಡಗು ಅಪಹರಣ: ನೆರವಿಗೆ ಯುದ್ಧ ನೌಕೆ ನಿಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts